ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮನುಷ್ಯನ ಬದುಕು ನಿಸ್ವಾರ್ಥಗೊಳ್ಳಲಿ

Srinivasa Murthy VN
Updated On : 16 Jul 2014, 11:00 am

ಯಾದಗಿರಿ: ಮನುಷ್ಯನ ಸಂಬಂಧಗಳು, ಇಂದಿನ ಜಗತ್ತಿನಲ್ಲಿ ದುರಂತದ ಅಂಚಿನಲ್ಲಿದೆ. ಮಾನವಿಯತೆ ಸಮಾಜದಲ್ಲಿ ಪ್ರಸಾರಗೊಳ್ಳಲು ಶಿವಾನುಭವಗೋಷ್ಠಿ ಪ್ರಸ್ತುತವಾಗಲಿದೆ ಎಂದು ದಾಸಬಾಳ ಮಠದ ಸದ್ಗುರು ವೀರೇಶ್ವರ ಶಿವಾಚಾರ್ಯ ಆಶೀರ್ವಚನ ನೀಡಿದರು. ನಗರದ ದಾಸಬಾಳ ಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ 33ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಸ್ವಾರ್ಥದಿಂದ ನಿಸ್ವಾರ್ಥದ ಕಡೆಗೆ ಹೋಗಬೇಕೆಂದರು. ಉಪನ್ಯಾಸ ಮಾಲಿಕೆಯನ್ನು ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕ ಗುರುಲಿಂಗಯ್ಯ ಹಿರೇಮಠ ಮಾತನಾಡಿದರು. ಮಲ್ಲಿಕಾರ್ಜುನ ಸ್ವಾಮಿ ಗುರುಸುಣಗಿ, ತಿಪ್ಪಣ್ಣಗೌಡ ಮಲ್ಹಾರ, ಸಿದ್ರಾಮರೆಡ್ಡಿ ಮಲ್ಹಾರ, ಡಾ.ಕುಮಾರಸ್ವಾಮಿ, ಪರ್ವತರೆಡ್ಡಿ, ಜೈಬಾಬು ಅನೇಕರಿದ್ದರು.

ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ: ನಾಡಗೌಡರ್
ಮಸ್ಕಿ: ಹಿಂದೆಂದಿಗಿಂತಲೂ ಇಂದು ಎಲ್ಲರೂ ಪರಿಸರದ ಸಂರಕ್ಷಣೆ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಉಪನ್ಯಾಸಕ ಬಿ.ಎ. ನಾಡಗೌಡರ್ ಹೇಳಿದರು. ಪಟ್ಟಣದ ಸರ್ಕಾರಿ ಕೇಂದ್ರ ಶಾಲೆಯ ಮೈದಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗಾಗಿ ಪರಿಸರ ಮಾಹಿತಿ ಶಿಬಿರದಲ್ಲಿ ಮಾತನಾಡಿದರು. ಎಲ್ಲರೂ ಪ್ಲಾಸ್ಟಿಕ್ ಬಳಕೆ ಕೈಬಿಟ್ಟು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಮನೆಯ ಹಾಗೂ ಬಡಾವಣೆಯಲ್ಲಿನ ಪ್ರದೇಶಗಳಲ್ಲಿ ಗಿಡ ಮರಗಳನ್ನು ಬೆಳೆಸುವತ್ತ ಗಮನಹರಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ಹೊಣೆ ಎಲ್ಲರದ್ದಾಗಿದೆ ಎಂದರು. ಅತಿಥಿ ಪಿ. ಮಲ್ಲಿಕಾರ್ಜುನ, ಯೋಜನಾಧಿಕಾರಿ ಭಾಸ್ಕರ್ ಮಾತನಾಡಿದರು. ಮೇಲ್ವಿಚಾರಕ ಭೀಮಾನಾಯಕ, ಶಿಕ್ಷಕರಾದ ಪಂಪಾಪತಿ, ಚನ್ನಮ್ಮ ವಿರಕ್ತಮಠ, ಒಕ್ಕೂಟದ ಅಧ್ಯಕ್ಷೆ ಪಾರ್ವತಮ್ಮ, ಸುಮನ್, ಸೇವಾ ಪ್ರತಿನಿಧಿಗಳಾದ ರೂಪಾ, ಸುಜಾತಾ, ನಾಗಮ್ಮ, ಮಲ್ಲಮ್ಮ, ಹೊಳೆಯಮ್ಮ, ಹನುಮಂತಪ್ಪ ಮತ್ತಿತರರಿದ್ದರು. ಈ ಸಂದರ್ಭದಲ್ಲಿ ಶಾಲೆಯನ್ನು ಬಿಟ್ಟಿದ್ದ ವಿದ್ಯಾರ್ಥಿನಿ ಲಕ್ಷ್ಮೀ ಅಮರೇಶ ಅವರನ್ನು ಮನವೊಲಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಹಾಗೂ ಶಿಕ್ಷಕ ಪಂಪಾಪತಿ ಶಾಲೆಯ ಫೀ ಮತ್ತು ನೋಟ್ ಪುಸ್ತಕಗಳನ್ನು ನೀಡಿ ಮರಳಿ ಶಾಲೆಗೆ ಸೇರ್ಪಡೆಗೊಳಿಸಲಾಯಿತು.

ಶಾಸಕರಿಂದ 122.92 ಲಕ್ಷಕಾಮಗಾರಿ ಪರಿಶೀಲನೆ
ಸುರಪುರ: ತಾಲೂಕಿನ ಶೆಳ್ಳಗಿ ಗ್ರಾಮದ ಹತ್ತಿರ ಹರಿಯುವ ಕೃಷ್ಣಾ ನದಿಗೆ ಶಾಸಕ ರಾಜಾ ವೆಂಕಟಪ್ಪನಾಯಕ ಇತ್ತೀಚೆಗೆ ಭೇಟಿ ನೀಡಿದರು. ನಂತರ ಶೆಳ್ಳಗಿ ಜಾಕ್‌ವೆಲ್‌ನಲ್ಲಿ ಕರ್ನಾಟಕ ಜಲ ಮಂಡಳಿಗೆ ವಹಿಸಲಾದ 122.92 ಲಕ್ಷಗಳ 5 ಕಾಮಗಾರಿಗಳನ್ನು ಪರಿಶೀಲಿಸಿದರು. ಜಾಕ್‌ವೆಲ್‌ನ ಮೋಟಾರ್, ಪಂಪ್, ಸ್ಟಾಟರ್ ದುರಸ್ಥಿಗೊಳಿಸಲು ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ಕುಂಬಾರಪೇಟದ ನೀರು ಶುದ್ಧೀಕರಣ ಕೇಂದ್ರಕ್ಕೆ (ಫಿಲ್ಟರ್ ಬೆಡ್) ಭೇಟಿ ನೀಡಿ ಪರಿಶೀಲಿಸಿದರು. ಜಾಕ್‌ವೆಲ್ ಪಂಪ್ ಹೌಸ್ ಮತ್ತು ನೀರು ಶುದ್ಧೀಕರಣ ಕೇಂದ್ರದ ಉಸ್ತುವಾರಿ ಸಲುವಾಗಿ 2 ಜನ ಸಿಬ್ಬಂದಿಯನ್ನು ಖಾಯಂ ಆಗಿ ಸುರಪುರಕ್ಕೆ ನಿಯೋಜಿಸುವಂತೆ ಜಲಮಂಡಳಿಯ ಎಇಇಗೆ ಸೂಚಿಸಿದರು. ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಮುಖ್ಯಾಧಿಕಾರಿ ಏಜಾಜ್ ಹುಸೇನ್, ಜಗದೀಶ್ ಚಂದ್ರ, ಎಇಇ ವಿಜಯಕುಮಾರ, ಎಇ ಶಂಕರಗೌಡ, ಆದಪ್ಪ ಸುರಪುರಕರ್, ಪುರಸಭೆ ಸದಸ್ಯ ವೆಂಕಟೇಶ ಹೊಸ್ಮನಿ, ಮುಖಂಡರಾದ ವಿಠ್ಠಲ ಯಾದವ್, ವೆಂಕೋಬ ಮಂಗಳೂರು, ವೆಂಕಟರೆಡ್ಡಿ ಭೋವಿ ಇದ್ದರು.

ಶೀಘ್ರವೇ ವಿದ್ಯುತ್‌ಕಂಬ ಅಳವಡಿಕೆ
ಸುರಪುರ: ಪಟ್ಟಣದ ದೋಬಿಗಲ್ಲಿ ವಾರ್ಡ್‌ನ ಖಾನಿಕೇರಾ ಬಡಾವಣೆಗೆ ಶೀಘ್ರವೇ ವಿದ್ಯುತ್ ಕಂಬ ಅಳವಡಿಸಲಾಗುವುದೆಂದು ಜೆಸ್ಕಾಂ ಎಇಇ ಬಸವರಾಜ ಪಿವಿ ಭರವಸೆ ನೀಡಿದರು. ಖಾನಿಕೇರಾದಲ್ಲಿ ವಿದ್ಯುತ್ ಕಂಬಗಳಿಲ್ಲದ್ದಕ್ಕಾಗಿ ಕಟ್ಟಿಗೆ ಕಂಬಗಳನ್ನು ಹಾಕಿ ವಿದ್ಯುತ್ ಪಡೆಯಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಬಡಾವಣೆಯಲ್ಲಿ 5 ಕಂಬ ಮತ್ತು ಸಿದ್ದಾರ್ಥ ಲಾಡ್ಜ್ ಹತ್ತಿರ 5 ಕಂಬಗಳ ಅವಶ್ಯಕತೆಯಿದೆ. ನಿಗದಿಪಡಿಸಿರುವ ಮೊತ್ತ ಪಾವತಿಸಿದರೆ ಶೀಘ್ರವೇ ಕಂಬಗಳನ್ನು ಹಾಕಲಾಗುವುದು ಎಂದು ವಾರ್ಡ್ ಸದಸ್ಯ ಪಾರಪ್ಪ ಗುತ್ತೇದಾರರಿಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಅವರು ಆ ಮೊತ್ತವನ್ನು ಭರಿಸಲಾಗುವುದು ಎಂದರು. ಮುಂಬರುವ ದಿನಗಳಲ್ಲಿ ಟಿಸಿ ಅಳವಡಿಸಿ ಇಲಾಖೆಯಿಂದ ಇನ್ನಷ್ಟೂ ಅನುಕೂಲ ಮಾಡಿಕೊಡಲಾಗುವುದೆಂದು ಆಶ್ವಾಸನೆ ನೀಡಿದರು. ಜೆಸ್ಕಾಂ ವಲಯಾಧಿಕಾರಿ ಮಹೇಶ್, ಉದಯ್‌ಕುಮಾರ್, ದೇವು ಖಾನಿಕೇರಾ ಇತರರಿದ್ದರು.

ಯೋಜನೆ ಸದುಪಯೋಗ ಅಗತ್ಯ
ಶಹಾಪುರ: ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿನ ಅವಶ್ಯ ಕಾಮಗಾರಿಗಳನ್ನು ಸರ್ವ ಸದಸ್ಯರು ಗ್ರಾ.ಪಂ ಅಧ್ಯಕ್ಷರ ಅಧಿಕಾರಿಗಳ ಗಮನಕ್ಕೆ ತಂದು ಸಾಧ್ಯವಾದಷ್ಟು ಯೋಜನೆಗಳ ಸದುಪಯೋಗ ಪಡೆಯಬೇಕೆಂದು ಪಿಡಿಒ ಮದನಾ ತಿಳಿಸಿದರು. ತಾಲೂಕಿನ ಕೊಳ್ಳೂರು ಗ್ರಾಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, 13ನೇ ಹಣಕಾಸು ಕ್ರಿಯಾಯೋಜನೆ, ಬಿಆರ್‌ಜಿಎಫ್ ಗ್ರಾಮ ಸ್ವರಾಜ್ಯ ಮತ್ತು ಕರ ವಸೂಲಿ ಜಾಗೃತಿ  ಬಗ್ಗೆ ಮಾಹಿತಿ ನೀಡಿ ಸರ್ವರ ಸಹಕಾರದೊಂದಿಗೆ ಶೌಚಾಲಯದ ಅಗತ್ಯತೆ, ಹಳ್ಳಿಗಳ ಸ್ವಚ್ಛತೆ, ವಿದ್ಯುತ್ ಸೌಕರ್ಯ, ನಿಂತ ನೀರಿನ ತಗ್ಗು ಗುಂಡಿ ಮುಚ್ಚುವುದು, ಕುಡಿಯುವ ನೀರಿನ ತೊಂದರೆ ಬಗೆ ಹರಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಯಿತು.

ಬಸ್ ಡಿಕ್ಕಿ: ಒಬ್ಬನ ಸಾವು
ರಾಯಚೂರು: ನಗರದ ಗೋಶಾಲಾ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ನಗರದ ಸಿಯಾತಲಾಬ್ ನಿವಾಸಿ ಕಾಸೀಂ ಎಂದು ಗುರುತಿಸಲಾಗಿದೆ. ಈತ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜ್ಞಾನ, ತಂತ್ರಜ್ಞಾನ ಪ್ರದರ್ಶನ, ಪ್ರಾತ್ಯಕ್ಷಿಕೆ
ಲಿಂಗಸ್ಗೂರು: ಸ್ಥಳೀಯ ಸ್ಪಂದನಾ ಪ್ರೌಢಶಾಲೆಯಲ್ಲಿ ಕೇರಳದ ಸೈನ್ಸ್ ಇನ್‌ಸೈಟ್ ಸಂಸ್ಥೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಯಸ್ಕಾಂತದ ಉಪಯೋಗ, ಪೀನಮಸೂರ ಮತ್ತು ನಿಮ್ನ ಮಸೂರದ ಉಪಯೋಗ, ಶಬ್ಧ ತರಂಗಗಳ ಚಲನೆ ಸೇರಿದಂತೆ 5 ರಿಂದ 10ನೇ ತರಗತಿವರೆಗಿನ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬರುವ 50ಕ್ಕೂ ಹೆಚ್ಚು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನಗೊಳಿಸಿದರು. ವಿದ್ಯಾರ್ಥಿಗಳಿಗೆ ಸೈನ್ಸ್ ಇನ್‌ಸೈಟ್ ಸಂಸ್ಥೆಯ ಧಾರವಾಡ ವಲಯದ ಪ್ರಸನ್ನ ಕುಮಾರ ಜ್ಯೋಷಿ, ಶ್ರೀಕಾಂತ ಜೋಷಿ, ಸೀಮಾ ಹೆಗಡೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಪ್ರಾತ್ಯಕ್ಷಿಕೆಯನ್ನು ಸಹಾಯಕ ಆಯುಕ್ತ ಟಿ. ಯೋಗೇಶ್, ಸಿಡಿಪಿಒ ಪ್ರಭಾಕರ, ತಾಲೂಕು ಆರೋಗ್ಯಾಧಿಕಾರಿ ನಂದಕುಮಾರ ಭೇಟಿ ನೀಡಿ ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಸ್ಪಂದನಾ ಸಂಸ್ಥೆ ಅಧ್ಯಕ್ಷ ಮಹಾಂತೇಶ ಗೌಡರ, ಮುಖ್ಯ ಶಿಕ್ಷಕ ಮುತ್ತು ಸ್ಯಾಮುವೆಲ್, ಶಿಕ್ಷಕರಾದ ಲಿಂಗರಾಜು, ಸುಗಂಧಿ, ಭಾರತಿಗೌಡ ಸೇರಿದಂತೆ ಇನ್ನಿತರರು ಇದ್ದರು.

ಅಕ್ರಮ ಮರಳು: 2 ಲಾರಿ ವಶ
ಮುದಗಲ್: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಸಹಾಯಕ ಆಯುಕ್ತ ಟಿ.ಯೋಗೇಶ್ ನೇತೃತ್ವದಲ್ಲಿ ದಾಳಿ ಮಾಡಿ ವಶಕ್ಕೆ ಪಡೆದ ಘಟನೆ ಮಂಗಳವಾರ ನಡೆದಿದೆ. ನಾಗಲಾಪುರು ಕಡೆಯಿಂದ ಲಿಂಗಸ್ಗೂರಿಗೆ ಹೊರಟಿದ್ದ ಮರಳು ತುಂಬಿದ್ದ ಎರಡು ಮಿನಿಲಾರಿಗಳನ್ನು ತಡೆದು ಪರಿಶೀಲಿಸಿದ್ದು ಯಾವುದೇ ಪರವಾನಗಿಯಿಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಕಂಡುಬಂದಿದೆ. ಕೂಡಲೇ ಈ ಲಾರಿಗಳನ್ನು ಜಪ್ತಿ ಮಾಡಿ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ಸಹಾಯಕ ಆಯುಕ್ತ ಟಿ.ಯೋಗೇಶ್ ಅವರು ಪತ್ರಿಕೆಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement