ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಚಾತುರ್ಮಾಸ್ಯ ಸಮಾರೋಪ

Srinivasa Murthy VN
Updated On : 17 Sept 2013, 11:13 am

ರಾಯಚೂರು: ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠದಉಭಯ ಶ್ರೀಗಳ ಚಾತುರ್ಮಾಸ್ಯ ವೃತ ಸಮಾರೋಪದ ಅಂಗವಾಗಿ ಸೆ.18 ಮತ್ತು 19ರಂದು ಪ್ರಶಸ್ತಿ ಪ್ರದಾನ ಮತ್ತು ಸೀಮೋಲ್ಲಂಘನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆ.18ರಂದು ಸಂಜೆ 4.30ಕ್ಕೆ ಶ್ರೀಮಠದ ಪೀಠಾಧಿಪತಿಗಳಾದ ಸುಯತೀಂದ್ರತೀರ್ಥರು ಹಾಗೂ ಕಿರಿಯ ಶ್ರೀಗಳಾದ ಸುಬುಧೇಂದ್ರತೀರ್ಥರ ಸಾನ್ನಿಧ್ಯದಲ್ಲಿ ಚಾತುರ್ಮಾಸ್ಯ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದ್ದು, ಶ್ರೀಧೀರ ವೇಣುಗೋಪಾಲ ಪ್ರಶಸ್ತಿಯನ್ನು ಮರಣೋತ್ತರವಾಗಿ ಶ್ರೀಲುಮೀಶ ದಾಸರಿಗೆ ಪ್ರದಾನ ಮಾಡಲಾಗುತ್ತದೆ.
ಚಾತುರ್ಮಾಸ್ಯ ಪ್ರಶಸ್ತಿಗೆ ಆಯ್ಕೆ: ಅದೇ ರೀತಿ ದ್ವೈತ ವೇದಾಂತ ಕ್ಷೇತ್ರದಲ್ಲಿನ ಸಾಧನೆಗೆ ಉಡುಪಿಯ ವಿದ್ವಾನ್ ರಾಜಗೋಪಾಲಾಚಾರ್ಯ, ವೇದ ಮತ್ತು ಸಂಸ್ಕೃತ ಕ್ಷೇತ್ರದಲ್ಲಿ ವನಪರ್ತಿಯ ವಿದ್ವಾನ್ ಗೋಪಾಲ ಶರ್ಮಾ, ಸಮಾಜ ಸೇವೆಯ ಕ್ಷೇತ್ರದಲ್ಲಿ ತಳಕಲ್‌ನ ಡಾ. ರಾಮರಾವ್, ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗೆ ಹುಬ್ಬಳ್ಳಿಯ ಪ್ರಸನ್ನ ಕರ್ಪೂರ, ಕಲೆ ಹಾಗೂ ಸಂಸ್ಕೃತಿಯ ಕ್ಷೇತ್ರಕ್ಕೆ ಪಾಲಘಾಟ್‌ನ ಸುಶೀಲೇಂದ್ರ ಕುಲಕರ್ಣಿ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಶ್ರೀಮಠ ತಿಳಿಸಿದೆ.
ನಾಳೆ ಸೀಮೋಲ್ಲಂಘನೆ ಕಾರ್ಯಕ್ರಮ: ಸೆ.19ರಂದು ಸಂಜೆ 6ಕ್ಕೆ ಚಾತುರ್ಮಾಸ್ಯ ಸಮಾರೋಪ ಅಂಗವಾಗಿ ಉಭಯ ಶ್ರೀಗಳ ಸೀಮೋಲ್ಲಂಘನೆ ಕಾರ್ಯಕ್ರಮ ನಡೆಯಲಿದ್ದು, ಕೊಂಡಾಪುರಂನ ಶ್ರೀಆಂಜನೇಯಸ್ವಾಮಿ ದೇವಾಲಯಕ್ಕೆ ಶ್ರೀಗಳು ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕೊಂಡಾಪುರಂನಿಂದ ಮರಳಿ ಸ್ವಾಮೀಜಿಗಳನ್ನು ಮೆರವಣಿಗೆಯಲ್ಲಿ ಬೈಕ್ ರ್ಯಾಲಿ ಮೂಲಕ ಕರೆತರಲು ಶ್ರೀಮಠ ನಿರ್ಧರಿಸಿದೆ. ಈ ಕಾರ್ಯಕ್ರಮಗಳಲ್ಲಿ 54 ಭಜನಾ ಮಂಡಳಿಗಳು, 54 ಅಷ್ಟೋತ್ತರ ಪಾರಾಯಣ ಮಂಡಳಿಗಳು ಹಾಗೂ ಅನೇಕ ಭಕ್ತರು ಪಾಲ್ಗೊಳ್ಳಲಿದ್ದಾರೆಂದು ಶ್ರೀಮಠ ತಿಳಿಸಿದ್ದು, ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದೆ.

ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ: ಮೂವರ ಸಾವು
ರಾಯಚೂರು:
ಜಿಲ್ಲೆಯ ಮಾನವಿ ತಾಲೂಕಿನ ಹಿರೇಹಳ್ಳದ ಬಳಿ ಮಂಗಳವಾರ ಗಣೇಶ ವಿಸರ್ಜನೆಗೆಂದು ತೆರಳಿದ್ದ ಟ್ರಾಕ್ಟರ್‌ಗೆ ಲಾರಿ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ.  ಮಾನವಿ ತಾಲೂಕಿನ ಹರವಿ ಗ್ರಾಮದ ಯಲ್ಲಪ್ಪ (22), ಹುಲಿಗೆಪ್ಪ (21) ಹಾಗೂ ದೇವದುರ್ಗ ತಾಲೂಕಿನ ಅರಕೇರಾದ ರಮೇಶ್ (22) ಮೃತಪಟ್ಟವರು. ಇವರು ಗಣೇಶ ಮೂರ್ತಿ ವಿಸರ್ಜನೆಗೆಂದು ಟ್ರಾಕ್ಟರ್‌ನಲ್ಲಿ ತೆರಳಿದ್ದು, ಹಿರೇಹಳ್ಳದ ಬಳಿ ಟ್ರಾಕ್ಟರನ್ನು ಸೇತುವೆ ಮೇಲೆ ನಿಲ್ಲಿಸಿದ್ದರು.  ಆಗ ಅದೇ ಮಾರ್ಗದಲ್ಲಿ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ನಂತರ ಹಳ್ಳಕ್ಕೆ ಬಿದ್ದಿದೆ. ಅದರಿಂದಾಗಿ ಟ್ರಾಕ್ಟರ್‌ನಲ್ಲಿದ್ದ ಈ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement