ಪ್ರಕೃತಿ ಮುನಿದರೆ ಮಾನವ ಕುಲ ಸರ್ವನಾಶ: ಸಿಕಂದರ್ ಬಾಷಾ
ಮುದಗಲ್: ಮನುಷ್ಯ ಪ್ರಕೃತಿಯ ವಿರುದ್ಧ ಕೆಲಸ ಮಾಡುತ್ತಿದ್ದರಿಂದ ಅಪಾಯಗಳು ತಪ್ಪಿದ್ದಲ್ಲ. ಪ್ರಕೃತಿ ಮುನಿದರೆ ಮನುಷ್ಯ ಕುಲಕ್ಕೆ ಉಳಿಗಾಲವಿಲ್ಲ ಎಂದು ರಾಯಚೂರು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಎಂಜಿನಿಯರ್ ಸಿಕಂದರ್ ಬಾಷಾ ಅಭಿಪ್ರಾಯಪಟ್ಟರು. ಸಮೀಪದ ಆಮದಿಹಾಳ ಗ್ರಾಮದ ವಿಶ್ವಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಬೆಂಗಳೂರು, ಜಿ.ಪಂ. ಸಂಯುಕ್ತಾಶ್ರಯದಲ್ಲಿ ಅಂತರ್ಜಲ ಸದ್ಬಳಕೆ ಹಾಗೂ ಮಳೆ ನೀರು ಸಂಗ್ರಹಣೆ ಕುರಿತು ಜನ ಜಾಗೃತಿ ಶಿಬಿರದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜಿಲ್ಲೆಯಲ್ಲಿಯೂ ನೀರಿನ ಪ್ರಮಾಣ ಕಡಿಮೆ ಇದೆ. ಇದ್ದ ನೀರನ್ನು ಕಲುಷಿತಗೊಳಿಸುತ್ತಿದ್ದರಿಂದ ಅನೇಕ ರೋಗಗಳು ಬರುತ್ತವೆ. ಸರ್ಕಾರ ಶುದ್ಧ ಕುಡಿಯುವ ನೀರು ಜನರಿಗೆ ನೀಡಲು ಕೋಟಿ ಕೋಟಿ ಅನುದಾನ ವೆಚ್ಚ ಮಾಡುತ್ತಿದೆ ಎಂದರು.
ಡಾ. ಮಹೇಶ್ವರ ಬಾಬು, ಸಂಪನ್ಮೂಲ ವ್ಯಕ್ತಿಗಳಾದ ಎನ್.ಆರ್. ತಿಪ್ಪಯ್ಯ ರಡ್ಡಿ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಕಿರಿಯ ಅಧಿಕಾರಿ ಕೃಷ್ಣ ಮಾತನಾಡಿದರು. ಮಾನಬಾವಿ ಜಿ.ಪಂ. ಸದಸ್ಯೆ ಮೀನಾಕ್ಷಮ್ಮ ಸುರೇಂದ್ರಗೌಡ ಪಾಟೀಲ್ ಉದ್ಘಾಟಿಸಿರು. ಅಧ್ಯಕ್ಷತೆಯನ್ನು ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಕಂದಗಲ್ ವಹಿಸಿದ್ದರು.