ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ, 3 ತಿಂಗಳು ಗರ್ಭಿಣಿ
ಮುದಗಲ್: ಪಟ್ಟಣದಲ್ಲಿ ಇಬ್ಬರು ಬುದ್ಧಿಮಾಂದ್ಯ ಮಹಿಳೆಯರು ಅಲೆಯುತ್ತಿದ್ದು, ಅವರಲ್ಲೊಬ್ಬಳ ಮೇಲೆ ಅತ್ಯಾಚಾರ ನಡೆದಿದ್ದು, ಆಕೆ ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.
ಈ ಬುದ್ಧಿಮಾಂದ್ಯ ಮಹಿಳೆಯರಿಗೆ ತಮ್ಮ ಹೆಸರು, ಊರು ಸೇರಿದಂತೆ ಯಾವ ಮಾಹಿತಿಯೂ ಇಲ್ಲ. ಕಳೆದ ಒಂದು ವರ್ಷದಿಂದ ಮುದಗಲ್ ಪಟ್ಟಣದಲ್ಲಿ ಬೀಡು ಬಿಟ್ಟಿದ್ದಾರೆ. ಇಬ್ಬರ ಪೈಕಿ ಒಬ್ಬಳು ಮೈಮೇಲೆ ಬಟ್ಟೆ ಇಲ್ಲದೆ ತಿರುಗುತ್ತಾಳೆ. ಈ ಇಬ್ಬರ ಮಹಿಳೆಯರ ಬಗ್ಗೆ ಸ್ಥಳೀಯರು ಪಟ್ಟಣ ಪಂಚಾಯ್ತಿಗೆ ದೂರು ನೀಡಿದ್ದರು. ಆಗ ಅಧಿಕಾರಿಗಳು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆದು, ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಗರ್ಭಿಣಿಗೆ ಹೆರಿಗೆಯಾದರೆ ಆರೈಕೆ ಮಾಡುವವರಾರು ಎನ್ನುವ ಚರ್ಚೆ ಜನರಲ್ಲಿ ನಡೆಯುತ್ತಿದೆ. ಬುದ್ಧಿಮಾಂದ್ಯ ಮಹಿಳೆ ಗರ್ಭಿಣಿಯಾಗಿರುವ ವಿಷಯ ತಿಳಿದ ಅನೇಕರು ಅನುಕಂಪ ತೋರಿಸುತ್ತಿದ್ದಾರೆ. ಮಹಿಳೆಯರ ಮೇಲೆ ನಡೆದ ಅತ್ಯಾಚಾರದ ಬಗ್ಗೆ ತನಿಖೆ ನಡೆಸುವುದು ಅಗತ್ಯವಾಗಿದೆ. ತಾಲೂಕಿನಲ್ಲಿ ಅನಾಥ ಆಶ್ರಮ, ಮಹಿಳಾ ರಕ್ಷಣಾ ಕೇಂದ್ರಗಳು ಇದ್ದು ಸರ್ಕಾದಿಂದ ಅನುದಾನ ಪಡೆಯುತ್ತಿದ್ದರೂ, ರಕ್ಷಣೆಗೆ ಮುಂದಾಗಿಲ್ಲ.
ಸರ್ವೆ: ಸರ್ಕಾರ ಅನಾಥ, ನಿರಾಶ್ರಿತರ ಸರ್ವೆ ಮಾಡಲು ಪಟ್ಟಣ ಪಂಚಾಯಿತಿಗೆ ಆದೇಶ ಮಾಡಿದ್ದರಿಂದ ಸರ್ವೆಯಲ್ಲಿ ಈ ಮಹಿಳೆಯರನ್ನು ಸೇರಿಸಲಾಗಿದೆ ಎಂದು ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮೀ ತಿಳಿಸಿದರು. ಈ ಮಹಿಳೆಯರನ್ನು ರಾಯಚೂರಿನಲ್ಲಿರುವ ಅನಾಥ ಆಶ್ರಮಕ್ಕೆ ಕಳಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದರು.