ಡೊನೇಶನ್ಗೆ ಕಡಿವಾಣ ಹಾಕಿ: ಆಗ್ರಹ
ಕ.ಪ್ರ. ವಾರ್ತೆ ಸಿಂಧನೂರು ಜೂ.4
ಹೆಚ್ಚಿನ ಡೊನೇಶನ್ ಪಡೆಯುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಕ್ರಮಬದ್ಧತಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983ರಲ್ಲಿ ಜಾರಿಗೆ ಬಂದ ನಂತರದಲ್ಲಿ ಖಾಸಗಿ ಶಿಕ್ಷಣ ಸಂಸ್ಧೆಗಳು ನಡೆಸುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದಾಖಲಾತಿ, ವಿಧಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ ಬಗ್ಗೆ ನಿಯಮಗಳನ್ನು ರೂಪಿಸಿದೆ. ಈ ಮಾಹಿತಿಯನ್ನು ಸಾರ್ವಜನಿಕರ ಅರಿವಿಗೆ ತರುವುದು ಅವಶ್ಯವೆಂದು ಹೇಳಿದೆ.
ಈ ಸಂಬಂಧದ ನಿಯಮ ಉಲ್ಲಂಘಿಸುವ ಪ್ರಕರಣಗಳಲ್ಲಿ 1983 ಶಿಕ್ಷಣ ಅಧಿನಿಯಮಗಳಡಿ ಶಾಲೆಗಳ ವಿರುದ್ಧ ಜರುಗಿಸಬಹುದಾದ ಕ್ರಮಗಳ ವಿವರದ ಮಾಹಿತಿಯನ್ನು ಸಾರ್ವಜನಿಕರ ಅರಿವಿಗೆ ತರುವ ಸಲುವಾಗಿಯೇ ಜಿಲ್ಲಾ ಮಟ್ಟದ ನಿಯಂತ್ರಣ ಪ್ರಾಧಿಕಾರಗಳನ್ನೂ ರಚಿಸಿದೆ. ಈ ವಿಷಯವನ್ನು ಸ್ಥಳೀಯ ದಿನಪತ್ರಿಕೆಗಳಲ್ಲಿ, ಆಕಾಶವಾಣಿ, ದೂರದರ್ಶನಗಳ ಮೂಲಕ ವ್ಯಾಪಕ ಪ್ರಚಾರ ನೀಡಬೇಕು.
ಪ್ರಾಧಿಕಾರಕ್ಕೆ ದೂರು ಸಲ್ಲಿಸಿ: ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಸಾರ್ವಜನಿಕರು, ಪೋಷಕರು ಶಾಲೆಗಳಲ್ಲಿ ಪಾವತಿ ಮಾಡಲು, ಈ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ನೀಡಲು ಒತ್ತಾಯಿಸುವ ಪ್ರಕರಣಗಳಲ್ಲಿ ಬಾಧಿತರು ಅಹವಾಲು ಮತ್ತು ದೂರುಗಳನ್ನು, ನಿಯಮಗಳ ಉಲ್ಲಂಘನೆಯ ಪ್ರಕರಣಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಪ್ರಾಧಿಕಾರದ ಪದಾಧಿಕಾರಿಗಳ ಹೆಸರು, ಪದನಾಮ, ವಿಳಾಸ, ದೂರವಾಣಿ ಸಂಖ್ಯೆಯನ್ನು ಒಳಗೊಂಡ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಯಲ್ಲಿ ನೀಡಬೇಕು.
ನಿಯಮಗಳ ಪಾಲನೆಯಾಗುತ್ತಿಲ್ಲ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಮಟ್ಟದ ಶಿಕ್ಷಣ ಕ್ರಮಬದ್ಧತಾ ಪ್ರಾಧಿಕಾರವು ನಿಯಮ ಮೀರಿ ವಂತಿಗೆ- ಶುಲ್ಕಗಳನ್ನು ವಸೂಲಿ ಮಾಡುತ್ತಿರುವ ಶಾಲೆಗಳ ವಿರುದ್ಧ ದೂರು ಬಂದ ಆಧಾರದ ಮೇಲೆ ಅಥವಾ ಸ್ವಯಂಪ್ರೇರಿತವಾಗಿ ತನಿಖೆ ನಡೆಸಿ ವರದಿಯನ್ನು ಸರ್ಕಾರದ ಕಾರ್ಯದರ್ಶಿ ಶಿಕ್ಷಣ ಇಲಾಖೆ, ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ರವಾನಿಸಿ ಜಿಲ್ಲಾ ಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಪರಿಶೀಲಿಸಿ ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇವ್ಯಾವು ನಿಯಮಗಳನ್ನು ಶಿಕ್ಷಣ ಸಂಸ್ಥೆಗಳು ಪಾಲಿಸುತ್ತಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು ವಂತಿಗೆಯನ್ನು ವಸೂಲಿ ಮಾಡುವಂತಿಲ್ಲ. ಸರ್ಕಾರ ನಿಗದಿಪಡಿಸಿದ ಬಾಬ್ತುಗಳಿಗಾಗಿ ಹಾಗೂ ಅವುಗಳಿಗಾಗಿ ನಿಗದಿಪಡಿಸಿದ ದರಗಳಲ್ಲಿ ಮಾತ್ರ ಶುಲ್ಕ ವಸೂಲಿ ಮಾಡತಕ್ಕದ್ದು. ವಂತಿಗೆ ವಸೂಲಿಯನ್ನು ತಡೆಗಟ್ಟಬೇಕೆಂದು ಹಾಗೂ ಅದನ್ನು ವಸೂಲಿ ಮಾಡುವ ಖಾಸಗಿ ಶಿಕ್ಷಣ ಸಂಸ್ತೆಗಳನ್ನು ನಿಯಮಾನುಸಾರ ಶಿಕ್ಷಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅದರಿಂದ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಆಗ್ರಹಿಸಿದರು.
ಕ್ರಮಕ್ಕೆ ಆಗ್ರಹ: ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು ವಿಶೇಷ ಆಸಕ್ತಿ ವಹಿಸಿ, ತಕ್ಷಣ ಕ್ರಮ ಆರಂಭಿಸಬೇಕೆಂದು ಮನವಿ ಮಾಡಲಾಯಿತು.
ಸಮಿತಿ ಉತ್ತರ ಕರ್ನಾಟಕ ವಿಭಾಗದ ಎಂ. ಯೇಸುರಾಜ, ಪ್ರಧಾನ ಕಾರ್ಯದರ್ಶಿ ಎಂ. ಹರೀಶ್ ಮಟಮಾರಿ, ಮುಖಂಡರಾದ ರೆಡ್ಡೆಪ್ಪ ತೋಗೆಮನಿ, ವೀರಯ್ಯ ಭೇರ್ಗಿ ಹಿರೇಮಠ, ವೀರೇಶ್ ಯಡಿಯೂರ್ಮಠ, ಜಾವೀದ್ ಪಾಷಾ, ಅಣ್ಣಪ್ಪ ಪಾಟೀಲ್, ಈರಣ್ಣ ಗಸ್ತಿ, ರವಿಚಂದ್ರ, ರಫೀಕ್, ಬಸವರಾಜ್, ಶಾಮಿದ್, ಅಂಬ್ರೇಶ್ ಇದ್ದರು.