ಪರಿಶ್ರಮದಿಂದ ಉತ್ತಮ ಕಲಿಕೆ ಸಾಧ್ಯ: ಕರಂಡಿ
ಸಿಂಧನೂರು: ಮಕ್ಕಳಲ್ಲಿ ಉತ್ತಮ ಕಲಿಕೆಯಾಗಲು ಸದೃಢ ದೇಹ ಬೇಕು. ಇದು ದೈಹಿಕ ಪರಿಶ್ರಮ ಹಾಗೂ ಆಟೋಟಗಳಿಂದ ಸಾಧ್ಯವಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಬಿ. ಕರಂಡಿ ಅಭಿಪ್ರಾಯಪಟ್ಟರು. ನಗರದ ಮಾಂಟೆಸ್ಸರಿ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ಏರ್ಪಡಿಸಿದ್ದ 2014-15ನೇ ಸಾಲಿನ ಪ್ರಾಥಮಿಕ ಶಾಲೆಗಳ ಎ-ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಕಾರ್ಯದರ್ಶಿ ಕೆ.ವಿ.ಆರ್. ಜ್ಯೋತಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು. ಸೋಲು-ಗೆಲವಿನ ಸೋಪಾನವಾಗುತ್ತದೆ. ಕ್ರೀಡೆಗಳಿಂದ ಮಕ್ಕಳಲ್ಲಿ ಶಿಸ್ತು, ದೇಶಾಭಿಮಾನ, ಸೌಹಾರ್ದತೆ ಮೂಡುತ್ತದೆ. ದೈಹಿಕ ಶಿಕ್ಷಣ ಶಿಕ್ಷಕರು ಎಲ್ಲ ಮಕ್ಕಳಿಗೂ ಇಷ್ಟವಾಗುತ್ತಾರೆ. ದೈಹಿಕ ಶಿಕ್ಷಣದಿಂದ ಮಕ್ಕಳಲ್ಲಿ ಶಿಸ್ತು, ಸಂಯಮ ಬೆಳೆಸಲು ಸಾಧ್ಯವಾಗುತ್ತದೆ ಎಂದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಸೋಮನಾಥ ಬಡಿಗೇರ, ವೀರೇಶ ಗೋನವಾರ, ವಿವಿಧ ಶಾಲೆಗಳ ಮುಖ್ಯಗುರುಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಇನ್ನಿತರರಿದ್ದರು. ಶಾಲೆಯ ಪೂಜಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ದೈಹಿಕ ಶಿಕ್ಷಕ ವಿರೂಪಾಕ್ಷಿ ಸ್ವಾಗತಿಸಿದರು. ಶಾಲಾ ಮುಖ್ಯಗುರು ಈರಮ್ಮ ನಿರೂಪಿಸಿದರು.