ಜೆಸ್ಕಾಂ ಕಚೇರಿಗೆ4ರಂದು ಮುತ್ತಿಗೆ
ಸಿಂಧನೂರು: ರೈತರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲದ ರಾಜ್ಯ ಸರ್ಕಾರ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಫಲವಾಗಿದ್ದು, ಆ.4ರಂದು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರೇಣುಕಪ್ಪ ಮೇಣೆದಾಳ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕನಿಷ್ಠ 8 ಗಂಟೆ 3 ಫೇಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸ್ಫಾರ್ಮರ್ಗಳನ್ನು ತಕ್ಷಣ ಬದಲಾಯಿಸಬೇಕು, ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ವಿವರಿಸಿದರು.
ಸೀಮೆಎಣ್ಣೆ ಪೂರೈಕೆಗೆ ಸಂಗ್ರಹಕಾರರ ನೇಮಿಸಿ
ಸಿಂಧನೂರು: ತಾಲೂಕಿಗೆ ಸೀಮೆಎಣ್ಣೆ ಸಗಟು ಪೂರೈಕೆದಾರರು ಇರುವುದಿಲ್ಲ. ಬೇರೆ ತಾಲೂಕು ಅಥವಾ ಜಿಲ್ಲೆಯವರಿಗೆ ಜೋಡಿಸಿಕೊಡುತ್ತಿರುವುದರಿಂದ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ. ಕೂಡಲೇ ಸೀಮೆಎಣ್ಣೆ ಸಗಟು ಸಂಗ್ರಾಹಕರನ್ನು ನೇಮಕ ಮಾಡಬೇಕೆಂದು ಸಿಂಧನೂರು ತಾಲೂಕು ನ್ಯಾಯಬೆಲೆ ಅಂಗಡಿ ಸಂಚಾಲಕರ ಸಂಘದ ಅಧ್ಯಕ್ಷ ಹನುಮೇಶ ಹರೆಟನೂರು, ಕಾರ್ಯದರ್ಶಿ ಗೋಪಾಲರಾವ್ ಕುಲಕರ್ಣಿ ಒತ್ತಾಯಿಸಿದ್ದಾರೆ. ಈ ಕುರಿತು ಸಂಸದ ಸಂಗಣ್ಣ ಕರಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಆರೋಪಿಸಿದವರೇ ಫಲಾನುಭವಿಗಳು: ಬಾದರ್ಲಿ
ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ ದುರಸ್ತಿ ಕಾಮಗಾರಿಗಳ ಬಗ್ಗೆ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಕಾಮಗಾರಿ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಸಕ ಹಂಪನಗೌಡ ಬಾದರ್ಲಿಯವರು ಗಂಜಿ ಕೇಂದ್ರಗಳನ್ನು ಆರಂಭಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಆ ಗಂಜಿ ಕೇಂದ್ರಗಳಲ್ಲಿ ನೂರಕ್ಕೂ ಹೆಚ್ಚು ಜನ ಜೆಡಿಎಸ್ ಕಾರ್ಯಕರ್ತರು ದುರಸ್ತಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಆರೋಪಿಸಿದವರೇ ಫಲಾನುಭವಿಗಳಾಗಿದ್ದಾರೆ ಎಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್ ಅಹ್ಮದ್ ಆರೋಪಿಸಿದರು. ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಶಾಸಕ ನಾಡಗೌಡರು ವಿನಾಕಾರಣ ಆರೋಪಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಎಡದಂಡೆ 54ನೇ ವಿತರಣಾ ಕಾಲುವೆಯ ಒಳಬಳ್ಳಾರಿ ಭಾಗದಲ್ಲಿ ನಾಡಗೌಡರ ಪುತ್ರ ಅಭಿಷೇಕ ನಾಡಗೌಡ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದ ಬಗ್ಗೆ ಆ ಭಾಗದ ಜನರಿಗೆ ಅಸಮಾಧಾನವಿದೆ. ಅನೇಕರು ಕಳಪೆ ಕಾಮಗಾರಿ ನಡೆಸಿದ್ದಾರೆಂದು ದೂರು ನೀಡಿದ್ದಾರೆ. ಇದಲ್ಲದೆ ವಡ್ಡರಹಟ್ಟಿ ವಿಭಾಗದಲ್ಲಿ ಜೆಡಿಎಸ್ ಕಾರ್ಯಕರ್ತ ರಾಮನಗೌಡ ಮಾಡಿದ ಕಳಪೆ ಕಾಮಗಾರಿಗೆ ಅಲ್ಲಿನ ಜನತೆ ರೊಚ್ಚಿಗೆದ್ದು ಅವರು ಮಾಡಿದ್ದ ಕೆಲಸವನ್ನೆಲ್ಲ ಒಡೆದು ಹಾಕಿ ಪುನಾ ಮಾಡಿಸಿದ್ದಾರೆ. ಈ ಬಗ್ಗೆ ನಾಡಗೌಡರು ತುಟಿ ಪಿಟಕ್ಕೆನ್ನುತ್ತಿಲ್ಲ ಎಂದು ಟೀಕಿಸಿದರು.
ಕ್ರೀಡಾಕೂಟಕ್ಕೆ ಆಯ್ಕೆ
ಶಹಾಪುರ: ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗಾಗಿ ಆ.4ರಂದು ತಾಲೂಕು ಮಟ್ಟದಲ್ಲಿ ಚೆಸ್, ಯೋಗ, ಕ್ರಿಕೆಟ್, ಕುಸ್ತಿ, ಪಂದ್ಯಾಟಗಳ ನೇರ ಆಯ್ಕೆ ನಡೆಯಲಿದೆ. ಸ್ಥಳೀಯ ಸಿಪಿಎಸ್ ಶಾಲಾ ಮೈದಾನದಲ್ಲಿ ಬೆಳಗ್ಗೆ 9.30ಕ್ಕೆ ಪಂದ್ಯಾಟ ಆಯೋಜಿಸಲಾಗಿದೆ. ಆಯಾ ಆಟದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ಕ್ರೀಟಾಪಟುಗಳು ಸಂಬಂಧಿಸಿದ ಆಟದ ಕಿಟ್ ಸಮೇತ ಶಾಲೆಯ ಅರ್ಹತಾ ಪ್ರಮಾಣ ಪತ್ರದೊಂದಿಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಗಮಿಸಲು ಬಿಇಒ ಕೆ.ರಾಯಪ್ಪರಡ್ಡಿ ತಿಳಿಸಿದ್ದಾರೆ.
ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಸೂತ್ರ: ರೊಟ್ಟಿ
ಸಿಂಧನೂರು: ನಗರದಲ್ಲಿ ಉಲ್ಬಣಗೊಂಡಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊಸ ಸೂತ್ರಗಳನ್ನು ಅನುಷ್ಠಾನಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಪಿಐ ರಮೇಶ ರೊಟ್ಟಿ ಹೇಳಿದರು. ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ವಿವಿಧ ವಲಯದ ವ್ಯಾಪಾರಸ್ಥರು, ಟ್ಯಾಕ್ಸಿ ಚಾಲಕರು, ಹಮಾಲರು, ಆಟೋ ಚಾಲಕರು ಸೇರಿದಂತೆ ಇತರ ಸಂಘ-ಸಂಸ್ಥೆಗಳ ಸಭೆ ನಡೆಸಿ ಟ್ರಾಫಿಕ್ ದಟ್ಟಣೆಯ ನಿಯಂತ್ರಣಕ್ಕೆ ಸಹಕಾರ ಕೋರಲಾಗಿದೆ. ರಾಯಚೂರು-ಗಂಗಾವತಿ ಮತ್ತು ಕುಷ್ಟಗಿ ರಸ್ತೆಯಲ್ಲಿ ಪ್ರತಿನಿತ್ಯ 500ಕ್ಕೂ ಹೆಚ್ಚು ವಾಹನಗಳು ಓಡಾಡುತ್ತವೆ. ವಿಶೇಷವಾಗಿ ಗಾಂಧಿ ವೃತ್ತದಲ್ಲಿಯೇ ಹಾಯ್ದು ಹೋಗುತ್ತಿರುವುದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಾರಣ ಇನ್ನು ಮುಂದೆ ಗಾಂಧಿ ವೃತ್ತದಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ನಿಲ್ಲಿಸದಂತೆ ಡಿಪೋ ವ್ಯವಸ್ಥಾಪಕರೊಂದಿಗೆ ಚರ್ಚಿಸಲಾಗಿದೆ. ಲಿಂಗಸ್ಗೂರು ಸ.ಆಯುಕ್ತರಿಂದ ಅನುಮತಿ ಪಡೆಯಲಾಗಿದೆ ಅವರು ಎಂದು ವಿವರಿಸಿದರು.