ಚಿನ್ನದ ಗಣಿ ಸಹಕಾರ ಸಂಘ ರದ್ದತಿಗೆ ವಿರೋಧ; ತೀವ್ರ ಹೋರಾಟಕ್ಕೆ ನಿರ್ಧಾರ
ಕ.ಪ್ರ. ವಾರ್ತೆ ರಾಯಚೂರು ಫೆ.4
ಹಟ್ಟಿ ಚಿನ್ನದ ಗಣಿಯಿಂದ ಸ್ಥಾಪಿತ ಗಣಿ ಸಹಕಾರಿ ಸಂಘ ರದ್ದತಿಯನ್ನು ವಿರೋಧಿಸಿ ಕಳೆದ 34 ದಿನಗಳಿಂದ ನಡೆಸುತ್ತಿರುವ ಹೋರಾಟವನ್ನು ಗಣಿ ಆಡಳಿತ ಕಡೆಗಣಿಸಿರುವ ಹಿನ್ನೆಲೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಎಐಟಿಯುಸಿ ಮುಖಂಡರಾದ ಬಾಷುಮಿಯಾ, ಅಮೀರ್ ಅಲಿ ಎಚ್ಚರಿಸಿದರು.
ನಗರದಲ್ಲಿ ಮಂಗಳವಾರ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1947ರ ಜೂನ್‌ನಲ್ಲಿ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಹೈದರಾಬಾದ್ ಚಿನ್ನ ಅಭಿವೃದ್ಧಿ ಸಹಕಾರಿ ಸಂಘ ಎಂಬ ಹೆಸರಿನಿಂದ ಆರಂಭಗೊಂಡ ಸಹಕಾರ ಸಂಘವು ಆನಂತರದಲ್ಲಿ 1985ರಲ್ಲಿ ಹಟ್ಟಿ ಚಿನ್ನದ ಗಣಿ ಸಹಕಾರ ಸಂಘವಾಗಿ ಸಹಕಾರಿ ಕಾಯಿದೆಯಲ್ಲಿನ ಮಾರ್ಪಾಟಿನಿಂದಾಗಿ ಬದಲಾವಣೆ ಕಂಡಿದೆ.
ಹಟ್ಟಿ ಪಟ್ಟಣದಲ್ಲಿ ಗಣಿಗಾರಿಕೆ ಆರಂಭವಾದ ಸಂದರ್ಭದಲ್ಲಿ ಆಹಾರ ಧಾನ್ಯ ದೊರೆಯದ ಪ್ರದೇಶವಾಗಿತ್ತು. ಆ ಹಿನ್ನೆಲೆಯಲ್ಲಿ ಸಹಕಾರ ಸಂಘ ಸ್ಥಾಪಿಸಿ ಅದರ ಮೂಲಕ ಗಣಿ ಕಾರ್ಮಿಕರಿಗೆ ಆಹಾರಧಾನ್ಯ ಮತ್ತಿತರೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವುದು ಉದ್ದೇಶವಾಗಿತ್ತು ಎಂದು ತಿಳಿಸಿದರು.
ಸಂಘ ಆರ್ಥಿಕ ಸಂಕಷ್ಟದಲ್ಲಿ: ಪ್ರತಿ ತಿಂಗಳು ಸಹಕಾರ ಸಂಘಕ್ಕಾಗಿ ಗಣಿ ಕಾರ್ಮಿಕರ ವೇತನದಲ್ಲಿ ಕೆಲ ಪಾಲು ಕಡಿತಗೊಳಿಸಲಾಗುತ್ತಿತ್ತು. ಹಾಗೆಯೇ ಕಾರ್ಮಿಕರು ಖರೀದಿಸಿದ ಪ್ರತಿ ಸಾಮಗ್ರಿ ಮತ್ತು ಆಹಾರ ಧಾನ್ಯ ಮಾರಾಟದಿಂದ ಬರುತ್ತಿದ್ದ ಆದಾಯದಲ್ಲಿಯೇ ಸಹಕಾರಿ ಸಂಘವು ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿಸಿದರು.
ಕಳೆದ 67 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸಹಕಾರಿ ಸಂಘಕ್ಕೆ ಗಣಿ ಆಡಳಿತವೂ ಶೇರುದಾರರಾಗಿದ್ದು, ಅದೂ ಸಹ ಸಂಘದ ವಹಿವಾಟಿಗೆ ಅಗತ್ಯ ಕಟ್ಟಡ, ಸಾರಿಗೆ, ನೀರು, ವಿದ್ಯುತ್ ಹಾಗೂ ಕಲ್ಯಾಣ ನಿಧಿಯಿಂದ ಆರ್ಥಿಕ ಸಹಾಯ ನೀಡುತ್ತಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಸಂಘವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು.
ಗಣಿ ಕಂಪನಿಯ ಆಡಳಿತ ಮಂಡಳಿಯ ಕಾರ್ಯವೈಖರಿಯಿಂದಾಗಿಯೇ ಸಹಕಾರಿ ಸಂಘವು ಆರ್ಥಿಕ ನಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಸಂಘವನ್ನು ಗಣಿ ಮಂಡಳಿಯು ಸದ್ಯ ರದ್ದುಗೊಳಿಸಲು ಯೋಜಿಸಿದ್ದು, ಇದರಿಂದ ಸಂಘದಲ್ಲಿ ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರ ಬದುಕು ಅತಂತ್ರಕ್ಕೆ ಸಿಲುಕಲಿದೆ ಎಂದು ಆರೋಪಿಸಿದರು.
34 ದಿನಗಳಿಂದ ಹಟ್ಟಿಯಲ್ಲಿ ಹೋರಾಟ: ಕಾರ್ಮಿಕರು ಸಹಕಾರ ಸಂಘ ಮುಚ್ಚುವ ಬದಲಿಗೆ ಡಿಪಾರ್ಟ್‌ಮೆಂಟಲ್ ಸ್ಟೋರ್ ಆಗಿ ಪರಿವರ್ತಿಸಿ ಅಗತ್ಯ ಸಿಬ್ಬಂದಿಯನ್ನು ಮಾತ್ರ ಉಳಿಸಿಕೊಂಡು ಇನ್ನುಳಿದವರನ್ನು ಗಣಿ ಕಚೇರಿಯಲ್ಲಿ ಕೆಲಸ ನೀಡುವಂತೆ ಬೇಡಿಕೆಯಿರಿಸಿದ್ದು, ಈ ಬಗ್ಗೆ ಅನೇಕ ಸಮಿತಿಗಳನ್ನು ಆರಂಭದಲ್ಲಿ ರಚಿಸಿದ ಆಡಳಿತ ಮಂಡಳಿಯು ಈಗ ಏಕಪಕ್ಷೀಯವಾಗಿ ಸ್ಟೋರ್ ಆರಂಭಕ್ಕೆ ಟೆಂಡರ್ ಕರೆಯುವ ಕಾರ್ಯಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಕಾರ್ಮಿಕರು ಆಡಳಿತ ಮಂಡಳಿಯ ಕ್ರಮ ಖಂಡಿಸಿ ಹೋರಾಟಕ್ಕಿಳಿದಿದ್ದರಿಂದ ಸದ್ಯ ಟೆಂಡರ್ ಪ್ರಕ್ರಿಯೆ ತಡೆಹಿಡಿದಿದೆ. ಕಾರ್ಮಿಕರ ಬೇಡಿಕೆಯಂತೆ ಆಡಳಿತವು ಸಹಕಾರ ಸಂಘವನ್ನು ಸಂಪೂರ್ಣ ವಹಿಸಿಕೊಂಡು ಡಿಪಾರ್ಟ್‌ಮೆಂಟಲ್ ಸ್ಟೋರ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಒಪ್ಪಿದ್ದ ಆಡಳಿತವು ಈಗ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ ಎಂದು ವಿರೋಧಿಸಿ ಕಳೆದ 34 ದಿನಗಳಿಂದ ಹಟ್ಟಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹೋರಾಟ ತೀವ್ರಕ್ಕೆ ನಿರ್ಧಾರ: ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಗಣಿ ಆಡಳಿತವು ಇದುವರೆಗೆ ಮಣಿದಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲು ನಿರ್ಧರಿಸಿದೆ. ಸಿಪಿಐ, ಸಿಐಟಿಯು, ಕರ್ನಾಟಕ ರೈತ ಸಂಘ, ಕರವೇ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಜತೆಗೂಡಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಂಗಯ್ಯ ಸ್ವಾಮಿ ಚಿಂಚರಕಿ, ಮುತ್ತಪ್ಪ, ಶಾಂತಪ್ಪ ಮಳ್ಳಿ, ಶೌಕತ್ ಅಲಿ, ಕಾಳಮ್ಮ ಮೀರಾ ಪವಾರ್, ವನಿತಾ, ಶಿವರಾಂ ಇದ್ದರು.