ದೊರೆಯದ ನೀರು; ಬೆಳೆ ಸಂರಕ್ಷಣೆಗೆ ಇಂದು ರೈತರ ಹೋರಾಟ
-ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ ರಾಯಚೂರು ಫೆ.4
ಬಿರುಬೇಸಿಗೆಯ ಆರಂಭಕ್ಕೂ ಮುನ್ನವೇ ತುಂಗಭದ್ರಾ ಎಡದಂಡೆ ಕಡೆಯ ಭಾಗದಲ್ಲಿ ನೀರಿಲ್ಲದೇ ಬತ್ತಿದೆ. ಪರಿಣಾಮ ರೈತರು ಬೆಳೆ ರಕ್ಷಣೆಗೆ ಹೋರಾಟಕ್ಕೆ ಮುಂದಾಗುವುದು ಈಗ ಅನಿವಾರ್ಯವಾಗಿದೆ. ಕಾಲುವೆಯ ಮೇಲ್ಭಾಗದಲ್ಲಿ ನೀರಿನ ಅಕ್ರಮ ಬಳಕೆ, ಪೋಲು ಮಾಡುವಂಥ ಕಾರ್ಯ ಜಾರಿಯಲ್ಲಿದ್ದು, ಅದರ ವಿರುದ್ಧ ಸಂಘರ್ಷಕ್ಕೆ ದಾರಿಯಾಗಿದೆ. ರೈತರು ಫೆ.5ರಂದು ರಸ್ತೆ ತಡೆ ಚಳವಳಿಗೆ ಮುಂದಾಗಿದ್ದು ಶಾಸಕರ ನೇತೃತ್ವ ದೊರೆತಿದೆ.
ಕಳೆದ ಅನೇಕ ವರ್ಷಗಳಿಂದ ತುಂಗಭದ್ರಾ ಎಡದಂಡೆ ಕಡೆಯ ಭಾಗದ ರೈತರಿಗೆ ಮುಂಗಾರು ಹಂಗಾಮು ಸೇರಿದಂತೆ ವರ್ಷವಿಡೀ ನೀರಿನ ಅಭಾವ ಕಾಡತೊಡಗಿದೆ. ನೀರಿನ ಅಸಮರ್ಪಕ ನಿರ್ವಹಣೆ, ಅಗತ್ಯಕ್ಕಿಂತ ಹೆಚ್ಚಿನ ನೀರು ಹರಿಸಿಕೊಳ್ಳುವ ಕಾಲುವೆಯ ಮೇಲ್ಭಾಗದ ರೈತರು, ಹಳ್ಳದ ಮೂಲಕ ಆಂಧ್ರಕ್ಕೆ ಹರಿದು ಹೋಗುವ ಕರ್ನಾಟಕದ ಪಾಲಿನ ನೀರಿನ ತಡೆಗೆ ಜರುಗದ ಕ್ರಮದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಲೇ ಸಾಗಿದ್ದಾರೆ.
ಪ್ರಸಕ್ತ ವರ್ಷವೂ ರೈತರಿಗೆ ನೀರಿನ ಅಭಾವ ಕಾಡತೊಡಗಿದೆ. ಅದರಲ್ಲೂ ಪ್ರತಿ ವರ್ಷ ಬೇಸಿಗೆಯ ಆರಂಭದಲ್ಲಿ ಕಾಡುತ್ತಿದ್ದ ನೀರಿನ ಅಭಾವ ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ಬಂದು ನಿಂತಿದೆ. ಎಡದಂಡೆ ಕಾಲುವೆಯ 104ನೇ ಮೈಲ್ ಕೆಳಭಾಗದಲ್ಲಿ ನೀರಿನ ಅಭಾವ ಉಂಟಾಗಿದೆ. ಪರಿಣಾಮ ರೈತರು 60 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಹತ್ತಿ, ಮೆಣಸಿನ ಕಾಯಿ, ಬತ್ತ ಮತ್ತಿತರೆ ಬೆಳೆ ಬೆಳೆದಿದ್ದು ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುವಂತಾಗಿದೆ.
ಈಡೇರದ ಭರವಸೆಗಳು: ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ರೈತರದ್ದು ಒಂದೇ ಬೇಡಿಕೆ, ಬೆಳೆಗಳಿಗೆ ನೀರು ಕೊಡಿ ಎಂಬುದು. ಆದರೆ ರೈತರ ಕೂಗಿಗೆ ಬೆಲೆ ಮಾತ್ರ ಬಂದಿಲ್ಲ. ಆಗೊಮ್ಮೆ ಈಗೊಮ್ಮೆ ಜಿಲ್ಲೆಗೆ ಬಂದು ಹೋಗುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ನೀರು ದೊರೆಯುತ್ತದೆ ಎಂದು ಭರವಸೆ ನೀಡಿದ್ದೇ ಬಂತು. ನೀರು ಮಾತ್ರ ರೈತರ ಗದ್ದೆಗಳಿಗೆ ಹರಿಯಲಿಲ್ಲ.
ಹಾಗೆಯೇ ರೈತರ ನಿಯೋಗವು ಜಲಸಂಪನ್ಮೂಲ ಸಚಿವರನ್ನು ಕಳೆದ ತಿಂಗಳು ಭೇಟಿ ಮಾಡಿ ಬಂದಾಗಿದೆ. ಆಗ ಸಚಿವರು ಜ.27ರ ನಂತರದಲ್ಲಿ ರೈತರಿಗೆ ಸಮರ್ಪಕ ನೀರು ದೊರೆಯುತ್ತದೆಂದು ಭರವಸೆ ನೀಡಿದ್ದರು. ಆ ಭರವಸೆಯೂ ಈಡೇರಲಿಲ್ಲ. ಇದೇ ನೀರಿನ ವಿಚಾರಕ್ಕೆ ರಾಜ್ಯ ರೈತ ಸಂಘ ಮತ್ತು ಕಾಂಗ್ರೆಸ್ ನಾಯಕ ಬೋಸರಾಜು ಮಧ್ಯೆ ವಿವಾದ ಉಂಟಾಗಿ ಸುಖಾಂತ್ಯ ಕಂಡರೂ ರೈತರಿಗೆ ಇದುವರೆಗೆ ನೀರಿಲ್ಲ ಎಂಬುದು ಕಾಯಂ ಆಗಿದೆ.
ತಾಳ್ಮೆ ಪರೀಕ್ಷೆ: ರೈತರ ತಾಳ್ಮೆಯ ಕಟ್ಟೆಯೊಡೆದಿದೆ. ಜತೆಗೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ್ ಅವರ ಒತ್ತಾಯವನ್ನೂ ನೀರಾವರಿ ಇಲಾಖೆ ಕಡೆಗಣಿಸಿದೆ. ಹಾಗಾಗಿ ಈಗ ಶಾಸಕರ ನೇತೃತ್ವದಲ್ಲಿಯೇ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ಸರ್ಕಾರ ರೈತರ ಪಾಲಿಗೆ ಇದ್ದೂ ಇಲ್ಲದಂತಿದೆ. ರೈತರ ಹಿತಕಾಯುವುದಾಗಿ ಹೇಳುತ್ತಲೇ ರೈತರ ಬೇಡಿಕೆ ಕಡೆಗಣಿಸಿದೆ. ಹಾಗಾಗಿ ಇನ್ನು ಹೋರಾಟ ಅನಿವಾರ್ಯ. ಅದೇ ಕಾರಣಕ್ಕೆ ಫೆ.5ರಂದು ಸಾವಿರಾರು ಸಂಖ್ಯೆಯಲ್ಲಿ ರೈತರು ಹೋರಾಟಕ್ಕಿಳಿಯಲಿದ್ದಾರೆಂದು ಎಚ್ಚರಿಸಿದರು.
ಒಂದೆಡೆ ರಾಜ್ಯ ಸರ್ಕಾರ ಲೋಕಸಭೆ ಚುನಾವಣೆಯ ಗಮನದಲ್ಲಿರಿಸಿಕೊಂಡು ಬಜೆಟ್ ರೂಪಿಸುವ ತಯಾರಿಗೆ ತೊಡಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಸರ್ಕಾರದ ಜಲಸಂಪನ್ಮೂಲ ಸಚಿವರು ತಾವು ಜಿಲ್ಲೆಯ ರೈತರಿಗೆ ನೀಡಿದ ಭರವಸೆಯನ್ನೇ ಮರೆತಿರುವುದು ಸ್ಪಷ್ಟವಾಗಿದೆ. ರೈತರಿಗೆ ಸದ್ಯಕ್ಕೆ ಹೋರಾಟ ಅನಿವಾರ್ಯವೆಂಬಂತೆ ಸರ್ಕಾರವೇ ಪರಿಸ್ಥಿತಿ ಸೃಷ್ಟಿಸಿರುವುದಂತೂ ಸತ್ಯ.