ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಸತಿರಹಿತರಿಗೆ ನಿವೇಶನ ಮಂಜೂರಾತಿ ವಿಳಂಬ

Srinivasa Murthy VN
Updated On : 11 Sept 2013, 10:33 am

ಕ.ಪ್ರ. ವಾರ್ತೆ  ರಾಯಚೂರು  ಸೆ.10
ಕಳೆದ ಸರ್ಕಾರದ ರೀತಿಯಲ್ಲಿಯೇ ಸದ್ಯದ ಕಾಂಗ್ರೆಸ್ ಸರ್ಕಾರವೂ ಸಹ ವಸತಿರಹಿತರಿಗೆ ನಿವೇಶನ, ಸರ್ಕಾರಿ ಭೂಮಿಯ ಸಾಗುವಳಿ ಹಕ್ಕುಪತ್ರ ನೀಡಿಕೆಯಂಥ ಬೇಡಿಕೆ ಈಡೇರಿಸುವಲ್ಲಿ ವಿಳಂಬ ಮಾಡುತ್ತಿದೆ. ಸರ್ಕಾರದ ತಾತ್ಸಾರ ವಿರೋಧಿಸಿ ಸೆ.30ರಿಂದ ರಾಜ್ಯಾದ್ಯಂತ ಅನಿರ್ದಿಷ್ಟ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ ಹೇಳಿದರು.
ಅವರು ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಅಕ್ರಮ ಸಕ್ರಮ ಮಸೂದೆ ಜಾರಿಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ರಾಜ್ಯದಲ್ಲಿನ ವಸತಿಹೀನರ ಸಮಸ್ಯೆ ಸರ್ಕಾರದ ಈ ಮಸೂದೆ ಜಾರಿಯಿಂದ ಸಾಧ್ಯವಾಗದು. ವಸತಿಹೀನರು ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಿವೇಶನಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದು, ಕಡತಗಳಿಗೆ ಮುಕ್ತಿ ದೊರೆತಿಲ್ಲ ಎಂದು ಆರೋಪಿಸಿದರು.
ಬಾಡಿಗೆ ಮನೆ ವಾಸ: ರಾಜ್ಯದ ನಗರ, ಪಟ್ಟಣ ಪ್ರದೇಶದಲ್ಲಿಯಂತೆಯೇ ಗ್ರಾಮೀಣ ಭಾಗದಲ್ಲಿಯೂ ಬಹುತೇಕರು ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದಾರೆ. ಸ್ವಂತ ಮನೆಯ ಕನಸು ನನಸಾಗಿಲ್ಲ. ಕುಟುಂಬದ ಸದಸ್ಯರ ಸಂಖ್ಯೆಯು ಹೆಚ್ಚಿದ್ದರೂ ಒಂದೇ ಮನೆಯಲ್ಲಿ ವಾಸವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಬಂಡವಾಳಶಾಹಿಗಳಿಗೆ ಜಮೀನು ಒದಗಿಸಲು ರಾಜ್ಯ ಸರ್ಕಾರ ಅತ್ಯಾಸಕ್ತಿ ತೋರುತ್ತಿದೆ.
  ಆದರೆ ಭೂಮಿ ಹಾಗೂ ವಸತಿಹೀನರಿಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರೆ, ಅಂಥವರಿಗೆ ನೀಡಲು ಜಮೀನಿಲ್ಲ ಎಂಬ ಮಾತು ಸರ್ಕಾರದಿಂದ ಕೇಳಿ ಬರುತ್ತಿದೆ.
ರಾಜ್ಯ ಸರ್ಕಾರ ಕೂಡಲೇ ವಸತಿಹೀನರಿಗೆ ವಸತಿ ಸೌಲಭ್ಯ ಕಲ್ಪಿಸುವಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಕಳೆದ ಅನೇಕ ದಶಕಗಳಿಂದ ಸರ್ಕಾರಿ ಜಮೀನಿನಲ್ಲಿ ಕೃಷಿ ಕಾರ್ಯ ನಡೆಸಿದ್ದು, ಜಮೀನಿನ ಪಟ್ಟಾ ವಿತರಿಸುವಂತೆ ಆಗ್ರಹಿಸಿ ಅನೇಕ ಸಾರಿ ಹೋರಾಟ ನಡೆಸಿದ್ದಾರೆ. ಅಗತ್ಯ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ರಾಯಚೂರು ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರಣ್ಯ ಜಮೀನಿನ ಒತ್ತುವರಿಯ ನೆಪದಲ್ಲಿ ಕೃಷಿ ಸಾಗುವಳಿ ಮಾಡಿಕೊಂಡಿದ್ದ, ನೂರಾರು ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ಮಾಡಲಾಗುತ್ತಿದೆ. ಸರ್ಕಾರದ ಇಂಥ ನಿರ್ಧಾರದಿಂದ ರೈತರು ತಲೆ ತಲಾಂತರದಿಂದ ನಡೆಸಿಕೊಂಡು ಬಂದ ಸಾಗುವಳಿ ಪದ್ಧತಿಗೆ ಹಿನ್ನಡೆಯಾಗಿದೆ ಎಂದು ದೂರಿದರು.
ವರದಿ ಅಡ್ಡಿ: ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿದವರಿಗೆ ಪಟ್ಟಾ ದಾಖಲೆ ನೀಡಲು ಸರ್ಕಾರ ನೇಮಿಸಿದ ಎ.ಟಿ. ರಾಮಸ್ವಾಮಿ, ಡಾ. ಬಾಲಸುಬ್ರಮಣ್ಯಂ ಕಾರ್ಯಪಡೆ ವರದಿ ಅಡ್ಡಿಯಾಗುತ್ತದೆ ಎಂದು ಹೇಳುವ ಮೂಲಕ ಸರ್ಕಾರ ಸಲ್ಲಿಕೆಯಾಗಿರುವ ಲಕ್ಷಾಂತರ ಸಂಖ್ಯೆಯ ಅರ್ಜಿದಾರರಿಗೆ ಕುಂಟು ನೆಪವೊಡ್ಡುತ್ತಿದೆ ಎಂದು ದೂರಿದರು. ಸರ್ಕಾರ ಈ ನಿಟ್ಟಿನಲ್ಲಿ ತೋರುತ್ತಿರುವ ವಿಳಂಬ ನೀತಿ ಖಂಡಿಸಿ ಸೆ. 30ರಿಂದ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಅನಿರ್ದಿಷ್ಟ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ, ಕೆ.ಜಿ. ವೀರೇಶ, ಗೋವಿಂದ ನಾಯಕ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement