ಚರ್ಮರೋಗ ಉಚಿತ ತಪಸಣಾ ಶಿಬಿರ
ಸಿಂಧನೂರು: ತಾಲೂಕಿನ ತುರ್ವಿಹಾಳ ಶಂಕರಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸಿಂಧನೂರು ಆರೋಗ್ಯ ಕೇಂದ್ರ,ಪ್ರಾಥಮಿಕ ಆರೋಗ್ಯ ಕೇಂದ್ರ ತುರ್ವಿಹಾಳ, ಡಿ.ಶಂಕರಗೌಡ ಸ್ಮಾರಕ ಯುವಕ ಮಂಡಳ, ವಿಶ್ವಪಥ ಸಂಸ್ಥೆ ಸಿಂಧನೂರು ಹಾಗೂ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಮಕ್ಕಳ ಚರ್ಮರೋಗ ಉಚಿತ ತಪಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಮಂಜುನಾಥ ಅಣಗೌಡರ್, ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಕೊಡಿಸುವುದರೊಂದಿಗೆ ಆರೋಗ್ಯ ಸ್ಥಿರತೆ ಕಾಪಾಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿರಬೇಕೆಂದು ಸಲಹೆ ನೀಡಿದರು. ಡಿ.ಶಂಕರಗೌಡ ಯುವಕ ಮಂಡಳಿ ಶಾಂತಮುತ್ತಯ್ಯ ಮಾತನಾಡಿದರು.
ಡಾ. ಅನಿಲ್‌ಕುಮಾರ ಮತ್ತು ಡಾ. ಶಿರಿಷಾ ಮಕ್ಕಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಶಿಬಿರದಲ್ಲಿ ಗ್ರಾಪಂ ಅಧ್ಯಕ್ಷೆ ಕೆಂಪಮ್ಮ, ಅಭಿವೃದ್ಧಿ ಅಧಿಕಾರಿ ಶರಣಪ್ಪ ಅಂಗಡಿ, ತಾಪಂ ಸದಸ್ಯೆ ಬಸಮ್ಮ ಗೌಡಸ್ಯಾನಿ, ಗ್ರಾಪಂ ಉಪಾಧ್ಯಕ್ಷ ಕರಿಯಪ್ಪ ಭಂಗಿ, ಕೊಮಾರೆಪ್ಪ, ಶರಣಪ್ಪ ಚಲುವಾದಿ, ನಾಗಪ್ಪ ಸಂದೂರಿ, ಪ್ರಭು ಸಾಹುಕಾರ, ಶರಣಪ್ಪ ಗಡ್ಯಾಳ, ಹನುಮಂತಪ್ಪ, ಹಿರಿಯ ಆರೋಗ್ಯ ಸಹಾಯಕ ಅಂದಾನಪ್ಪ ಕೂಟಗಿ ಉಪಸ್ಥಿತರಿದ್ದರು. ಶಾಂತ ಸಂಗಡಿಗರು ಪ್ರಾರ್ಥಿಸಿದರು. ವೆಂಕೋಬ ನಿರೂಪಿಸಿದರು. ವೀರೇಶ ವಗ್ಗರ ವಂದಿಸಿದರು.
ಜವಳಗೇರಾ ಖೋಖೋ ತಂಡ ರಾಜ್ಯಮಟ್ಟಕ್ಕೆ
ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಖೋಖೋ ತಂಡ ವಿಭಾಗ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಪ್ರೌಢಶಾಲೆಯ ಮುಖ್ಯೋಪಾದ್ಯಾಯಿನಿ ಅನುಪಮ ಕುಲಕರ್ಣಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದ ತಂಡ ಈಗ ವಿಭಾಗ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಈ ವಿದ್ಯಾರ್ಥಿನಿಯರ ಸಾಧನೆಗೆ ಸ್ಫೂರ್ತಿಯಾಗಿರುವ ದೈಹಿಕ ಶಿಕ್ಷಕಿ ಮಹಾದೇವಮ್ಮ, ಶಾಲೆಯ ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.