ದೇವದುರ್ಗಕ್ಕೆ ನ್ಯಾ. ಮಜಗೆ ಭೇಟಿ; ಅಭಿವೃದ್ಧಿ ಪರಿಶೀಲನೆ
ದೇವದುರ್ಗ: ರಾಜ್ಯದ ಉಪ ಲೋಕಾಯುಕ್ತ ಎಸ್.ಬಿ. ಮಜಗೆ ಅವರು ಮಂಗಳವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರದಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲ್ಲಿಕೆಯಾದ ದೂರುಗಳ ಪರಿಶೀಲನೆಗೆ ತಾಲೂಕಿನ ವಿವಿಧೆಡೆ ಭೇಟಿ ನೀಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ತಾಲೂಕಿನ ರಾಮದುರ್ಗ, ಮಸರಕಲ್, ವೀರಗೋಟ ಹಾಗೂ ಪಟ್ಟಣದ ವಿವಿಧ ಇಲಾಖೆಗಳ ಕಚೇರಿಗಳಿಗೂ ಭೇಟಿ ನೀಡಿದ ಅವರು, ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಅಭಿವೃದ್ಧಿಗಾಗಿ ಕಳೆದ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದು, ಅದರ ಬಳಕೆಯ ಬಗ್ಗೆ ದೂರುಗಳು ಬಂದಿವೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಕೆಲ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಮಸರಕಲ್ ಗ್ರಾಮದ ಶಾಲೆಗೆ 1.25 ಲಕ್ಷ ಅನುದಾನದಲ್ಲಿ ಶಾಲಾ ಕೋಣೆ ನಿರ್ಮಾಣ ಗುಣಮಟ್ಟ ಕಳಪೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಮದುರ್ಗದಲ್ಲಿ ಸಮುದಾಯ ಭವನ ನಿರ್ಮಿಸಿದ್ದು, ಉದ್ಘಾಟನೆ ಪೂರ್ವದಲ್ಲಿಯೇ ಬಿರುಕು ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಮದುರ್ಗದ ಕೆರೆ ಕಾಮಗಾರಿ ಕಳಪೆಯಾಗಿದೆ. ಅದರಿಂದ ತಾಲೂಕಿನಲ್ಲಿ ಸರ್ಕಾರದ ಹಣ ಸದ್ಬಳಕೆ ಆಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ ಅವರು, ರಾಮದುರ್ಗದ ಅಂಗನವಾಡಿ ಕೇಂದ್ರಕ್ಕೆ ಬೆಳಗ್ಗೆ 10 ಗಂಟೆಯಾದರೂ ಶಿಕ್ಷಕಿ ಆಗಮಿಸದಿರುವುದು ಗಮನಕ್ಕೆ ಬಂದಿದ್ದಾಗಿ ಹೇಳಿದರು. ಜಿಲ್ಲಾ ಲೋಕಾಯುಕ್ತ ಎಸ್ಪಿ ಸೇರಿದಂತೆ ವಿವಿಧ ಇವಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು.