ರಂಗಮಂದಿರ ಕಾಮಗಾರಿ ನೆನೆಗುದಿಗೆ
ಸಿಂಧನೂರು: ನಗರದ ಸುಕಾಲಪೇಟೆ ರಸ್ತೆಯಲ್ಲಿ ಆರಂಭಗೊಂಡಿರುವ ರಂಗಮಂದಿರದ ಕಟ್ಟಡ ಎರಡು ವರ್ಷ ಕಳೆದರೂ ಮೇಲೆದ್ದಿಲ್ಲ. ಈ ಬಗ್ಗೆ ರಂಗಾಸಕ್ತರಿಗೆ ನಿರಾಸೆ ಮೂಡಿಸಿದೆ. ರಂಗಮಂದಿರದ ಕಟ್ಟಡ ಪುನಃ ಆರಂಭವಾಗುವುದು ಯಾವಾಗ ಎಂದು ರಂಗಾಸಕ್ತರು ಪ್ರಶ್ನಿಸುತ್ತಿದ್ದಾರೆ.
ರಂಗಾಸಕ್ತರ ಒತ್ತಾಯದ ಮೇರೆಗೆ ರಂಗಮಂದಿರ ನಿರ್ಮಾಣಕ್ಕೆ ಮಾಜಿ ಶಾಸಕರ, ಸಂಸದರ ನೇತೃತ್ವದಲ್ಲಿ ಆ.15, 2011ರಂದು ಚಾಲನೆ ದೊರೆಯಿತು.
ಈ ಕಾಮಗಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 20 ಲಕ್ಷ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ಮತ್ತು ಶಾಸಕರ ಅನುದಾನದಲ್ಲಿ 28 ಲಕ್ಷ ಸೇರಿದಂತೆ ಒಟ್ಟು 48 ಲಕ್ಷ ಹಣ ಜಿಲ್ಲಾಧಿಕಾರಿಗಳು ಹಾಗೂ ಕ್ಯಾಶುಟೆಕ್ ಬಿಲ್ಡಿಂಗ್ ಸೆಂಟರ್ ಖಾತೆಗೆ ಅನುದಾನ ಜಮಾ ಆಗಿ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ವಹಿಸಿದ್ದರು.
ಕಾಮಗಾರಿ ಸ್ಥಗಿತ: ಈ ಕಾಮಗಾರಿಗಾಗಿ ಒಟ್ಟು 1,34,34,830 ಅಂದಾಜು ಪಟ್ಟಿಯನ್ನು ತಯಾರಿಸಿ ಕಾಮಗಾರಿಯನ್ನು ಆ.15, 2011ರಂದು ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ಚುರುಕಿನಿಂದ ಆರಂಭಗೊಂಡ ಕೆಲಸ ನಂತರ ನಿಧಾನಗತಿ ಪಡೆದು ಕೊನೆಗೆ ನಿಂತೇ ಹೋಗಿದೆ. ಕಾಮಗಾರಿ ಪ್ರಾರಂಭಿಸಿ ಆ.15ಕ್ಕೆ ಎರಡು ವರ್ಷವಾಗಿದ್ದರೂ ಕೆಲಸ ಮುಂದುವರಿಯುವ ಲಕ್ಷಣಗಳು ಕಂಡುಬರುತ್ತಿಲ್ಲ.
ಕೆಲವು ಸಂಘಟನೆಗಳಿಂದ ನಿರಂತರ ಒತ್ತಡ ಇದ್ದರೂ ಕೆಲಸ ಪ್ರಾರಂಭವಾಗದಿರುವುದು ಸಿಂಧನೂರಿನ ಜನತೆಗೆ ಹತ್ತರಲ್ಲಿ ಹನ್ನೊಂದು ಎಂಬಂತಾಗಿದೆ. ಇದೆಲ್ಲದರ ಮಧ್ಯೆ ಶಾಸಕ ಹಂಪನಗೌಡ ಬಾದರ್ಲಿ ಇತ್ತ ಕಡೆ ಇನ್ನೂ ಗಮನ ಹರಿಸಿಲ್ಲ.
ಸರ್ಕಾರಿ ಜಾಗ ರಕ್ಷಿಸಿ: ಈ ಮಧ್ಯೆ ಕೆಲ ಖಾಸಗಿಯವರು ಡಬ್ಬಾ ಅಂಗಡಿಗಳನ್ನು ಇಡುತ್ತಿದ್ದಾರೆ. ಕೂಡಲೇ ನಗರಸಭೆ ಹಾಗೂ ತಾಲೂಕು ದಂಡಾಧಿಕಾರಿಗಳು ಡಬ್ಬಿಗಳನ್ನು ತೆಗೆಯಿಸಿ ಸರ್ಕಾರಿ ಜಾಗವನ್ನು ಕಾಪಾಡಬೇಕು. ಶಾಸಕರು ಈ ಕಡೆ ಗಮನಹರಿಸಿ ಕೂಡಲೇ ಕಾಮಗಾರಿಗೆ ಚಾಲನೆ ನೀಡಬೇಕೆಂದು ರಂಗ ಕಲಾವಿದರಾದ ಹುಸೇನಪ್ಪ, ಅಬ್ಬಾಸಲಿ, ಹವ್ಯಾಸಿ ಕಲಾವಿದರಾದ ಎಚ್.ರಾಮನಗೌಡ, ಆರ್.ಮಲ್ಲಯ್ಯ, ವೆಂಕಣ್ಣಾಚಾರ್ಯ ದೋಟಿಹಾಳ ಮತ್ತಿತರರು ಮನವಿ ಮಾಡಿದ್ದಾರೆ.