ಡಿಇಸಿ ಮಾತ್ರೆ ಸೇವನೆಯಿಂದ ಆನೆಕಾಲು ರೋಗ ದೂರ'
ಕ.ಪ್ರ. ವಾರ್ತೆ ಸಿಂಧನೂರು ಜೂ.4
ಪ್ರತಿಯೊಬ್ಬ ಅರ್ಹ ವ್ಯಕ್ತಿಯು ಡಿಇಸಿ ಮಾತ್ರೆಗಳ ಸೇವಿಸಿಯಿಂದ ಆನೆಕಾಲು ರೋಗ ದೂರ ಮಾಡಬಹುದು ಎಂದು ತಹಸೀಲ್ದಾರ್ ಜಗನ್ನಾಥರೆಡ್ಡಿ ಹೇಳಿದರು.
ನಗರದಲ್ಲಿ ಬುಧವಾರ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಾದ್ಯಾಂತ 10ನೇ ಸುತ್ತಿನ ರಾಷ್ಟ್ರೀಯ ಆನೆ ಕಾಲು ರೋಗ ನಿಯಂತ್ರಣ ಅಡಿಯಲ್ಲಿ ಉಚಿತ ಡಿಇಸಿ ಮಾತ್ರೆಗಳ ವಿತರಣಾ ಕಾರ್ಯಕ್ರಮವು ಜೂ.5ರಂದು ಜರುಗಲಿದೆ ಎಂದರು.
ತಪ್ಪದೇ ಮಾತ್ರೆ ಸೇವಿಸಿ: ತಾಲೂಕಿನಲ್ಲಿ 4,04,152 ಜನರಿಗೆ ಮಾತ್ರೆ ವಿತರಣೆ ಮಾಡಲು 1,491 ತಂಡಗಳು, 158 ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಾರೆ. ತಂಡಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಶಿಕ್ಷಕರು, ಲಿಂಕ್ ಕೆಲಸಗಾರರು, ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ಮಾತ್ರೆ ವಿತರಿಸಲು ತಮ್ಮ ಮನೆಗೆ ಕಾರ್ಯಕರ್ತರು ಬಂದಾಗ ಸಾರ್ವಜನಿಕರು ತಪ್ಪದೇ ಮಾತ್ರೆಗಳನ್ನು ಸ್ವೀಕರಿಸಿ ಸೇವಿಸಲು ಮನವಿ ಮಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನಿ ಸಭೆಗೆ ಮಾಹಿತಿ ನೀಡಿ ಶಂಕಿತ ಕ್ಯೂಲೆಕ್ಸ್ ಸೊಳ್ಳೆಯು ಮನುಷ್ಯನನ್ನು ಕಚ್ಚಿದಾಗ ಮೈಕ್ರೋಫೈಲೇರಿಯಾ ಜಂತು ದೇಹ ಸೇರಿ ಆನೆ ಕಾಲು ರೋಗ ಹರಡುತ್ತದೆ. ಈ ಮಾತ್ರೆಗಳನ್ನು 2- 5 ವರ್ಷದವರಿಗೆ 1 ಮಾತ್ರೆ, 6-14 ವಯಸ್ಸಿನವರಿಗೆ 2 ಮಾತ್ರೆ, 15 ವರ್ಷ ಮೇಲ್ಪಟ್ಟವರಿಗೆ 3 ಮಾತ್ರೆ, ಜೊತೆಗೆ ಪ್ರತಿಯೊಬ್ಬರಿಗೂ ಚೀಪಬಹುದಾದ ಅಲ್ಬೆಂಡಜೋಲ್ ಮಾತ್ರೆಯನ್ನು ವಿತರಿಸಲಾಗುವುದು. ಊಟ ಮಾಡಿದ ನಂತರ ಸೇವಿಸಬೇಕೆಂದು ಅವರು ತಿಳಿಸಿದರು.
ಯಾರು ಸೇವಿಸಬಾರದು?: ಈ ಮಾತ್ರೆಗಳನ್ನು ಗರ್ಭಿಣಿಯರು, ತೀವ್ರತರವಾದ ಮತ್ತು ದೀರ್ಘಾವಧಿ ಕಾಯಿಲೆಗಳಿಂದ ನರಳುತ್ತಿರುವವರು, ವೃದ್ಧರು ಸೇವಿಸಬಾರದು ಎಂದರು.
ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಹಕಾರದಿಂದ ಹಮ್ಮಿಕೊಂಡ ಜಾಥಾವು ನಗರದ ಹಲವು ರಸ್ತೆಗಳಲ್ಲಿ ಸಂಚರಿಸಿತು. ವೈದ್ಯಾಧಿಕಾರಿ ಡಾ. ರಮ್ಯ ದೀಪಿಕಾ, ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ಎನ್.ಬಿ. ಕರಂಡಿ, ಡಾ. ಅಯ್ಯನಗೌಡ, ಡಾ ಶಂಕರಾಚಾರ್ಯ, ಡಾ ಅಂಬುಜಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಬಿಪಿಎಂ ದೀಪಕ್ ಗಾಡವಿ, ಸಿಆರ್‌ಪಿ ವೀರೇಶ ಗೋನವಾರ, ಮುಖ್ಯ ಗುರುಗಳಾದ ಬಸಯ್ಯ, ಪಾಟೀಲ, ಎಂಟಿಎಸ್ ಎಫ್.ಎ. ಹಣಗಿ, ಎಸ್‌ಟಿಎಸ್ ಶಿವರಾಜ, ಆಪ್ತ ಸಮಾಲೋಚಕ ಹನುಮಗೌಡ, ಓಂಪ್ರಸಾದ್, ಯೋಹಾನ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶ್ರೀಶೈಲ ಕೌದಿ, ಶಿಕ್ಷಕಿಯರಾದ ಅಕ್ಕಮಹಾದೇವಿ, ಸರೋಜಾದೇವಿ, ವಿದ್ಯಾವತಿ, ಗೌಸಿಯಾ ಬೇಗಂ, ಸುಮಂಗಲಾ, ಶಶಿಕಲಾ ಶೂಶ್ರೂಷಕಿ ಅಸ್ಮತ್ ಬೇಗಂ, ರೇಣುಕಾ ಮತ್ತಿತರರು ಭಾಗವಹಿಸಿದ್ದರು.