ಗ್ರಾಮೀಣಾಭಿವೃದ್ಧಿ ಯೋಜನೆ ಉದ್ಘಾಟನೆ
ಲಿಂಗಸ್ಗೂರು: ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ 7 ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ 15 ವಿವಿಧ ಕಾರ್ಯಕ್ರಮಗಳ ಕೈಪಿಡಿ ಬಿಡುಗಡೆ ಮಾಡಲಾಯಿತು.
ಸ್ಥಳೀಯ ತಾಪಂ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಶನಿವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಉದ್ಘಾಟನೆ ಹಾಗೂ ಯೋಜನೆಗಳ ವಿವರ ಕುರಿತು ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೈಪಿಡಿ ಬಿಡುಗಡೆ: ಕಾರ್ಯಕ್ರಮದಲ್ಲಿ ಸರ್ಕಾರದ ನೂತನ ಯೋಜನೆಗಳಾದ ನಮ್ಮ ಹೊಲ ನಮ್ಮ ದಾರಿ, ಶುದ್ಧ ಕುಡಿವ ನೀರಿನ ಘಟಕ, ನಮ್ಮೂರ ಕೆರೆ, ರೈತರ ಕಣ, ಕುರಿ ದನದ ದೊಡ್ಡಿ, ಆಟದ ಮೈದಾನ, ಸ್ಮಾಶಾನ ಅಭಿವೃದ್ಧಿ, ನಮ್ಮ ಹಳ್ಳಿ ನಮ್ಮ ನೀರು, ಮನೆಗೊಂದು ಶೌಚಾಲಯ, ರಾಜೀವ್ಗಾಂಧಿ ಸೇವಾ ಕೇಂದ್ರ ಸೇರಿದಂತೆ ವಿವಿಧ ಯೋಜನೆಗಳ ಕೈಪಿಡಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಜಿಪಂ ಸದಸ್ಯ ಎಚ್.ಬಿ. ಮುರಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ, ತಾಪಂ ಉಪಾಧ್ಯಕ್ಷ ಮಾನಪ್ಪ ಚೌಹಾಣ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವೀರಭದ್ರಪ್ಪ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಬತ್ತ: ವೈಜ್ಞಾನಿಕ ಬೆಂಬೆಲೆ ನಿಗದಿಗೆ ಆಗ್ರಹ
ಸಿಂಧನೂರು: ಬತ್ತಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವಂತೆ ರೈತ ಮುಖಂಡ ಹಾಗೂ ಪುರಸಭೆ ಮಾಜಿ ಸದಸ್ಯ ಹುಸೇನ್ಬಾಷಾ ಕುಷ್ಟಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಸಚಿವ ಕೃಷ್ಣಬೈರೇಗೌಡ ಅವರನ್ನು ಒತ್ತಾಯಿಸಿದರು.
ಬತ್ತಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ನೀಡಲು ಒತ್ತಾಯಿಸಿ ಸೋಮವಾರ ನೂರಾರು ಕಾರ್ಯಕರ್ತರು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದರು. ಎ ಗ್ರೇಡ್ ಬತ್ತಕ್ಕೆ 1,345 ಬೆಂಬಲ ಬೆಲೆ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಒಂದು ಎಕರೆ ಬತ್ತದ ಸಾಗುವಳಿಗೆ ಟ್ರ್ಯಾಕ್ಟರ್, ಗೊಬ್ಬರ, ಕ್ರಿಮಿನಾಶಕ, ಬತ್ತ ನಾಟಿ, ಕಳೆ ಮತ್ತು ಕೊಯ್ಲಿಗೆ 35 ಸಾವಿರ ವೆಚ್ಚ ತಗುಲುತ್ತದೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿರುವ ಮಾನದಂಡ ಯಾವುದೆಂದು ಅವರು ಪ್ರಶ್ನಿಸಿದ್ದಾರೆ.
ಹಲವಾರು ಸಂಕಷ್ಟಗಳನ್ನು ಅನುಭವಿಸಿ ಬತ್ತ ಬೆಳೆದ ರೈತರಿಗೆ ಅನ್ಯಾಯ ಮಾಡದೆ ಕನಿಷ್ಠ 2,500 ವೈಜ್ಞಾನಿಕ ಬೆಂಬಲ ಬೆಲೆಯನ್ನು 10 ದಿನದೊಳಗೆ ಘೋಷಿಸಬೇಕು. ಇಲ್ಲದಿದ್ದರೆ 40ನೇ ವಿತರಣಾ ಕಾಲುವೆ ವ್ಯಾಪ್ತಿಯ ರೈತರೊಂದಿಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮನವಿ ಪತ್ರ ಕೊಡುವ ಸಂದರ್ಭದಲ್ಲಿ ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ಜೆಡಿಎಸ್ ಮುಖಂಡ ಟಿ.ಹನುಮಂತಪ್ಪ, ಶಾಮೀದ್ ಅಲಿ, ಹೊಳೆಯಪ್ಪ, ಶಾಂತಯ್ಯಸ್ವಾಮಿ, ಜಿಲಾನಿ ಪಟೇಲ್, ಇಮಾಮಸಾಬ, ನಿಜಲಿಂಗಪ್ಪ, ನಾಗಪ್ಪ ಗಾಳಿ, ಚಾಂದಪಾಶಾ ಮತ್ತಿತರರು ಭಾಗವಹಿಸಿದ್ದರು.