ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಜಾನಪದ ಗಾಯನ ಸ್ಪರ್ಧೆ

Srinivasa Murthy VN
Updated On : 11 Sept 2013, 10:34 am

ರಾಯಚೂರು: ಮಾನವಿಯ ರಾಷ್ಟ್ರಕವಿ ಕುವೆಂಪು ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸೆ.11ರಂದು ನಗರದ ಡಿಇಡಿ ಮತ್ತು ಬಿಇಡಿ ವಿದ್ಯಾರ್ಥಿಗಳಿಗೆ ಜಾನಪದ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ನಗರದ ಎಸ್‌ಆರ್‌ಕೆ ಶೈಕ್ಷಣಿಕ ಮಹಾವಿದ್ಯಾಲಯದಲ್ಲಿ ಅಂದು ಮಧ್ಯಾಹ್ನ 3ಕ್ಕೆ ಮಾಜಿ ಶಾಸಕ ಪಾಪಾರೆಡ್ಡಿ ಅವರು ಗಾಯನ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಟಾಗೋರ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್.ಕೆ. ಅಮರೇಶ್ ವಹಿಸುವರು. ಮುಖ್ಯ ಅತಿಥಿಗಳಾಗಿ ಕರಿಯಪ್ಪ ಮಾಸ್ತರ್, ಡಾ. ಲಿಂಗಣ್ಣ ಗಾಣದಾಳ, ಶರಣಪ್ಪ ಗೋನಾಳ, ಕಾಲೇಜಿನ ಪ್ರಾಚಾರ್ಯೆ ಆಶಾಪ್ರೇಮಲತಾ, ಮುರಳೀಧರ ಕುಲಕರ್ಣಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ಪ್ರತಿಷ್ಠಾನದ ಅಧ್ಯಕ್ಷ ರಾಮಚಂದ್ರಪ್ಪ ತಿಳಿಸಿದ್ದಾರೆ.

ನಗರಸಭೆ: ಇಂದು ಪದಗ್ರಹಣ
ಸಿಂಧನೂರು: ಸಿಂಧನೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸೈಯದ್ ಜಾಫರ್ ಜಾಗೀರದಾರ, ಲಕ್ಷ್ಮೀ ರಮೇಶ ಅವರು ಸೆ.11ರಂದು ಪದಗ್ರಹಣ ಸ್ವೀಕರಿಸುವರು ಎಂದು ನಗರಸಭೆ ಪೌರಾಯುಕ್ತ ನಾಸೀರ್ ಅಲಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾರ್ಯಕ್ರಮಕ್ಕೆ ನಗರಸಭಾ ಸದಸ್ಯರು, ಸಿಬ್ಬಂದಿ ತಪ್ಪದೇ ಪಾಲ್ಗೊಳ್ಳಬೇಕು ಎಂದು ವಿನಂತಿಸಿದ್ದಾರೆ.

ಎನ್‌ಆರ್‌ಇಜಿ ತರಬೇತಿ ಯಶಸ್ವಿ
ರಾಯಚೂರು: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಮಾನವ ಸಂಪನ್ಮೂಲ ಇಲಾಖೆಯ ಮೂಲಕ ಹೊರಗುತ್ತಿಗೆ ಆಧಾರದಲ್ಲಿ 36 ಜನ ಸಿವಿಲ್ ಡಿಪ್ಲೋಮಾ ಪದವೀಧರರಿಗೆ ಇತ್ತೀಚೆಗೆ 12 ದಿನಗಳ ತರಬೇತಿ ಆಯೋಜಿಸಲಾಗಿತ್ತು. ರಾಯಚೂರು ಮತ್ತು ದೇವದುರ್ಗ ತಾಲೂಕಿನ 4 ಗ್ರಾಪಂ.ಗಳಲ್ಲಿ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಗಳನ್ನು ವೀಕ್ಷಿಸಲಾಯಿತು. ಜಿಪಂ ಸಿಇಒ ಡಾ. ಮುದ್ದುಮೋಹನ್ ಅವರು ತರಬೇತಿ ವೇಳೆ ಮಾತನಾಡಿ, ಮಹಾತ್ವಾಂಕ್ಷೆಯ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಲು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಒಕ್ಕೂಟದಿಂದ ನಾಳೆ ಧರಣಿ
ಸಿಂಧನೂರು: ಹಾಸ್ಟೆಲ್‌ಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಇನ್ನಿತರ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಸಿಂಧನೂರು ತಾಲೂಕು ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಒಕ್ಕೂಟದಿಂದ ಸೆ.12ರಂದು ತಾಪಂ ಆವರಣದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟ ತಿಳಿಸಿದೆ.ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಶೋಚನೀಯ ಜೀವನ ನಡೆಸುತ್ತಿದ್ದರೂ ಯಾರೊಬ್ಬರು ಕಾಳಜಿ ವಹಿಸುತ್ತಿಲ್ಲ. ವಾಸಕ್ಕೆ ಸುಸಜ್ಜಿತ ಕೊಠಡಿಗಳಿಲ್ಲ. ಗುಣಮಟ್ಟದ ಆಹಾರ, ಶುದ್ಧ ಕುಡಿವ ನೀರು ಕನಸಾಗಿವೆ. ವಿದ್ಯಾರ್ಥಿಗಳು ನಿತ್ಯವೂ ಅನಾರೋಗ್ಯದಿಂದ ನರಳುತ್ತಿದ್ದರೂ ಯಾವೊಬ್ಬ ಅಧಿಕಾರಿಗಳೂ ತಪಾಸಣೆಗೆ ಕ್ರಮ ಕೈಗೊಂಡಿಲ್ಲ. ನಿಜಕ್ಕೂ ಇದು ಖೇದಕರ ಸಂಗತಿ ಎಂದು ಮನುಜಮತ ಬಳಗದ ಉಪಾಧ್ಯಕ್ಷ ವೆಂಕನಗೌಡ ಗದ್ರಟಗಿ ತಿಳಿಸಿದ್ದಾರೆ.
ಮನವಿಗೆ ಕ್ಯಾರೇ ಎನ್ನುತ್ತಿಲ್ಲ: ತಾಲೂಕಿನ ಹಾಸ್ಟೆಲ್‌ನಲ್ಲಿ ಸಮರ್ಪಕ ಕುಡಿವ ನೀರಿನ ಸೌಲಭ್ಯವಿಲ್ಲ. ಸೋರುತ್ತಿರುವ ಕೊಠಡಿಗಳು, ಗ್ರಂಥಾಲಯ, ಕಂಪ್ಯೂಟರ್ ಇನ್ನಿತರ ಅವಶ್ಯ ಹಾಗೂ ವಿದ್ಯಾಭ್ಯಾಸಕ್ಕೆ ಪೂರಕ ಸೌಲಭ್ಯ ಕಲ್ಪಿಸುವತ್ತ ಗಮನ ಹರಿಸುತ್ತಿಲ್ಲ. ವಿದ್ಯಾರ್ಥಿಗಳು ಹತ್ತಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.

ರಾಷ್ಟ್ರಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ
ರಾಯಚೂರು: ಅಂಗವಿಕಲರ ಕಲ್ಯಾಣಕ್ಕಾಗಿ ವಿಶೇಷ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿಕೆಗೆ ಅರ್ಜಿ ಆಹ್ವಾನಿಸಲಾಗಿದೆ. ವಿಕಲಚೇತನ ಹೊಂದಿದ ಶ್ರೇಷ್ಠ ನೌಕರರು, ಶ್ರೇಷ್ಠ ಉದ್ಯೋಗದಾತರು, ವಿಕಲಚೇತನರಿಗೆ ಕೆಲಸ ಮಾಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆ, ವೆಬ್‌ಸೈಟ್‌ನಲ್ಲಿ ಅರ್ಜಿ ಪಡೆದು ವ್ಯಕ್ತಿಗತ ವಿವರದ ಸಾರಾಂಶ, ಉದಾಹರಣೆ ಸಾಮಗ್ರಿ ಮಾದರಿ, ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಪೂಜಿ ಪ್ರೌಡಶಾಲೆ ಹತ್ತಿರ, ಸಿಯಾತಲಾಬ್, ರಾಯಚೂರು ಇವರಿಗೆ ಸೆ.16ರೊಳಗೆ ಸಲ್ಲಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement