ಹಾಡಹಗಲೇ ಮನೆ ದರೋಡೆ: ಚಿನ್ನಾಭರಣ ಲೂಟಿ
ರಾಯಚೂರು: ನಗರದ ಜಹೀರಾಬಾದ್ ಬಡಾವಣೆಗೆ ಹೊಂದಿಕೊಂಡಿರುವ ಧನಲಕ್ಷ್ಮಿ ಲೇಔಟ್‌ನಲ್ಲಿ ಮಂಗಳವಾರ ಹಾಡಹಗಲೇ ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಮಾರಕಾಸ್ತ್ರದಿಂದ ಬೆದರಿಸಿದ ದರೋಡೆಕೋರರು ಲಕ್ಷಾಂತರ ರು. ಚಿನ್ನಾಭರಣ ದೋಚಿದ್ದಾರೆ.
ಲೇಔಟ್‌ನ ನಿವಾಸಿ ಸುಧಾಕರ್ ಎಂಬುವರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಮಹಿಳೆಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಆಕೆಯ ಬಳಿಯಿದ್ದ 40 ತೊಲೆ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿದ್ದ ದುಷ್ಕರ್ಮಿಗಳು ಮಹಿಳೆ ಬಟ್ಟೆ ತೊಳೆದು ಮನೆಯೊಳಗೆ ಹೋಗುವಾಗ ಆಕೆ ಹಿಂದೆ ತೆರಳಿ ಮನೆಯೊಳಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ನೇತಾಜಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆತಂಕ: ಲಿಂಗಸ್ಗೂರು ಪಟ್ಟಣದ ನಾಲ್ಕು ಕಡೆ ದರೋಡೆ ನಡೆದ ಬೆನ್ನಲ್ಲೇ ಈಚೆಗೆ ನಿಜಲಿಂಗಪ್ಪ ಕಾಲನಿಯಲ್ಲಿ ಹಾಡಹಗಲೇ ಕಳ್ಳತನದ ಘಟನೆ ನಾಗರಿಕರಲ್ಲಿ ಆತಂಕ ತಂದಿದೆ.
ಔಷಧಿ ಅಂಗಡಿಯಲ್ಲಿ ಕಳವು
ರಾಯಚೂರು: ನಗರದ ಬಂಗೀಕುಂಟಾ ಪ್ರದೇಶದಲ್ಲಿರುವ ಸುಕೋ ಬ್ಯಾಂಕ್ ಬಳಿಯ ಆಶೀರ್ವಾದ ಮೆಡಿಕಲ್ ಶಾಪ್‌ನಲ್ಲಿ ಕಳವು ಸಂಭವಿಸಿದ್ದು, 1 ಲಕ್ಷ ಮೌಲ್ಯದ ಔಷಧಿ ಮತ್ತಿತರೆ ಬೆಲೆ ಬಾಳುವ ಸಾಮಗ್ರಿ ದೋಚಲಾಗಿದೆ. ಆಶೀರ್ವಾದ ಮೆಡಿಕಲ್ ಅಂಗಡಿಯ ಬಾಗಿಲು ಮುರಿದು ಒಳಪ್ರವೇಶಿಸಿರುವ ಕಳ್ಳರು ಅಂಗಡಿಯಲ್ಲಿದ್ದ 1 ಲಕ್ಷ ಬೆಲೆಯ ಸಾಮಗ್ರಿ ದೋಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಟಾ ಏಸ್ ಪಲ್ಟಿ; 10 ಜನರಿಗೆ ಗಾಯ
ರಾಯಚೂರು: ಮಾನವಿ ತಾಲೂಕಿನ ಮಲ್ಲಟ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಕೂಲಿಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ಅದರಲ್ಲಿದ್ದ 10 ಜನರಿಗೆ ಗಾಯಗಳಾಗಿವೆ.
ಗಾಯಾಳುಗಳು ಅಮೀನಗಢ ಗ್ರಾಮದವರಾಗಿದ್ದು, ಗಾಯಾಳುಗಳನ್ನು ಸುಶೀಲಮ್ಮ, ಸಿದ್ದಮ್ಮ, ವಿರುಪಮ್ಮ, ಶಂಕ್ರಮ್ಮ, ಪದ್ದಮ್ಮ, ಯಲ್ಲಮ್ಮ, ಈರಮ್ಮ, ಮಲ್ಲಮ್ಮ, ಹುಚ್ಚರೆಡ್ಡಿ, ತಾಯಮ್ಮ ಎಂದು ಗುರುತಿಸಲಾಗಿದೆ.
ಟಾಟಾ ಏಸ್‌ನಲ್ಲಿ ಒಟ್ಟು 28 ಜನ ಪ್ರಯಾಣಿಸುತ್ತಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಟಾ ಏಸ್ ವಾಹನದ ಚಾಲನ ನಿರ್ಲಕ್ಷ್ಯದ ಚಾಲನೆಯಿಂದಲೇ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.