ಸಂಕಷ್ಟ ನಿವಾರಕನಿಗೆ ಭಕ್ತಿಯ ಮೆರಗು
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಸೆ.10
ತಾಲೂಕಿನ ಲಿಂಗಸ್ಗೂರು, ಮಸ್ಕಿ, ಮುದಗಲ್, ಗುರುಗುಂಟಾ, ಆನೆಹೊಸೂರು, ಹಟ್ಟಿ ಚಿನ್ನದಗಣಿ ಸೇರಿದಂತೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಬಹುತೇಕ ಮನೆ ಮನೆಗಳಲ್ಲಿ ಸೋಮವಾರ ಒಂದು ದಿನ ಹಾಗೂ ಸಂಘ, ಸಂಸ್ಥೆಗಳಿಂದ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಸ್ವಾಮಿ ವಿವೇಕಾನಂದ ಸಂಘದಿಂದ ಬಸ್ ನಿಲ್ದಾಣ ಎದುರುಗಡೆ, ವಾಸವಿ ಯುವಕ ಸಂಘದಿಂದ ಹನುಮಾನ ಚೌಕ್ ಹತ್ತಿರ, ದೊಡ್ಡ ಹನುಮಂತ ದೇವರ ದೇವಸ್ಥಾನ ಬಳಿ, ವರ್ತಕರು ಎಪಿಎಂಸಿ ಪ್ರಾಂಗಣದಲ್ಲಿ, ಆಜಾದ್ ನಗರ, ಗ್ಯಾರೇಜ್ ಅಂಗಡಿ ಯುವಕರು ಅಮರೇಗೌಡ ಮಕ್ಕಳ ಆಸ್ಪತ್ರೆ ಹತ್ತಿರ, ಕರ್ನಾಟಕ ಬ್ಯಾಂಕ್ ಎದುರುಗಡೆ ಸೇರಿದಂತೆ ಪ್ರಮುಖ ವಾರ್ಡುಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಅರ್ಜುನನ ರೂಪದಲ್ಲಿ ಗಣೇಶ: ಲಿಂಗಸ್ಗೂರು ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಸಂಘದಿಂದ ಪ್ರತಿಷ್ಠಾಪಿಸಿದ ಗಣೇಶ, ಯುದ್ಧಕ್ಕೆ ಸಿದ್ಧನಾದ ಅರ್ಜುನನ ರೂಪದಲ್ಲಿ ಪಂಚ ಅಶ್ವಗಳ ರಥದಲ್ಲಿ ಆಸೀನನಾಗಿದ್ದರೆ, ಕೃಷ್ಣ ಆತನಿಗೆ ಸಾರಥಿಯಾಗಿದ್ದಾನೆ. ಆಂಜನೇಯ ರಥವನ್ನೇರಿ ಕುಳಿತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯಿತು.
ಇನ್ನು ಗ್ಯಾರೇಜ್ ಯುವಕರು ಗಜಾನನ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಹಂಸ ಪಕ್ಷಿಯ ಮೇಲೆ ಆಸೀನನಾಗಿದ್ದಾನೆ. ಅದೇ ರೀತಿ ವಿವಿಧ ಸಂಘ- ಸಂಸ್ಥೆಗಳಿಂದ ನಾನಾ ವೃತ್ತಗಳಲ್ಲಿ ಪ್ರತಿಷ್ಠಾಪಿಸಿದ ವಿವಿಧ ರೂಪದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಧಾರ್ಮಿಕ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಮೂಷಿಕವಾಹನಿಗೆ ನೈವೇದ್ಯ: ತಾಲೂಕಿನಾದ್ಯಂತ ಗಣೇಶ ಚತುರ್ಥಿ ಅಂಗವಾಗಿ ಮಕ್ಕಳು ಸೇರಿದಂತೆ ಸಂಕಷ್ಟಹರನು ಸೂಸಲು ಪ್ರೀಯವೆಂದು ಒಂದು ಬಗೆಯ ಕಡುಬು, ಬಿಲ್ವಪತ್ರಿ, ಗರಿಕೆ, ಉತ್ರಾಣಿ ಕಡ್ಡಿ, ವೀಳ್ಯದ ಎಲೆ ಹಾಗೂ ಹಲವು ಬಗೆಯ ಭಕ್ಷ್ಯ, ಚಕ್ಕುಲಿ, ಉಂಡೆ, ಸುಕ್ಕೆ, ಪೋಡಿ, ಸಿಹಿಸಾರು ಸೇರಿದಂತೆ ನಾನಾ ರೀತಿಯ ಭಕ್ಷ್ಯ ಭೋಜನ ತಯಾರಿಸಿ ಮೂಷಿಕ ವಾಹನನಿಗೆ ನೈವೇದ್ಯ ಅರ್ಪಿಸಿದರು.
ಈ ಮೂಲಕ ದೈನಂದಿನ ಬದುಕಿನಲ್ಲಿ ಜರುಗುವ ತಪ್ಪು ತಡೆಗಳನ್ನು ಮನ್ನಿಸಿ ಒಳ್ಳೆಯ ವಿದ್ಯೆ, ಬುದ್ಧಿ ನೀಡುವಂತೆ 5ರಿಂದ 21 ಅಣ್ಣೆ ಕೂಡುವ ದೃಶ್ಯ ಸಾಮಾನ್ಯವಾಗಿತ್ತು.
ಗೌರಿಪುತ್ರನನ್ನು ಸಡಗರದಿಂದ ಕರೆತಂದು 1ರಿಂದ 11 ದಿನಗಳವರೆಗೆ ಪ್ರತಿಷ್ಠಾಪಿಸಿ ಅಷ್ಟೇ ಸಂಭ್ರಮದಿಂದ ವಿಸರ್ಜನೆ ಮಾಡಲಾಗುತ್ತದೆ. ಈ ಮಧ್ಯೆ ಪ್ರತಿನಿತ್ಯ ಭಜನೆ, ರಸಮಂಜರಿ, ಶಾಲಾ ಮಕ್ಕಳಿಂದ ನೃತ್ಯ ಸೇರಿದಂತೆ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ.
ಭಾರಿವಾಹನ ಸಂಚಾರ ನಿಷೇಧ
ರಾಯಚೂರು: ನಗರದಲ್ಲಿ ವಿವಿಧ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಾಗಿದ್ದು, ಸಾರ್ವಜನಿಕರ ಸಂಚಾರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ನಗರದ ವಿವಿಧ ರಸ್ತೆಗಳಲ್ಲಿ ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ನಗರದ ಬಿಆರ್ಬಿ ಸರ್ಕಲ್, ಆಶೋಕ್ ಡಿಪೋ, ತೀನ್ ಕಂದೀಲ್, ಜಾಕೀರ ಹುಸೇನ್ ಸರ್ಕಲ್ದಿಂದ ಅಂಬೇಡ್ಕರ್ ಸರ್ಕಲ್ವರೆಗೆ ಮತ್ತು ತೀನ್ಕಂದೀಲ್ ಸರ್ಕಲ್, ಬಟ್ಟೆ ಬಜಾರ್, ಹರಿಹರ ರೋಡ್, ಚಂದ್ರಮೌಳೇಶ್ವರ ಸರ್ಕಲ್ನಿಂದ ಪಟೇಲ್ ರಸ್ತೆ ನೇತಾಜಿ ಸರ್ಕಲ್, ಸರಾಫ್ ಬಜಾರ್, ಹನುಮಾನ್ ಟಾಕೀಸ್ ಸರ್ಕಲ್ದಿಂದ ಬಿಆರ್ಬಿ ಸರ್ಕಲ್ವರೆಗೆ ಸೆ.10ರಿಂದ ಸೆ.20ರವರೆಗೆ ಭಾರಿ ಸರಕು ಹೊತ್ತು ವಾಹನಗಳು ನಗರ ಪ್ರವೇಶಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶಿಸಿದ್ದಾರೆ.
ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ
ರಾಯಚೂರು: ಜಿಲ್ಲಾದ್ಯಂತ ಸಾಮೂಹಿಕ ಶ್ರೀಗಣೇಶ ವಿಗ್ರಹಗಳ ವಿಸರ್ಜನೆ ಹಿನ್ನೆಲೆಯಲ್ಲಿ ವಿವಿಧ ದಿನಾಂಕಗಳಂದು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶ ಹೊರಡಿಸಿದ್ದಾರೆ.
ಗಣೇಶೋತ್ಸವದ ವೇಳೆ ಹಾಗೂ ಗಣೇಶ ವಿಗ್ರಹಗಳ ವಿಸರ್ಜನೆ ವೇಳೆ ಜಿಲ್ಲಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಿಸಿದ್ದು, ಸೆ.11ರ ಬೆಳಗ್ಗೆ 6 ರಿಂದ ಸೆ.12ರ ಬೆಳಗಿನ 6ರವರೆಗೆ ಸೆ.13ರ ಬೆಳಗಿನ 6ರಿಂದ ಸೆ.14ರ ಬೆಳಗಿನ 6 ರವರೆಗೆ, ಸೆ.15ರಂದು ಬೆಳಗಿನ 6ರಿಂದಸೆ.16ರವರೆಗೆ ಹಾಗೂ ಸೆ.17ರ ಬೆಳಗಿನ 6ರಿಂದ ಸೆ.18ರ 6ರವರೆಗೆ ಮತ್ತು ಸೆ.19ರ ಬೆಳಗ್ಗೆ 6ರಿಂದ ಸೆ.20ರ ಬೆಳಗ್ಗೆ 6ರವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟದ ಅಂಗಡಿಗಳು ಮುಚ್ಚಬೇಕು. ಮದ್ಯದ ಮಾರಾಟ ಮತ್ತು ಸಾಗಣೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಅಮರಾಪುರದಲ್ಲಿ ಡೆಂಘೀ ಜನಜಾಗೃತಿ
ಸಿಂಧನೂರು: ತಾಲೂಕಿನ ಅಮರಾಪುರದಲ್ಲಿ ಸಾರ್ವಜನಿಕರಿಗೆ ಶಂಕಿತ ಡೆಂಘೀ ಜ್ವರ ಪ್ರಕರಣಗಳ ಹಿನ್ನೆಲೆಯಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಸಾರ್ವಜನಿಕ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕೀಟತಜ್ಞ ಡಾ. ಪ್ರಕಾಶ ಡೆಂಘೀ ಜ್ವರಕ್ಕೆ ಯಾರೂ ಭಯಪಡಬಾರದು. ಸಾರ್ವಜನಿಕರು ಮನೆಯ ಒಳ ಹೊರ ಶುಚಿತ್ವಕ್ಕೆ ಒತ್ತು ನೀಡುವುದರಿಂದ ರೋಗವನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಡೆಂಘೀ ಜ್ವರ ವೈರಸ್ನಿಂದ ಉಂಟಾಗುವ ಕಾಯಿಲೆ. ಸೋಂಕು ಹೊಂದಿದ ಈಡಿಸ್ ಇಜಿಪ್ಟೈ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಈ ರೋಗಕ್ಕೆ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳಿಗನುಸಾರ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆಯಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕೆಂದು ಸಲಹೆ ನೀಡಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಸಿಬ್ಬಂದಿ ಆನಂದಬಾಯಿ ಪಾಟೀಲ್, ಎಫ್.ಎ. ಹಣಗಿ, ಸಂಗನಗೌಡ ಮಾಲಿಪಾಟೀಲ್, ಸುಜಾತ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.