ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ರೈತ ಸಂಘ ಒತ್ತಾಯ
ಲಿಂಗಸ್ಗೂರು: ಸರ್ಕಾರ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದ ರೈತರ ಸಭೆಯಲ್ಲಿ ಒತ್ತಾಯಿಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಲ ಮನ್ನಾದಂತಹ ಯೋಜನೆಗಳು ಬೇಕಾದರೆ ಸ್ಥಗಿತಗೊಳಿಸಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಉತ್ತರ ಕರ್ನಾಟಕದ ಪ್ರಮುಖ ಬೆಳೆ ಕಡಲೆಗೆ ಕೇಂದ್ರ ಸರ್ಕಾರದ 3200 ಬೆಂಬಲ ಬೆಲೆ ಘೋಷಣೆ ಮಾಡಿದೆ. ಇದಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಿ 5 ಸಾವಿರಗೆ ಖರೀದಿಸಬೇಕು. ತೊಗರಿಗೆ 6000 ನಿಗದಿಪಡಿಸಬೇಕು. ಬತ್ತಕ್ಕೆ 2500. ಬಿಳಿಜೋಳಕ್ಕೆ 3000, ಸಜ್ಜೆಗೆ 2500 ನಿಗದಿಪಡಿಸಬೇಕೆಂದು ಒತ್ತಾಯಿಸಲಾಗುವುದು.
ಜಿಲ್ಲೆಯಲ್ಲಿ ಕಳೆದ 2 ತಿಂಗಳಿಂದ ಅವಿರತವಾಗಿ ಹೋರಾಟ ನಡೆಸುತ್ತಾ ಬರಲಾಗಿದ್ದು, ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಹಾಗೂ ಕರ್ನಾಟಕ ಆಯಿಲ್ ಫೆಡರೇಷನ್‌ಯಿಂದ ಶೇಂಗಾ, ಸೂರ್ಯಕಾಂತಿ ಖರೀದಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ರೈತರು ಎಚ್ಚೆತ್ತುಕೊಂಡು ಖರೀದಿ ಕೇಂದ್ರದಲ್ಲಿ ಮಾಲು ಕೊಡಬೇಕು. ಖರೀದಿ ಕೇಂದ್ರದಲ್ಲಿ ರೈತರಿಗೆ ಯಾವುದೇ ತೊಂದರೆಯಾದರೆ ರೈತ ಸಂಘಕ್ಕೆ ಮಾಹಿತಿ ನೀಡುವಂತೆ ಕೋರಿದರು. ಮುಖ್ಯಮಂತ್ರಿಗಳ ಸಭೆಯಲ್ಲಿ ಕಡಲೆಗೆ ಬೆಂಬಲ ಬೆಲೆ ನಿಗದಿಪಡಿಸದಿದ್ದರೆ ರೈತರೊಂದಿಗೆ ಹೋರಾಟ ನಡೆಸುವುದಾಗಿ ಎಚ್ಚರಿಗೆ ನೀಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದೇಶ ಗೌಡೂರು, ಮುಖಂಡರಾದ ಅಮರೇಗೌಡ ಗೋನವಾಟ್ಲ, ಮುದುಕಪ್ಪ ಹಂಚಿನಾಳ, ಕುಪ್ಪಣ್ಣ ಇದ್ದರು.