ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಚಿವರ ಭೇಟಿ ಮಾಹಿತಿಗೆ ಕಾಂಗ್ರೆಸ್ ಬಣದ ಬ್ರೇಕ್

Srinivasa Murthy VN
Updated On : 3 Feb 2014, 11:24 am

ರಾಯಚೂರು: ಜಿಲ್ಲೆಗೆ ಸಚಿವ ಡಿ.ಕೆ. ಶಿವಕುಮಾರ್ ಭಾನುವಾರ ಭೇಟಿ ನೀಡುವ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮತ್ತಿತರರಿಗೆ ಮಾಹಿತಿ ನೀಡದ ಬಗ್ಗೆ ತೀವ್ರ ಬೇಸರಗೊಂಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ್, ಸಚಿವರ ಎದುರು ಅಸಮಾಧಾನ ತೋಡಿಕೊಂಡ ಘಟನೆ ನಡೆಯಿತು.
ಶಕ್ತಿನಗರದ ಕೆಪಿಸಿ ಅತಿಥಿ ಗೃಹದಲ್ಲಿ ಭಾನುವಾರ ಬೆಳಗ್ಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಆರ್ಟಿಪಿಎಸ್ ಭೇಟಿ ಹಿನ್ನೆಲೆಯಲ್ಲಿ ಆಗಮಿಸಿ ತಂಗಿದ್ದರು. ಆದರೆ ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ಮಾಜಿ ಶಾಸಕ ಪಾಪಾರೆಡ್ಡಿ, ಮುಖಂಡ ಪಾರಸಮಲ್ ಸುಖಾಣಿ ಮತ್ತಿತರರಿಗೆ ಈ ಬಗ್ಗೆ ಮಾಹಿತಿ ಹೋಗಿರಲಿಲ್ಲ ಎಂದು ಹೇಳಲಾಗಿದೆ.
ಸಚಿವರ ಆಗಮನದ ಸುದ್ದಿ ತಿಳಿದು ಧಾವಿಸಿದ ವಸಂತಕುಮಾರ್ ಮತ್ತಿತರರು, ಸಚಿವರ ಪ್ರವಾಸದ ಬಗ್ಗೆ ತಮಗೆ ಯಾವುದೇ ರೀತಿಯ ಮಾಹಿತಿಯಿಲ್ಲ. ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕೇವಲ ಕೆಲವೇ ಕೆಲ ನಾಯಕರಿಗೆ ಮಾಹಿತಿ ನೀಡಿರುವುದು ಸರಿಯೇ ಸಚಿವರಿಗೆ ಆಕ್ಷೇಪಿಸಿದರು.
ಡಿಸಿಸಿ ಕಚೇರಿಗೆ ಹಾಗೂ ತಮಗ್ಯಾರಿಗೂ ಈ ಬಗ್ಗೆ ಗೊತ್ತಿಲ್ಲ. ಆದರೆ ಕಾಂಗ್ರೆಸ್‌ನ ಕೆಲವೇ ಕೆಲವರಿಗೆ ಸಚಿವರ ಕಚೇರಿಯಿಂದ ಮಾಹಿತಿ ನೀಡಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಎಲ್ಲರಿಗೂ ತಿಳಿಯಪಡಿಸುವ ಕಾರ್ಯ ಕಚೇರಿಯಿಂದ ಮಾಡಲಾಗಿದೆ. ಮುಂದೆ ಹಾಗಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಗೊಂದಲಕ್ಕೆ ತೆರೆ ಎಳೆಯಲು ಯತ್ನಿಸಿದರಾದರೂ ಅಸಮಾಧಾನ ಪರಿಹಾರ ಕಾಣಲಿಲ್ಲ.
ಗುಂಪುಗಾರಿಕೆ ಬಯಲು: ಸಚಿವರ ಸಮ್ಮುಖದಲ್ಲಿಯೇ ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಎರಡು ಗುಂಪುಗಳ ಬಣ ರಾಜಕೀಯ ಭಾನುವಾರದ ಘಟನೆಯಿಂದ ಸ್ಪಷ್ಟವಾಯಿತು. ಸಚಿವ ಡಿ.ಕೆ. ಶಿವಕುಮಾರ್ ಅವರ ಭೇಟಿಯ ಬಗ್ಗೆ ಜಿಲ್ಲಾಧ್ಯಕ್ಷರ ಕಡೆಯವರಿಗೆ ತಿಳಿಯದಂತೆ ಮಾಜಿ ಶಾಸಕ ಬೋಸರಾಜು ಕಡೆಯವರು ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಮೊದಲಿನಿಂದಲೂ ಬಣ ರಾಜಕೀಯ ಜಿಲ್ಲೆಯ ಕಾಂಗ್ರೆಸ್‌ಗೆ ಹೊಸತೇನಲ್ಲ. ಆದರೆ ಜಿಲ್ಲೆಗೆ ಆಗಮಿಸುವ ಸಚಿವರನ್ನು ಎರಡೂ ಕಡೆಯವರು ತಾಮುಂದು ನಾಮುಂದು ಎಂಬಂತೆ ಸ್ವಾಗತಿಸುವುದು ಹಾಗೂ 'ಕೈ'ಗೆ ಸಿಗದಂತೆ ಕರೆದೊಯ್ಯುವುದು ತೀರಾ ಸಾಮಾನ್ಯ. ಸದ್ಯ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಕೆಪಿಸಿಸಿ ನಾಯಕರಿಗೆ ಜಿಲ್ಲಾ ಕಾಂಗ್ರೆಸ್‌ನ ಒಳಜಗಳದ ಗಂಭೀರತೆ ಅರ್ಥವಾದಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement