ಬೇಡಿಕೆ: ಉಸ್ತುವಾರಿ ಕಾರ್ಯದರ್ಶಿಗೆ ಮನವಿ
ರಾಯಚೂರು: ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯದ್ಲಾಪುರ-ದೇವಸೂಗೂರು ಲ್ಯಾಂಡ್ ಲೂಸರ್ ಅಸೋಸಿಯೇಶನ್‌ನಿಂದ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೆಪಿಟಿಸಿಎಲ್ ಎಂಡಿ ಕುಮಾರ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರಕ್ಕೆ ಆಗಮಿಸಿದ್ದ ಕುಮಾರ ನಾಯಕ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕಾಗಿ ಭೂಮಿ ನೀಡಿದ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರ ಬಹುದಿನಗಳ ಬೇಡಿಕೆ ಕೂಡಲೇ ಈಡೇರಿಸುವಂತೆ ಒತ್ತಾಯಿಸಿದರು.
ನೇಮಕಾತಿ ಮಾಡಿ: 18 ಜನ ಅಭ್ಯರ್ಥಿಗಳ ಡಿ ಗ್ರೇಡ್ ತರಬೇತಿ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಿ ನೇಮಕಾತಿ ಆದೇಶ ನೀಡಬೇಕು. ಇನ್ನುಳಿದ 85 ಅಭ್ಯರ್ಥಿಗಳ ಡಿ ಗ್ರೇಡ್ ತರಬೇತಿ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಿ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು.
13 ಜನ ನಿಗಮದಿಂದ ಐಟಿಐ ತರಬೇತಿ ಪಡೆದು ಉದ್ಯೋಗ ವಂಚಿತರಾಗಿದ್ದು, ಅವರಿಗೆ ಕೂಡಲೇ ನೇಮಕ ಮಾಡಿಕೊಳ್ಳಬೇಕು. ಯರಮರಸ್ ವಿದ್ಯುತ್ ಕೇಂದ್ರದಲ್ಲಿ ಉತ್ಪಾದನೆಯಾಗುವ ಹಾರಬೂದಿಯನ್ನು ಶಕ್ತಿನಗರದ ಘಟಕಕ್ಕೆ ಸಾಗಿಸಬಾರದು ಎಂದು ಎಚ್ಚರಿಸಿದರು.
ಆರೋಗ್ಯ ಸೇವೆ ನೀಡಿ: ಆರ್‌ಟಿಪಿಎಸ್‌ನ ಹಾರುಬೂದಿ ನಿಯಂತ್ರಿಸಬೇಕು. ಟ್ಯಾಂಕರ್‌ಗೆ ಬೂದಿ ತುಂಬುವ ಘಟಕ ಬೇರೆಡೆಗೆ ಸ್ಥಳಾಂತರಿಸಬೇಕು. ಸಂತ್ರಸ್ತರ ಮಕ್ಕಳಿಗೆ ನಿಗಮದ ಶಾಲೆಯಲ್ಲಿ ಪ್ರವೇಶ ನೀಡಬೇಕು. ನಿಗಮದ ಆಸ್ಪತ್ರೆಯಲ್ಲಿ ಸಂತ್ರಸ್ತರ ಕುಟುಂಬದವರಿಗೆ ಕಾರ್ಡ್ ಪದ್ಧತಿ ಜಾರಿಗೆ ತಂದು ಆರೋಗ್ಯ ಸೇವೆ ದೊರಕಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಪ್ಪ ಯದ್ದರ್, ಕಾರ್ಯದರ್ಶಿ ಬೀರಲಿಂಗ ಸೇರಿ ಅನೇಕರಿದ್ದರು.