ಸಮಾಜದಲ್ಲಿ ಶಿಕ್ಷಕರ ಪಾತ್ರ ದೊಡ್ಡದು
ಗುರುಮಠಕಲ್: ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಜ್ಞಾನ ಸಂಪತ್ತನ್ನು ಪಡೆದು ಉತ್ತಮ ನಾಗರಿಕರಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.
ಅವರು ಇಲ್ಲಿಗೆ ಸಮೀಪದ ಯಾನಾಗುಂದಿಯಲ್ಲಿ ವೃಷಭ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ಸನ್ಮಾನ ಹಾಗೂ ಹಾಸ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿದ್ದ ಗುರು ಶಿಷ್ಯರ ಪರಂಪರೆ ಇನ್ನೂ ಜೀವಂತ ಇರುವುದಕ್ಕೆ ಸಂತಸ ವ್ಯಕ್ತಪಡಿಸಿ, ಯಾವುದೇ ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೆ ಏರಲು ಗುರುಗಳ ಮಾರ್ಗದರ್ಶನ ಖಂಡಿತವಾಗಿ ಅಗತ್ಯವಾಗಿದೆ. ಒಳ್ಳೆಯ ಸಮಾಜ ಕಟ್ಟುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.
ವಿಷಾದನೀಯ: ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್. ವಸ್ತ್ರದ ಮಾತನಾಡಿ, ಶಿಕ್ಷಕರನ್ನು ಮಕ್ಕಳ ಕಲಿಕೆಗೆ ಸೀಮಿತವಾಗಿರಿಸದೇ ಸಾಕಷ್ಟು ಹೊರೆ ಹಾಕಲಾಗುತ್ತಿದೆ.
ಇದರಿಂದಾಗಿ ಕಲಿಕಾ ಮಟ್ಟ ಕುಂಠಿತಗೊಳ್ಳುತ್ತಿರುವುದು ವಿಷಾದನೀಯ.
ಶಿಕ್ಷಕರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಸಚಿವರು ಕ್ರಮಕೈಗೊಳ್ಳಲು ಮನವಿ ಮಾಡಿದ ಅವರು, ಶಿಕ್ಷಕರು ಸೇವೆ ಸಲ್ಲಿಸುತ್ತಿರುವಲ್ಲೇ ಅವರ ಅನುಕೂಲಕ್ಕೆ ವಸತಿ ನಿಲಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ದತ್ತಾತ್ರೇಯ ಪಾಂಚಾಳ, ಸಿಆರ್ಪಿ ಕಾನಾಗಡ್ಡ ಕೃಷ್ಣ, ಬಾಲರಾಜ ಎಂ. ಚಂಡರಕಿ, ಚೆನ್ನಾರಡ್ಡಿ, ಸಂಗಯ್ಯ ಮಠಪತಿ, ಪ್ರಭಾವತಿ ಅವರನ್ನು ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮತ್ತು ಗಣ್ಯರು ಸನ್ಮಾಸಿದರು. ಮಾತಾ ಮಾಣಿಕೇಶ್ವರಿ ಆಶ್ರಮದ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದರು. ಗುಲ್ಬರ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಇದ್ದರು. ಎನ್.ಸಿ. ರಾಟಿಮನಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಹೇಶ ನಿರೂಪಿಸಿದರು.
ಫೌಂಡೇಷನ್ ಕಾರ್ಯದರ್ಶಿ ವೀರೇಶ ಪಾಟೀಲ ಸ್ವಾಗತಿಸಿದರು. ಶಿವಕುಮಾರ ಮಾಮಡಿ ವಂದಿಸಿದರು. ನಂತರ ನಡೆದ ಹಾಸ್ಯೋತ್ಸವದಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಬಸವರಾಜ ಮಾಮನಿ, ನರಸಿಂಹ ಜೋಷಿ ಹಾಸ್ಯ ಚಟಾಕಿ ಹಾರಿಸಿ ಸಾರ್ವಕನಿಕರ ಪ್ರಶಂಸೆಗೆ ಪಾತ್ರರಾದರು.
ಶಿಕ್ಷಕರು ರಾಷ್ಟ್ರ ನಿರ್ಮಾಪಕರು: ಕ್ಯಾತನಾಳ
ಯಾದಗಿರಿ: ಶಿಕ್ಷಕರು ರಾಷ್ಟ್ರ ನಿರ್ಮಾಪಕರು. ಅವರಿಗೆ ಸರಿಸಮಾನ ಹುದ್ದೆ ಯಾವುದೂ ಇಲ್ಲ. ಅತ್ಯಂತ ಶ್ರೇಷ್ಠ ಸ್ಥಾನ ಅವರದ್ದಾಗಿದೆ ಎಂದು ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ, ಎಪಿಎಂಸಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ ಹೇಳಿದರು.
ತಾಲೂಕಿನ ಸೈದಾಪುರದ ವಿದ್ಯಾವರ್ಧಕ ಪ್ರೌಢಶಾಲೆ ಹಾಗೂ ಮಲ್ಹಾರ ಕಾರಡ್ಡಿ ಬಸವಂತರಾಯ ಸಿದ್ದಪ್ಪ ಸ್ಮಾರಕ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು, ಡಿಇಡಿ ಕಾಲೇಜುಗಳ ಆಶ್ರಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಎಸ್.ರಾಧಾಕೃಷ್ಣನ್ರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಅವರಿಂದ ಶಿಕ್ಷಕರ ಸೇವೆಯ ಮಹತ್ವ ದೇಶಕ್ಕೆ ಗೊತ್ತಾಗುವಂತಾಗಿದೆ. ಇದು ಅತಿ ಮುಖ್ಯವಾಗಿದೆ. ತಾಯಿ ಮೊದಲ ಗುರುವಾದರೆ ನಂತರದಲ್ಲಿ ಶಿಕ್ಷಕರು ಗುರುವಾಗಿ ಜೀವನದ ವ್ಯಕ್ತಿತ್ವವನ್ನು ರೂಪಿಸುವ ಕೆಲಸ ಮಾಡುತ್ತಾರೆಂದು ಅಭಿಪ್ರಾಯಪಟ್ಟರು.
ಗುರು ಕೊಟ್ಟ ಜ್ಞಾನ ಜೀವನಾಂತ್ಯವರೆಗೆ: ಇದಕ್ಕೂ ಮುನ್ನ ವಿದ್ಯಾರ್ಥಿಗಳು ಮಾತನಾಡಿ, ಶಿಕ್ಷಕರಿಲ್ಲದ ವಿದ್ಯಾರ್ಥಿ ಜೀವನ ರೆಕ್ಕೆ ಇಲ್ಲದ ಹಕ್ಕಿಯಂತೆ. ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಅವಿನಭಾವ ಸಂಬಂಧವಿದೆ.
ದೇಶ ಕಟ್ಟುವ ಕೆಲಸ ಇವರಿಂದಾಗುತ್ತದೆ. ಉತ್ತಮ ಸಮಾಜಕ್ಕೆ ಶಿಕ್ಷಕರ ಅವಶ್ಯಕತೆಯಿದೆ. ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ.
ಸೂರ್ಯನ ಬೆಳಕಿನ ಶಕ್ತಿಗಿಂತ ಶಿಕ್ಷಕ ನೀಡುವ ಜ್ಞಾನದ ಬೆಳಕಿನ ಶಕ್ತಿ ಶ್ರೇಷ್ಠವಾಗಿದೆ. ಸೂರ್ಯ ಬೆಳಕು ಕೆಲ ಸಮಯದಲ್ಲಿ ಮಾತ್ರ ನೀಡಿದರೆ ಶಿಕ್ಷಕರು ನೀಡಿದ ಜ್ಞಾನ ಜೀವನದ ಅಂತ್ಯದವರೆಗೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಹಾಗೂ ಶಾಲಾ ಸಿಬ್ಬಂದಿಗೆ ನೆನಪಿನ ಕಾಣಿಕೆ ಹಾಗೂ ಪುಷ್ಪ ನೀಡಿ ಗೌರವಿಸಿದರು.
ಮುಖ್ಯಗುರು ಲಿಂಗಾರಡ್ಡಿ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲರಾದ ಜಿ.ಎಂ. ಗುರುಪ್ರಸಾದ, ಕರಬಸಯ್ಯ ದಂಡಗಿಮಠ, ಉಪನ್ಯಾಸಕರಾದ ಹಂಪಣ್ಣ ಸಜ್ಜನಶೆಟ್ಟಿ, ಗೂಳಪ್ಪ ಮಲ್ಹಾರ, ಜಿ.ಎಸ್. ಗುರುನಂಜಿ ಇದ್ದರು. ಕವಿತಾ ಬಸವರಾಜ ಸ್ವಾಗತಿಸಿದರು. ತಾಯಪ್ಪ ನಿರೂಪಿಸಿದರು. ಶರೀಪಭಾಷಾ ವಂದಿಸಿದರು.