ಸಮಸ್ಯೆಗಳ ಪರಿಹಾರಕ್ಕೆ ಸಾಲು ಸಾಲು ಅಹವಾಲು
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಫೆ.2
ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಸುತ್ತಲಿನ ಗ್ರಾಮಗಳ ಬಡ ಕೂಲಿಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವಂತೆ ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ.
ಈ ಕುರಿತು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಭಾನುವಾರ ಶಕ್ತಿನಗರದಲ್ಲಿ ಮನವಿ ಸಲ್ಲಿಸಿ, ರಾಯಚೂರು ತಾಲೂಕಿನ ಏಗನೂರು, ಕೂಡ್ಲೂರು, ಕುಕನೂರು, ವಡ್ಲೂರು ಸೇರಿ ವಿವಿಧ ಗ್ರಾಮಗಳ ಜನತೆ ಸಾವಿರಾರು ಎಕರೆ ಜಮೀನು ವೈಟಿಪಿಎಸ್ ವಿದ್ಯುತ್ ಕೇಂದ್ರಕ್ಕಾಗಿ ನೀಡಿದ್ದಾರೆ. ಅವರಿಗೆ ಜಮೀನು ನೀಡಿದ್ದರಿಂದ ಕೆಲಸವಿಲ್ಲದಂತಾಗಿದ್ದು, ಕೂಡಲೇ ವೈಟಿಪಿಎಸ್ ಕೇಂದ್ರದಲ್ಲಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಆನಂದ ಏಗನೂರು, ಸುರೇಶ ದುಗನೂರು, ಹನುಮಂತ ಅಕ್ಕರಕಿ, ಬಸಪ್ಪ ಸುಂಕನೂರು, ಎಂ.ವೀರೇಶ್ ಮತ್ತಿತರರಿದ್ದರು.
ಸಿಐಟಿಯು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸುವಂತೆ ಸಿಐಟಿಯು ಒತ್ತಾಯಿಸಿದೆ.
ಶಕ್ತಿನಗರದಲ್ಲಿ ಭಾನುವಾರ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, ಆರ್ಟಿಪಿಎಸ್ನ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರ ನೇಮಕಗೊಳಿಸುವುದನ್ನು ಸರ್ಕಾರ 2005ರಲ್ಲಿಯೇ ರದ್ದುಗೊಳಿಸಿದೆ. ಆದರೆ ಆದೇಶದ ಜಾರಿಯಾಗಿಲ್ಲ ಎಂದು ಟೀಕಿಸಿದರು.
ವಿದ್ಯುತ್ ಕೇಂದ್ರದಲ್ಲಿ 116 ಗುತ್ತಿಗೆದಾರರಿಗೆ ಪರವಾನಗಿ ನೀಡಿದ್ದು, ಅವರಿಂದ 3,634 ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. ಗುತ್ತಿಗೆ ಕಾರ್ಮಿಕರಿಗೆ ಗುತ್ತಿಗೆದಾರರು ಒಟ್ಟು 200 ಪ್ರತಿ ದಿನ ಪಾವತಿಸುತ್ತಿದ್ದು, ಆದರೆ ಬೆ.8ರಿಂದ ಸಂಜೆಯ 5ರವರೆಗೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ನೇಮಕಾತಿ ಕಾನೂನುಬಾಹಿರ: ಗುತ್ತಿಗೆ ಕಾರ್ಮಿಕರ ನೇಮಕಾತಿ ಕಾನೂನುಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ಆರ್ಟಿಪಿಎಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಆದೇಶ ಕೂಡಲೇ ಹೊರಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಅದೇ ರೀತಿ ಇಡೀ ರಾಜ್ಯದ ಶೇ.40ರಷ್ಟು ವಿದ್ಯುತ್ ಬೇಡಿಕೆ ನೀಗಿಸುವ ಆರ್ಟಿಪಿಎಸ್ನಿಂದ ರಾಯಚೂರು ಜಿಲ್ಲೆಯ ವಿದ್ಯುತ್ ಅವಶ್ಯಕತೆ ಈಡೇರಿಸಬೇಕು. ಜಿಲ್ಲೆಯ ವಿದ್ಯುತ್ ಕ್ಷೇತ್ರದ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಯ ಪ್ರಮುಖರಾದ ಡಿ.ಎಸ್. ಶರಣಬಸವ, ಎಚ್.ಪದ್ಮಾ, ಚನ್ನಬಸಯ್ಯ ಆಗ್ರಹಿಸಿದರು.
ನೌಕರರ ಒಕ್ಕೂಟ: ಕೆಪಿಸಿ ನಿಗಮದ ಆರ್ಥಿಕ ಸಂಕಷ್ಟವನ್ನು ದೂರವಾಗಿಸುವ ನಿಟ್ಟಿನಲ್ಲಿ ನೂತನ ಯೋಜನೆಗಳನ್ನು ಕೈಗೊಂಡು ಕಾರ್ಮಿಕರನ್ನು ನೇಮಿಸಿಕೊಳ್ಳುವಂತೆ ರಾಯಚೂರು ಥರ್ಮಲ್ ಪವರ್ ಸ್ಟೇಷನ್ ಎಂಪ್ಲಾಯೀಸ್ ಯೂನಿಯನ್ ಹಾಗೂ ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಒತ್ತಾಯಿಸಿದೆ.
ಈ ಕುರಿತು ಸಚಿವರಿಗೆ ಭಾನುವಾರ ಮನವಿ ಸಲ್ಲಿಸಿದ ಸಂಘಟನೆಯ ಕಾರ್ಯಕರ್ತರು, ಕೆಪಿಸಿ ಆರ್ಥಿಕ ಪರಿಸ್ಥಿತಿ ದುಸ್ಥಿತಿಗೆ ತಲುಪಿದ್ದು, ನೌಕರರ ಸಂಬಳಕ್ಕೂ ಪರದಾಡುವಂತಾಗಿದೆ. ಕೆಪಿಟಿಸಿಎಲ್ ನಿಂದ ಕೆಪಿಸಿಗೆ ಬರಬೇಕಿರುವ 12 ಸಾವಿರ ಕೋಟಿ ಬಾಕಿಯನ್ನು ಶೀಘ್ರ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಂತ್ರಸ್ತರಿಗೆ ನಿಗಮದಲ್ಲಿ ಉದ್ಯೋಗ ಕೊಡಿ: ಆರ್ಟಿಪಿಎಸ್ ಘಟಕಗಳಿಗೆ ಜಮೀನು ಮತ್ತು ಮನೆ ಜಾಗ ನೀಡದವರಿಗೆ ನಿಗಮದಲ್ಲಿ ಉದ್ಯೋಗ ನೀಡಬೇಕು. ಇನ್ನೂ 200 ಜನರಿಗೆ ಈ ನಿಟ್ಟಿನಲ್ಲಿ ಸರ್ಕಾರ ಉದ್ಯೋಗ ಕೊಡದೇ ಬಾಕಿ ಉಳಿಸಿಕೊಂಡಿದೆ. ವಿದ್ಯುತ್ ಕೇಂದ್ರದಲ್ಲಿ ಕಳೆದ 15- 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರ ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿದರು.
ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ 4 ಜನ ಕಾರ್ಮಿಕರ ಕುಟುಂಬಗಳಿಗೆ ನಿಗಮದಿಂದ ಉದ್ಯೋಗದ ಭರವಸೆ ನೀಡಿದ್ದರೂ ಈವರೆಗೆ ಉದ್ಯೋಗ ನೀಡಿಲ್ಲ. ಕೂಡಲೇ ಕುಟುಂಬದವರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.
ಕ್ಷೇಮಾಭಿವೃದ್ಧಿ ಸಂಘ: ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಜಮೀನು ನೀಡಿದ ಭೂ ಸಂತ್ರಸ್ತರಿಗೆ ಕಾಯಂ ಉದ್ಯೋಗ ನೀಡುವಂತೆ ರಾಯಚೂರು ಕೈಗಾರಿಕೆ ಬೆಳವಣಿಗೆ ಕೇಂದ್ರದ ಭೂಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಈ ಕುರಿತು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಭಾನುವಾರ ಶಕ್ತಿನಗರದಲ್ಲಿ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ವೈಟಿಪಿಎಸ್ ವಿದ್ಯುತ್ ಕೇಂದ್ರದ ಸ್ಥಾಪನೆಗೆ 858 ಎಕರೆ ಫಲವತ್ತಾದ ಜಮೀನನ್ನು ರೈತರು ಒದಗಿಸಿದ್ದಾರೆ. ಅಂಥವರ ಕುಟುಂಬಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಮೂಲ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ: ವೈಟಿಪಿಎಸ್ ಸುತ್ತಲಿನ ಚಿಕ್ಕಸೂಗೂರು, ವಡ್ಲೂರು ಮತ್ತಿತರೆ ಗ್ರಾಮಗಳನ್ನು ದತ್ತುಗ್ರಾಮಗಳೆಂದು ಪಡೆದಿರುವ ಕೆಪಿಸಿಯು ಗ್ರಾಮಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ. ಮೂಲಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡದೇ ನಿರ್ಲಕ್ಷ್ಯ ತೋರಲಾಗಿದೆ ಎಂದು ಸಚಿವರಿಗೆ ದೂರಿದರು.
ಪರಿಸರಕ್ಕೆ ಧಕ್ಕೆಯಾಗದಂತೆ ಈಗಿನಿಂದಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಭೂಸಂತ್ರಸ್ತರಿರುವ ಗ್ರಾಮಗಳಿಗೆ 24 ಗಂಟೆ ಸತತ ಉಚಿತ ವಿದ್ಯುತ್ ಒದಗಿಸುವತ್ತ ಸರ್ಕಾರ ಕೂಡಲೇ ಗಮನಹರಿಸುವಂತೆ ಸಂಘಟನೆಯ ಅಧ್ಯಕ್ಷ ಶಿವಶರಣಗೌಡ, ಪ್ರಧಾನ ಕಾರ್ಯದರ್ಶಿ ಬಸವರಾಜ ವಕೀಲರು ಸೇರಿದಂತೆ ಅನೇಕರು ಆಗ್ರಹಿಸಿದರು.