ತುಂಬಿದ ತುಂಗಭದ್ರೆ ಗರಿಗೆದರಿತು ರೈತರ ನಿರೀಕ್ಷೆ
-ಜಗನ್ನಾಥ ಆರ್. ದೇಸಾಯಿ
ರಾಯಚೂರು: ತಡವಾಗಿಯಾದರೂ ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿದೆ. ಒಳಹರಿವು ಹೆಚ್ಚುತ್ತಿದ್ದಂತೆ ಕಾಲುವೆಗಳಿಗೆ ನೀರು ಹರಿಸುವ ಅವಧಿ ನಿಗದಿಗೆ ನೀರಾವರಿ ಸಲಹಾ ಸಮಿತಿ ಸಭೆ ಆ.2ಕ್ಕೆ ನಡೆಯಲಿದ್ದು, ಕಾಲುವೆ ಕಡೆಯ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಚರ್ಚೆ ಈ ಬಾರಿಯಾದರೂ ನಡೆಯಬೇಕೆಂಬ ನಿರೀಕ್ಷೆ ರೈತರಲ್ಲಿ ಮೂಡಿದೆ.
ಪ್ರತಿ ವರ್ಷ ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿದ್ದಂತೆಯೇ ಎಡ ಹಾಗೂ ಬಲದಂಡೆ ಮತ್ತು ವಿವಿಧ ಕಾಲುವೆಗಳಿಗೆ ನೀರು ಹರಿಸುವ ಅವಧಿ ನಿಗದಿಗೆ ನೀರಾವರಿ ಸಲಹಾ ಸಮಿತಿ ಸಭೆ ಸೀಮಿತಗೊಂಡಿದೆ. ಪ್ರತಿ ವರ್ಷ ಇಂಥ ಸಭೆಗಳಿಗೆ ರೈತ ಸಂಘಟನೆಗಳಿಗೂ ಅವಕಾಶ ನೀಡಬೇಕು. ಅಚ್ಚುಕಟ್ಟು ಪ್ರದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕೆಂಬ ಬೇಡಿಕೆಗಳಿಗೆ ಮನ್ನಣೆ ಮಾತ್ರ ದೊರೆತಿಲ್ಲ.
ಪ್ರಸಕ್ತ ವರ್ಷ ತಡವಾದ ಮುಂಗಾರಿನಿಂದಾಗಿ ತುಂಗಭದ್ರಾ ಜಲಾಶಯ ತಡವಾಗಿಯೇ ಭರ್ತಿಯಾಗುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 1,633 ಅಡಿಯಿದ್ದು ಅದರಲ್ಲಿ ಶುಕ್ರವಾರ ಬೆಳಗ್ಗೆವರೆಗೆ 1,630 ಅಡಿ ನೀರು ಸಂಗ್ರಹವಿದೆ. 44,747 ಕ್ಯುಸೆಕ್ ಒಳಹರಿವಿದೆ.
ತಡವಾಗಿ ಭರ್ತಿ: ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯ ಶೀಘ್ರ ಭರ್ತಿಯಾಗುವುದು ನಿಶ್ಚಿತ. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತಡವಾಗಿದೆ. ಕಳೆದ ವರ್ಷ ಜು.22ರಂದೇ ಜಲಾಶಯದಿಂದ ನೀರು ಹರಿಸಲಾಗಿತ್ತು. ಆಗ 1,631 ಅಡಿ ನೀರಿತ್ತು. 1.27 ಲಕ್ಷ ಕ್ಯುಸೆಕ್ ನೀರಿನ ಒಳಹರಿವಿತ್ತು. ಅಷ್ಟೇ ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿತ್ತು.
ಅಂಥ ಒಳಹರಿವು ಈ ಬಾರಿಯಿಲ್ಲ. ಆದರೂ ಜಲಾಶಯ ಭರ್ತಿಯಾಗಿದೆ ಎಂಬ ಸಂತಸ ರೈತರದ್ದು. ಕುಡಿವ ನೀರು ಹಾಗೂ ಕೃಷಿ ಕಾರ್ಯಗಳಿಗೆ ಅನುಕೂಲವಾಗಿದೆ ಎಂಬ ನೆಮ್ಮದಿ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಆಡಳಿತಗಳಲ್ಲಿ ಮೂಡಿದೆ.
ಸಮಸ್ಯೆಗಳು: ತುಂಗಭದ್ರಾ ಎಡದಂಡೆ ಕಾಲುವೆಯಡಿ ಸುಮಾರು 4 ಲಕ್ಷ ಎಕರೆಗೂ ಹೆಚ್ಚಿನ ಪ್ರದೇಶ ಜಿಲ್ಲೆಯಲ್ಲಿ ನೀರಾವರಿಯಾಗಿದೆ. ಆದರೆ ಅದು ದಾಖಲೆಗಳಲ್ಲಿ ಮಾತ್ರ. ಕಾಲುವೆ ಕಡೆಯ ಭಾಗದ ಮಾನವಿ ಮತ್ತು ರಾಯಚೂರು ತಾಲೂಕುಗಳ ರೈತರಿಗೆ ಅನೇಕ ವರ್ಷಗಳಿಂದ ನೀರು ತಲುಪುತ್ತಿಲ್ಲ. ಕಾಲುವೆಗೆ ನೀರು ಹರಿಸಿದರೂ ಕಡೆಯ ಭಾಗದ ರೈತರಿಗೆ ನೀರು ದೊರೆಯುವಂತೆ ಮಾಡಲು ಜಿಲ್ಲಾಡಳಿತದ್ದು ನಿರಂತರ ಪ್ರಯಾಸ.
ಈ ಮಧ್ಯೆ ಎಡದಂಡೆ ಕಾಲುವೆಯ ವಿವಿಧೆಡೆ ಅಕ್ರಮ ಪಂಪ್ಸೆಟ್ಗಳ ಅಳವಡಿಕೆ, ಬೃಹತ್ ಗಾತ್ರದ ತೂಬುಗಳಿಂದಾಗಿ ನೀರು ವ್ಯರ್ಥ ಸೋರಿಕೆ ನಿರಂತರವಾಗಿದೆ. ಕಳೆದ ಕೆಲ ತಿಂಗಳಿಂದ ಜಿಲ್ಲೆಯಲ್ಲಿ ರೈತ ಸಂಘಟನೆಗಳು ಇಂಥ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ನಡೆಸಿದ ಹೋರಾಟ ಶೇ.100ರಷ್ಟು ಫಲವನ್ನೇನೂ ನೀಡಿಲ್ಲ. ಹಾಗಾಗಿ ನೀರಾವರಿಯ ಸಮಸ್ಯೆಗಳು ಕಳೆದ ವರ್ಷದಂತೆ ಈ ಬಾರಿಯೂ ಮುಂದುವರಿಯಲಿವೆ.
ಇಳುವರಿ ಕುಸಿತ: ಪ್ರತಿ ವರ್ಷ ಜುಲೈನಲ್ಲಿ ಕಾಲುವೆಗೆ ನೀರು ದೊರೆಯುತ್ತಿತ್ತು. ಸಹಜವಾಗಿಯೇ ಬತ್ತ, ಹತ್ತಿ, ಮೆಣಸಿನಕಾಯಿ ಮತ್ತಿತರೆ ಬೆಳೆ ಬೆಳೆಯುತ್ತಿದ್ದರು. ಈ ಬಾರಿ ಮಳೆ ಅಭಾವದಿಂದಾಗಿ ಹತ್ತಿ ಮತ್ತು ಮೆಣಸಿನಕಾಯಿ ಬೆಳೆದ ರೈತರು ಈಗಾಗಲೇ ಕಂಗಾಲಾಗಿದ್ದಾರೆ.
ಅದೇ ರೀತಿ ಬತ್ತ ಬೆಳೆಗಾರರು ಕಾಲುವೆಯಲ್ಲಿ ನೀರು ಹರಿಯುವುದನ್ನೇ ಕಾಯುತ್ತಿದ್ದಾರೆ. ಈ ಬಾರಿ ಮುಂಗಾರು ಹಂಗಾಮು ತಡವಾಗಿ ಆರಂಭವಾಗುತ್ತಿರುವುದರಿಂದ ಬೆಳೆಯ ಇಳುವರಿ ಕುಸಿತದ ಭೀತಿ ಬತ್ತ ಬೆಳೆಗಾರರಲ್ಲಿದೆ. ಅಷ್ಟೇ ಅಲ್ಲ, ಕೊನೆಗೆ ನೀರಿನ ಅಭಾವದ ಭೀತಿಯೂ ಇದೆ.
ಈ ಬಾರಿಯಾದರೂ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಸಚಿವರು, ಶಾಸಕರು ಮಾಡಲಿದ್ದಾರೆಯೇ ಎಂಬ ಕುತೂಹಲ ರೈತರಲ್ಲಿ ಮೂಡಿದೆ.
ತುಂಗಭದ್ರಾ ನೀರು ನದಿಗೆ: ಎಚ್ಚರಿಕೆ
ರಾಯಚೂರು: ತುಂಗಭದ್ರಾ ಅಣೆಕಟ್ಟೆಗೆ ನೀರಿನ ಒಳಹರಿವು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದ ಯಾವುದೇ ಸಂದರ್ಭ ನೀರು ಹೊರ ಹರಿಸುವ ಸಾಧ್ಯತೆಯಿದೆ. ನದಿ ತೀರ ಮತ್ತು ಕೆಳಮಟ್ಟದ ಪ್ರದೇಶದಲ್ಲಿರುವ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಒಳಹರಿವು ಇನ್ನೂ ಹೆಚ್ಚಳವಾಗುವ ಸಾಧ್ಯತೆಯ ಹಿನ್ನೆಲೆ ಯಾವುದೇ ಕ್ಷಣದಲ್ಲಿ ಅಣೆಕಟ್ಟೆಯಿಂದ ನೀರು ಹೊರಹರಿಸಲಾಗುತ್ತದೆ. ಕಾರಣ ಮುಂಜಾಗ್ರತೆ ಕ್ರಮವಾಗಿ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಂಬಂಧಿಸಿದ ಅಧಿಕಾರಿಗಳು ಗಮನಹರಿಸುವಂತೆ ಕೋರಿದ್ದಾರೆ.
ಜಲಾಶಯ ಭರ್ತಿಯಾಗಿದ್ದು ಸಂತಸ ತಂದಿದೆ. ನೀರಾವರಿ ಸಲಹಾ ಸಮಿತಿ ಸಭೆಯು ಕೇವಲ ಕಾಲುವೆಗೆ ನೀರು ಹರಿಸುವುದನ್ನು ನಿರ್ಧರಿಸಲು ಸಭೆ ಸೇರುತ್ತಿರುವುದು ಸರಿಯಲ್ಲ. ಬದಲಿಗೆ ಅಚ್ಚುಕಟ್ಟು ಪ್ರದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಜತೆಗೆ ಕಾಲುವೆ ಆಧುನೀಕರಣ ಮುಗಿದಿದ್ದರೂ ಕಡೆಯ ಭಾಗದ ರೈತರಿಗೆ ನೀರು ದೊರೆಯದಿರುವ ಸಮಸ್ಯೆ ಬಗ್ಗೆ ಚರ್ಚಿಸುವುದು ತೀರಾ ಅವಶ್ಯ.
ಚಾಮರಸ ಮಾಲಿಪಾಟೀಲ್, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ