ದಢೇಸ್ಗೂರು ಸೇತುವೆ ಬಳಿ ರೈತರ ರಸ್ತೆ ತಡೆ
ಸಿಂಧನೂರು: ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ರೈತರು ಎಕರೆಗೆ ಸಾವಿರಾರು ರುಪಾಯಿ ಕೊಟ್ಟು ಬೀಜ ಖರೀದಿಸಿ ಸಸಿ ನಾಟಿ ಮಾಡಿದ್ದು ಅದಕ್ಕೆ ನೀರಿನ ಕೊರತೆ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ಗಂಗಾವತಿ ತಾಲೂಕಿನ ಹಳ್ಳ ಮತ್ತು ನದಿಗೆ ನೀರು ಬಿಡಿಸಿಕೊಳ್ಳಲು ಅಲ್ಲಿನ ಜನಪ್ರತಿನಿಧಿಗಳು ಯಶಸ್ವಿಯಾಗಿದ್ದಾರೆ ಎಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಆರೋಪಿಸಿದರು.
ತುಂಗಭದ್ರಾ ನದಿಗೆ ನೀರು ಹರಿಸಲು ಒತ್ತಾಯಿಸಿ ರೈತರು ದಢೇಸುಗೂರು ಸೇತುವೆ ಬಳಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಕಳೆದ 15 ದಿನಗಳಿಂದ ದನಕರುಗಳಿಗೆ ಮತ್ತು ಗ್ರಾಮಸ್ಥರಿಗೆ ಕುಡಿಯುವ ನೀರಿಲ್ಲ. ನದಿ ಪಾತ್ರದಲ್ಲಿ ಹಾಕಿದ ಬತ್ತದ ಸಸಿ ಕಮರಿಹೋಗಿವೆ. ನದಿ ಸಂಪೂರ್ಣ ಒಣಗಿ ಹೋಗಿದೆ. ಪ್ರತಿವರ್ಷದಂತೆ ಜು.20ರೊಳಗೆ ಬಿಡಬೇಕಾದ ನೀರು ಈವರೆಗೂ ಹರಿಸದಿದ್ದರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಈ ಬಗ್ಗೆ ಒಂದು ಮಾತು ಕೂಡ ಆಡಿಲ್ಲ ಎಂದು ಟೀಕಿಸಿದರು.
3 ಗಂಟೆ ಸಂಚಾರ ವ್ಯತ್ಯಯ: ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ರಸ್ತೆ ತಡೆ ಚಳವಳಿ ನಡೆಸಿದ್ದರಿಂದ ಸಿರಗುಪ್ಪ ಮತ್ತು ಸಿಂಧನೂರು ಕಡೆಗಳ ಸಂಚಾರ ವ್ಯತ್ಯಯ ಉಂಟಾಯಿತು. ಬಳ್ಳಾರಿಗೆ ಹೊರಟಿದ್ದ ಚಿಂತಾಜನಕ ಸ್ಥಿತಿಯಲ್ಲಿ ರೋಗಿಯೊಬ್ಬರು ವಾಹನ ತೆರಳಲು ಅನುಕೂಲ ಕಲ್ಪಿಸಲಾಯಿತು. ರಾಜ್ಯ ಹೆದ್ದಾರಿಯ ಎರಡೂ ಬದಿಯಲ್ಲಿ ಸುಮಾರು 3 ಕಿ.ಮೀ.ವರೆಗೆ ವಾಹನಗಳು ರಸ್ತೆ ಮಧ್ಯೆಯೇ ನಿಲ್ಲಬೇಕಾಯಿತು.
ಜಿಲ್ಲಾಡಳಿತದೊಂದಿಗೆ ಚರ್ಚಿಸಿ ರೈತರ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುವುದಾಗಿ ತಹಸೀಲ್ದಾರ್ ಗಂಗಪ್ಪ ಭರವಸೆ ನೀಡಿದ ಹಿನ್ನೆಲೆಯಲ್ಲಿ ಚಳವಳಿ ತೆರವುಗೊಳಿಸಲಾಯಿತು.