ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗುಣಮಟ್ಟದ ಕಲ್ಲಿದ್ದಲು ಕೊರತೆ- ನಾಳೆ ಕೇಂದ್ರ ಕಲ್ಲಿದ್ದಲು ಸಚಿವರ ಭೇಟಿ: ಡಿಕೆಶಿ

Srinivasa Murthy VN
Updated On : 3 Feb 2014, 11:24 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಫೆ.2
ರಾಜ್ಯದಲ್ಲಿನ ಕಲ್ಲಿದ್ದಲು ಆಧಾರಿತ ವಿದ್ಯುತ್ ಕೇಂದ್ರಗಳಿಗೆ ಗುಣಮಟ್ಟದ ಕಲ್ಲಿದ್ದಲು ಒದಗಿಸುವಂತೆ ಕೋರಿ ಫೆ.4ರಂದು ಕೇಂದ್ರ ಕಲ್ಲಿದ್ದಲು ಖಾತೆ ಸಚಿವರನ್ನು ಭೇಟಿ ಮಾಡುವುದಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅವರು ಶಕ್ತಿನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸೇರಿ ರಾಜ್ಯದಲ್ಲಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಸದ್ಯ ಲಭ್ಯವಾಗುತ್ತಿರುವ ಕಲ್ಲಿದ್ದಲಿನ ಗುಣಮಟ್ಟದ ಬಗ್ಗೆ ಕೆಪಿಸಿ ಅಧಿಕಾರಿಗಳಿಂದ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ಕಲ್ಲಿದ್ದಲು ಒದಗಿಸುವಂತೆ ಕೇಂದ್ರವನ್ನು ಕೋರಲಾಗುತ್ತದೆ ಎಂದರು.
ಡಿಸೆಂಬರ್‌ಗೆ ಪೂರ್ಣ: ಸದ್ಯ ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಗಣಿಯನ್ನು ರಾಜ್ಯಕ್ಕೆ ಹಂಚಿಕೆ ಮಾಡಿದ್ದು ಅಲ್ಲಿಂದ ದೊರೆಯುತ್ತಿರುವ ಕಲ್ಲಿದ್ದಲಿನ ಬಗ್ಗೆ ತೃಪ್ತಿಯಿಲ್ಲ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಗಣಿ ಹಂಚಿಕೆ ರದ್ದಾಗಿದ್ದರಿಂದ ಲಭ್ಯವಾಗಲಿರುವ ಕಲ್ಲಿದ್ದಲು ಗಣಿಯಲ್ಲಿಯೇ ರಾಜ್ಯಕ್ಕೆ ಹಂಚಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಯರಮರಸ್ ಥರ್ಮಲ್ ವಿದ್ಯುತ್ ಉತ್ಪಾದನೆ ಕೇಂದ್ರದ ನಿರ್ಮಾಣ ಹಂತದಲ್ಲಿರುವ ಎರಡು ಘಟಕಗಳ ಕಾಮಗಾರಿ ಡಿಸೆಂಬರ್‌ಗೆ ಪೂರ್ಣಗೊಳ್ಳಬೇಕಿದ್ದು, ಈ ಬಗ್ಗೆ ಪರಿಶೀಲಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಪ್ರಯೋಗಾರ್ಥ ಪ್ರಜ್ವಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಮಸ್ಯೆಗಳ ಪರಿಹಾರ: ವೈಟಿಪಿಎಸ್‌ಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಕುಗಳು ಎದುರಾಗಿದ್ದು, ಆ ಬಗ್ಗೆ ಜಿಲ್ಲಾಧಿಕಾರಿಗೆ ಸಮಸ್ಯೆ ಪರಿಹರಿಸುವಂತೆ ಸೂಚಿಸಲಾಗಿದೆ ಎಂದ ಅವರು, ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 1 ಮತ್ತು 2ನೇ ಘಟಕಗಳು ತೀರಾ ಹಳೆಯದಾಗಿದ್ದರಿಂದ ಅವುಗಳ ಆಧುನೀಕರಣ ಕಾಮಗಾರಿ ಜಾರಿಯಲ್ಲಿದೆ ಎಂದು ಹೇಳಿದರು.
ಈಗಾಗಲೇ 160 ಕೋಟಿ ವೆಚ್ಚದಲ್ಲಿ ಒಂದನೇ ಘಟಕದ ಆಧುನೀಕರಣ ಮುಗಿದು ಉತ್ತಮ ಕಾರ್ಯನಿರ್ವಹಿಸುತ್ತಿದೆ. ಕಳೆದ ಸರ್ಕಾರದ ವೈಫಲ್ಯಗಳನ್ನು ಪುನಾ ಪರಿಶೀಲಿಸುವ ಕಾರ್ಯ ತಾವು ಮಾಡುವುದಿಲ್ಲ. ಬದಲಿಗೆ ಪ್ರಸಕ್ತ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ಗಮನಹರಿಸುವುದಾಗಿ ಅವರು ಹೇಳಿದರು.
ಬಾಕಿ: ಕೆಪಿಸಿಗೆ ರಾಜ್ಯದ ವಿವಿಧ ವಿದ್ಯುತ್ ಕಂಪನಿಗಳಿಂದ 11 ಸಾವಿರ ಕೋಟಿ ಬಾಕಿ ಬರಬೇಕಿದೆ. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ 2 ಸಾವಿರ ಕೋಟಿಯಿದ್ದ ಈ ಮೊತ್ತವು ಬಿಜೆಪಿ ಸರ್ಕಾರದ ಅವಧಿಯಲ್ಲಿ 9 ಸಾವಿರ ಕೋಟಿಗೆ ಏರಿಕೆ ಕಂಡಿದೆ. 3.25 ಕೋಟಿ ಸ್ಥಳೀಯ ಸಂಸ್ಥೆಗಳಿಂದ ಹಣ ಬರಬೇಕಿದೆ ಎಂದು ತಿಳಿಸಿದರು.
ವಿದ್ಯುತ್ ಕಂಪನಿಗಳು ಬಾಕಿ ಉಳಿಸಿಕೊಂಡಿರುವುದನ್ನು ಪಾವತಿಸಲು ಕೇಂದ್ರ ಸರ್ಕಾರದ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯಲು ಸರ್ಕಾರ ಸೂಚಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿದ್ಯುತ್ ಕಂಪನಿಗಳು ಸಿದ್ಧತೆಯಲ್ಲಿವೆ. ಸಾಲ ಲಭ್ಯವಾಗುತ್ತಿದ್ದಂತೆಯೇ ಬಾಕಿ ತೀರಿಸಲು ಆದೇಶಿಸಲಾಗಿದೆ ಎಂದು ಹೇಳಿದರು.
ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿ: ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ.39ರಷ್ಟು ವಿದ್ಯುತ್ ರೈತರಿಗೆ ಉಚಿತವಾಗಿ ಒದಗಿಸಲಾಗುತ್ತದೆ. 6 ಸಾವಿರ ಕೋಟಿ ಮೊತ್ತದ ವಿದ್ಯುತ್ ರೈತರು ಉಚಿತವಾಗಿ ಬಳಸುತ್ತಿದ್ದಾರೆ. ಜೆಸ್ಕಾಂ ವ್ಯಾಪ್ತಿಯಲ್ಲಿ ರೈತರ ವಿದ್ಯುತ್ ಬಳಕೆ ಪ್ರಮಾಣ ಶೇ.52 ಆಗಿದೆ ಎಂದು ಅವರು ಹೇಳಿದರು.
ವಾಣಿಜ್ಯ ಬೆಳೆ ಬೆಳೆಯುವ ರೈತರು ನಿರಂತರ ವಿದ್ಯುತ್ ಒದಗಿಸುವಂತೆ ಮನವಿ ಮಾಡಿದ್ದು ಅದಕ್ಕೆ ಬಿಲ್ ಪಾವತಿಸುವ ಭರವಸೆಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸತತ ವಿದ್ಯುತ್ ಅಂಥ ರೈತರಿಗೆ ಒದಗಿಸಲು ಯೋಜನೆ ಸಿದ್ಧಗೊಳಿಸಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸದ್ಯ ವಿದ್ಯುತ್ ಬೇಡಿಕೆಯು 180 ಮಿಲಿಯನ್ ಯೂನಿಟ್ ಆಗಿದ್ದು ಈ ಪೈಕಿ 90 ಮಿಲಿಯನ್ ಯೂನಿಟ್ ವಿವಿಧ ಖಾಸಗಿಯವರಿಂದ ಲಭ್ಯವಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕವು ನೆರೆ ಹೊರೆಯ ರಾಜ್ಯಗಳಿಗಿಂತ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೇಸಿಗೆ ಚಿಂತೆ ಬೇಡ: ಪ್ರಸಕ್ತ ಬೇಸಿಗೆಯಲ್ಲಿ ವಿದ್ಯುತ್ ಅಭಾವವಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಮುಂದಿನ ಆರು ತಿಂಗಳವರೆಗೆ ಜಲ ವಿದ್ಯುತ್ ಯೋಜನೆಗಳಿಂದ ದೊರೆಯುವ ವಿದ್ಯುತ್‌ನಲ್ಲಿ ಪರಿಸ್ಥಿತಿ ನಿಭಾಯಿಸಲಾಗುತ್ತದೆ. ಅಗತ್ಯಬಿದ್ದಲ್ಲಿ ಛತ್ತೀಸ್‌ಗಡ, ಮಹಾರಾಷ್ಟ್ರ ಮತ್ತಿತರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಯೋಜಿಸಿದ್ದು, ಈಗಾಗಲೇ ಇಂಧನ ಸಚಿವಾಲ ಯದ ಹಿರಿಯ ಅಧಿಕಾರಿಗಳು ಹೊರರಾಜ್ಯಗಳೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆಂದು ತಿಳಿಸಿದರು.
ಶಕ್ತಿನಗರದ ಆರ್ಟಿಪಿಎಸ್‌ಗೆ ಬೇಸಿಗೆಯಲ್ಲಿ ನೀರಿನ ಅಭಾವವಾಗದಂತೆ ಬ್ಯಾರೇಜ್ ಕೃಷ್ಣಾ ನದಿಯ ನೀರು ಬಳಕೆ ಮಾಡುವಂತಾಗಲು ಬ್ಯಾರೇಜ್ ನಿರ್ಮಿಸಲು ಸರ್ಕಾರ ಯೋಜಿಸಿದ್ದು, ಈ ಬಗ್ಗೆ ನೀರಾವರಿ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಪ್ರತಿ ತಾಲೂಕಿನಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ ತೆರೆಯುವುದು ತಮ್ಮ ಉದ್ದೇಶವಾಗಿದೆ. ದುರಸ್ತಿ ಟೆಂಡರ್‌ನಲ್ಲಿ ಪಾಲ್ಗೊಳ್ಳದಿರುವುದು ಹಾಗೂ ಏಕಸ್ವಾಮ್ಯ ತಪ್ಪಿಸಲು ನಿರುದ್ಯೋಗಿ ಯುವಕರಿಗೆ ವಿದ್ಯುತ್ ಪರಿವರ್ತಕ ದುರಸ್ತಿ ಕುರಿತ ತರಬೇತಿ ಇಲಾಖೆಯಿಂದಲೇ ನೀಡಿ ಈ ಕಾರ್ಯಕ್ಕೆ ಬಳಸಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ್, ಶಾಸಕರಾದ ವೆಂಕಟೇಶ ನಾಯಕ, ಹಂಪಯ್ಯ ನಾಯಕ, ಮಾಜಿ ಶಾಸಕರಾದ ರಾಜಾ ರಾಯಪ್ಪ ನಾಯಕ, ಸೈಯದ್ ಯಾಸೀನ್ ಸೇರಿದಂತೆ ಅನೇಕರಿದ್ದರು.

ಇಎಸ್ಪಿ ವಿಭಾಗದ ಕುಸಿತ: ಸಿಬಿಐ ತನಿಖೆಗೆ ಆಗ್ರಹ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಫೆ.2
ಶಕ್ತಿನಗರ ಆರ್ಟಿಪಿಎಸ್‌ನ 8ನೇ ಘಟಕದ ಸ್ಥಾಯಿ ವಿದ್ಯುತ್ ಪರಿವರ್ತಕ ಕುಸಿತಕ್ಕೆ ಕಳಪೆ ಕಾಮಗಾರಿಯೇ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ನಡೆದ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಜಯಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಭಾನುವಾರ ಶಕ್ತಿನಗರದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸಂಘಟನೆ ಕಾರ್ಯಕರ್ತರು ಮನವಿ ಸಲ್ಲಿಸಿ, 2013ರ ಫೆ.16ರಂದು ರಾತ್ರಿ 8ನೇ ಘಟಕದ ಇಎಸ್ಪಿ ವಿಭಾಗದಲ್ಲಿ ಅವಘಡ ಸಂಭವಿಸಿ ಸ್ಥಾಯಿ ವಿದ್ಯುತ್ ಪರಿವರ್ತಕ ಕುಸಿದು ಬಿದ್ದಿದ್ದು, ಅದಕ್ಕೆ ಕಳಪೆ ಕಾಮಗಾರಿಯೇ ಕಾರಣ. ನಿರ್ಮಾಣ ಹಂತದಲ್ಲಿನ ಅಕ್ರಮದಿಂದಾಗಿಯೇ ಘಟನೆ ಸಂಭವಿಸಿದೆ ಎಂದು ದೂರಿದರು.
ಅಕ್ರಮದ ಸಮಗ್ರ ತನಿಖೆ ನಡೆಸಿ: ಈ ಘಟನೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ಅಪಾರ ಹಾನಿಯಾಗಿದೆ. ಇಎಸ್ಪಿ ನಿರ್ಮಾಣದ ಟೆಂಡರ್ ಪಡೆದ ಬಿಎಚ್‌ಇಎಲ್ ಸಂಸ್ಥೆ ಮತ್ತು ಕೆಪಿಸಿ ಹಿರಿಯ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದು, ಸಮಗ್ರ ತನಿಖೆ ಅವಶ್ಯಕ ಎಂದು ಒತ್ತಾಯಿಸಿದರು.
ಕಾಮಗಾರಿಯ ಗುತ್ತಿಗೆ ಪಡೆದಿದ್ದ ಬಿಎಚ್‌ಇಎಲ್ ಸಂಸ್ಥೆಯು ವಿವಿಧ ಕಂಪನಿಗಳಿಗೆ ತುಂಡು ಗುತ್ತಿಗೆ ನೀಡಿತ್ತು. ಆ ಕಾಮಗಾರಿಗಳನ್ನು ಪೂರೈಸಿದ ವಿವಿಧ ಕಂಪನಿಗಳು ಟೆಕ್‌ಪ್ರೋ ಕಂಪನಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ ಹೊಣೆ ವಹಿಸಿದ್ದು, ಈ ಸಂಸ್ಥೆಯು 6 ತಿಂಗಳ ಕಾಲ ಪರೀಕ್ಷಾರ್ಥ ಕಾರ್ಯನಿರ್ವಹಣೆ ಸಮರ್ಪಕ ನಡೆಸಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳ ಕೈವಾಡ?: ಇಎಸ್ಪಿ ಕುಸಿತದಲ್ಲಿ ಅಧಿಕಾರಿಗಳ ಕೈವಾಡವೂ ಇದೆ. ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದು, ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವುದು ತೀರಾ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐಗೆ ತನಿಖೆಯ ಕಾರ್ಯ ವಹಿಸುವಂತೆ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದರು.
ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಸದ್ಯ 3.30 ಲಕ್ಷ ಟನ್ ತಿರಸ್ಕೃತಗೊಂಡ ಕಲ್ಲಿದ್ದಲು ಸಂಗ್ರಹವಿದ್ದು, ಅದರಿಂದ ಸುತ್ತಲಿನ ಪ್ರದೇಶದ ನಿವಾಸಿಗಳಿಗೆ ತೊಂದರೆಯಾಗಿದೆ. ಕೆಪಿಸಿ ಅಧಿಕಾರಿಗಳು ಕೇವಲ 70 ಸಾವಿರ ಟನ್ ಇಂಥ ಕಲ್ಲಿದ್ದಲು ಟೆಂಡರ್ ಮೂಲಕ ವಿಲೇವಾರಿ ಮಾಡಲು ಮುಂದಾಗಿದ್ದು, ಇನ್ನುಳಿದ ಕಲ್ಲಿದ್ದಲು ಸಂಗ್ರಹ ಹಾಗೆಯೇ ಉಳಿದಿದೆ ಎಂದು ದೂರಿದರು.
ಸರ್ಕಾರಕ್ಕೆ ಆರ್ಥಿಕ ಹೊರೆ: ಸದ್ಯ ಬಳಕೆಯಾಗದೇ ಉಳಿದಿರುವ ತಿರಸ್ಕೃತ ಕಲ್ಲಿದ್ದಿಲು 2.60 ಲಕ್ಷ ಟನ್‌ನ ಮೊತ್ತ ಅಂದಾಜು 63.23 ಕೋಟಿ ಆಗುತ್ತದೆ. ಇಷ್ಟೊಂದು ಅಪಾರ ಪ್ರಮಾಣದ ಕಲ್ಲಿದ್ದಲಿನ ಸಂಗ್ರಹಿಸುವ ಮೂಲಕ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚಿಸುವ ಕಾರ್ಯ ಅಧಿಕಾರಿಗಳು ಮಾಡಿದ್ದಾರೆಂದು ಆರೋಪಿಸಿದರು.
ಕಾರಣ ಕೂಡಲೇ 70 ಸಾವಿರ ಟನ್ ವಿಲೇವಾರಿಗೆ ಕರೆದ ಟೆಂಡರ್ ರದ್ದುಗೊಳಿಸಿ ಒಂದೇ ಬಾರಿಗೆ ಎಲ್ಲ ತಿರಸ್ಕೃತ ಕಲ್ಲಿದ್ದಲು ವಿಲೇವಾರಿಗೆ ಟೆಂಡರ್ ಕರೆಯುವಂತೆ ಸಂಘಟನೆಯ ಜಿಲ್ಲಾಧ್ಯಕ್ಷ ಶಿವುಕುಮಾರ್ ಯಾದವ್ ಮತ್ತಿತರರಿದ್ದರು.

ಆರ್ಟಿಪಿಎಸ್, ವೈಟಿಪಿಎಸ್ ಸಚಿವ ಡಿಕೆಶಿ ಪರಿಶೀಲನೆ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಹಾಗೂ ನಿರ್ಮಾಣ ಹಂತದಲ್ಲಿರುವ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಮೊದಲಿಗೆ ಅವರು ಬೆಳಗ್ಗೆ ನಿರ್ಮಾಣ ಹಂತದಲ್ಲಿರುವ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳು ವಿದ್ಯುತ್ ಕೇಂದ್ರದ ಬಗ್ಗೆ ಮಾಹಿತಿ ನೀಡಿ, ಡಿಸೆಂಬರ್ ವೇಳೆಗೆ ವಿದ್ಯುತ್ ಕೇಂದ್ರದಲ್ಲಿ ತಲಾ 800 ಮೆ.ವ್ಯಾ.ನ ಎರಡು ಘಟಕಗಳು ಕಾರ್ಯಾರಂಭ ಮಾಡಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರ ಈ ಮೊದಲೇ ನಿಗದಿಪಡಿಸಿದಂತೆ ಡಿಸೆಂಬರ್ ವೇಳೆಗೆ ಕಾಮಗಾರಿ ರ್ಪೂರ್ಣಗೊಳಿಸುವ ನಿಟ್ಟಿನಲ್ಲಿ ನಿರ್ಮಾಣ ಕಾರ್ಯ ಚುರುಕುಗೊಳಿಸಲು ಈ ಸಂದರ್ಭದಲ್ಲಿ ಸಚಿವರು ಸೂಚನೆ ನೀಡಿದರು. ನಂತರ ಅವರು ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
ಆನಂತರದಲ್ಲಿ ಅವರು ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಿದರು. ಕೇಂದ್ರದಲ್ಲಿ ಸಸಿ ನೆಟ್ಟ ಅವರು, ಕಲ್ಲಿದ್ದಲು ವ್ಯಾಗನ್‌ನಿಂದ ಇಳಿಸುವ ಬಗೆಯನ್ನು ವೀಕ್ಷಿಸಿದರು. ಹಾಗೆಯೇ ಕಲ್ಲಿದ್ದಲು ಲಭ್ಯತೆ ಮತ್ತಿತರೆ ಮಾಹಿತಿ ಪಡೆದರು.
ಅದೇ ರೀತಿ ಅವರು ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆ ಕೇಂದ್ರಕ್ಕೆ ಭೇಟಿ ಅಧಿಕಾರಿಗಳಿಂದ ವಿವಿಧ ಮಾಹಿತಿ ಕೇಳಿ ತಿಳಿದುಕೊಂಡರು.
ಕಾಂಗ್ರೆಸ್ ಶಾಸಕರಾದ ಹಂಪಯ್ಯ ನಾಯಕ, ವೆಂಕಟೇಶ ನಾಯಕ, ಮಾಜಿ ಶಾಸಕರಾದ ರಾಜಾ ರಾಯಪ್ಪ ನಾಯಕ, ಸೈಯದ್ ಯಾಸೀನ್ ಸೇರಿದಂತೆ ಕೆಪಿಸಿ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement