ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಂಧನೂರು ಹಳೆಬಜಾರ್ ರಸ್ತೆ ದುರಸ್ತಿಗೆ ಆಗ್ರಹ

Srinivasa Murthy VN
Updated On : 5 Feb 2014, 11:35 am

ಸಿಂಧನೂರು: ತಗ್ಗು- ದಿನ್ನೆ ಹಾಗೂ ಧೂಳಿನಿಂದ ಆವೃತವಾಗಿರುವ ನಗರದ ಹಳೆಬಜಾರ್ ರಸ್ತೆ ದುರಸ್ತಿಗೆ ಆಗ್ರಹಿಸಿ ಫೆ.15ರಂದು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಗರಾಭಿವೃದ್ಧಿ ಹೋರಾಟ ಸಮಿತಿ ಮಂಗಳವಾರ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಚಾಲಕ ಡಿ.ಎಚ್. ಕಂಬಳಿ, ಹನುಮಂತ ದೇವರ ಗುಡಿಯಲ್ಲಿ ಈಗಾಗಲೇ ಹಳೆಬಜಾರ್‌ನ ವ್ಯಾಪಾರಸ್ಥರು, ಸಾರ್ವಜನಿಕರೊಂದಿಗೆ ಸಭೆ ಸೇರಿ ಚರ್ಚಿಸಲಾಗಿದ್ದು, ಕಾಲಾವಕಾಶ ತೆಗೆದುಕೊಂಡರೂ ಇದುವರೆಗೂ ಯಾವುದೇ ಪ್ರಕ್ರಿಯೆ ಆರಂಭಿಸದೇ ನಿರ್ಲಕ್ಷ್ಯ ಧೋರಣೆ ತಾಳಿರುವ ಬಗ್ಗೆ ನಗರಸಭೆ ಆಡಳಿತ ಮಂಡಳಿಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧೂಳಿನಿಂದ ಇಲ್ಲಿನ ಜನತೆ ದಿನವೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಶೀಘ್ರ ರಸ್ತೆ ದುರಸ್ತಿಗೆ ಮುಂದಾಗದೇ ಇದ್ದಲ್ಲಿ ರಸ್ತೆ ತಡೆ ಳವಳಿ ನಡೆಸಲಾಗುವುದೆಂದು ಎಚ್ಚರಿಸಿದರು.
ಅವ್ಯವಹಾರ ಆರೋಪ: ಟಿಯುಸಿಐ ರಾಜ್ಯ ಅಧ್ಯಕ್ಷ ಡಿ.ಎಚ್.ಪೂಜಾರ ಮಾತನಾಡಿ, ಶಾಸಕ ಹಂಪನಗೌಡ ಬಾದರ್ಲಿ ಅವರಿಂದ ಕೇವಲ ಸಮಾಧಾನದ ಮಾತುಗಳೇ ಹೊರಬರುತ್ತಿವೆ ಹೊರತು ಅಭಿವೃದ್ಧಿ ಶೂನ್ಯ. ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಾರ್ಡ್‌ಗಳಲ್ಲಿ ಮರಂ ಹಾಕುವುದು ಮತ್ತು ಮೆಟ್ಲಿಂಗ್ ಕೆಲಸಗಳು ಎಸ್ಟಿಮೇಟ್ ಪ್ರಕಾರ ನಡೆದಿಲ್ಲ. ಕೆಲ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಬೇಕಾಬಿಟ್ಟಿ ಕಾರ್ಯನಿರ್ವಹಿಸಿದ್ದಾರೆ. ಲಕ್ಷಾಂತರ ರು. ಬೋಗಸ್ ಬಿಲ್ ಎತ್ತುವಳಿ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿದರು.
ನಿದ್ರೆಗೆ ಜಾರಿದ ಪ್ರತಿಪಕ್ಷ: ರೈತ ಮುಖಂಡ ಎಚ್.ಎನ್. ಬಡಿಗೇರ ಮಾತನಾಡಿ, ಶಾಸಕರು ಪುಕ್ಕಟೆ ಪ್ರಚಾರದಲ್ಲಿ ತೊಡಗಿದ್ದಾರೆ. ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಸದಸ್ಯರೆಲ್ಲರೂ ಆತ್ಮಾವಲೋಕನ ಮಾಡಿಕೊಂಡು ಅಭಿವೃದ್ಧಿ ಕೆಲಸ ನಡೆಸಬೇಕಾಗಿದೆ. ಆಡಳಿತ ಪಕ್ಷದ ಹುಳುಕುಗಳನ್ನು ಎತ್ತಿ ಹಿಡಿಯಬೇಕಾದ ಪ್ರತಿಪಕ್ಷಗಳು ನಿದ್ದೆ ಮಾಡುತ್ತಿರುವಂತೆ ಕಾಣುತ್ತಿವೆ. ಇದನ್ನೆಲ್ಲಾ ಗಮನಿಸಿದರೆ ಆಡಳಿತ ಮತ್ತು ವಿರೋಧ ಪಕ್ಷಗಳು ಶಾಮೀಲಾಗಿರುವಂತೆ ಕಾಣಿಸುತ್ತದೆ ಎಂದು ಬಡಿಗೇರ ಸಂಶಯ ವ್ಯಕ್ತಪಡಿಸಿದರು.ರೈತ ಮುಖಂಡ ಹಾಗೂ ಸಮಿತಿ ಪ್ರಧಾನ ಸಂಚಾಲಕ ಹನುಮನಗೌಡ ಬೆಳಗುಕರ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement