ತಬರನ ಕಥೆಯಾಯ್ತು ಆಕಾಂಕ್ಷಿಗಳ ಭವಿಷ್ಯ
- ಜಗನ್ನಾಥ ಆರ್. ದೇಸಾಯಿ
ಕನ್ನಡಪ್ರಭ ವಾರ್ತೆ ರಾಯಚೂರು ಜೂ.4
ಹೈ.ಕ.ಭಾಗಕ್ಕೆ 371ನೇ ಕಲಂ ಅಡಿ ವಿಶೇಷ ಸ್ಥಾನಮಾನ ದೊರಕಿಸಿದವರಿಗೇ ಬೇಸರ ತರಿಸುವಂಥ ಸಂಗತಿಯಿದು. ಸುದೀರ್ಘ ಹೋರಾಟದ ನಂತರ ದೊರೆತ ಸ್ಥಾನಮಾನದ ಪ್ರಮಾಣ ಪತ್ರ ಪಡೆಯಲೂ ಹೋರಾಟ ಮಾಡುವಂಥ ಅನಿವಾರ್ಯತೆ ಸ್ಥಿತಿ. ಕಚೇರಿಗಳಿಗೆ ಎಡತಾಕಿದರೂ ದಾಖಲೆಗೆ ಅಲೆದಾಟ ನಿರಂತರ. ಪ್ರಮಾಣ ಪತ್ರದ ಬಗ್ಗೆ ಮಾಹಿತಿಯ ಕೊರತೆ ಒಂದೆಡೆ ಯಾದರೆ ಮತ್ತೊಂದೆಡೆ ಅಧಿಕಾರಿಗಳ ಉದಾಸೀನತೆಗೆ ಜಿಲ್ಲೆಯ ಆಕಾಂಕ್ಷಿಗಳು ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಹೈ.ಕ.ದ ವಿಶೇಷ ಸ್ಥಾನಮಾನದಿಂದ ದೊರೆತ ಪ್ರಯೋಜನವನ್ನು ಪಡೆಯಲು ತೆರಳುವವರ ಇಂದಿನ ದುಸ್ಥಿತಿಯಿದು.
ಹೈ.ಕ. ಭಾಗದಲ್ಲಿ ನಡೆದ ಸುದೀರ್ಘ ಹೋರಾಟದ ಫಲವಾಗಿ ಸಂವಿಧಾನದ 371ನೇ ಕಲಂ ಅಡಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಮೀಸಲಾತಿ ಭಾಗ್ಯ ದೊರೆತಿದೆ. ಆದರೆ ಆ ಭಾಗ್ಯ ತಮ್ಮದಾಗಿಸಿಕೊಳ್ಳುವ ಅದೃಷ್ಟ ಮಾತ್ರ ಆಡಳಿತದ ಅವ್ಯವಸ್ಥೆಯಿಂದ ಕೈಗೂಡುತ್ತಿಲ್ಲ. ಉದ್ಯೋಗ, ಶಿಕ್ಷಣ ಮತ್ತಿತರೆ ಕ್ಷೇತ್ರಗಳಲ್ಲಿ ಮೀಸಲು ಸೌಲಭ್ಯಕ್ಕಾಗಿ ಹಾತೊರೆಯುತ್ತಿರುವವರ ಗೋಳು ಕೇಳುವವರಿಲ್ಲ.
ಮಾಹಿತಿ ಕೊರತೆ: ಹೈ.ಕ.ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆತಾಗಿನಿಂದಲೂ ಸಂಪುಟ ಉಪಸಮಿತಿ ಶಿಫಾರಸು ಜಾರಿಗೆ ರಾಜ್ಯಪಾಲರು ಅಂಕಿತ ಹಾಕಿದ್ದರೂ, ಬಹುತೇಕರಿಗೆ ನಿಯಮಗಳ ಬಗ್ಗೆ ಮಾಹಿತಿಯ ಕೊರತೆಯಿದೆ. ಅದರಲ್ಲೂ ಗ್ರಾಮೀಣ ಪ್ರದೇಶದವರಿಗೆ ವಿಶೇಷ ಸ್ಥಾನ ಮಾನದಿಂದಾಗುವ ಪ್ರಯೋಜನಗಳೇನು ಎಂಬುದೇ ಗೊತ್ತಿಲ್ಲದ ಸ್ಥಿತಿಯಿದೆ. ನಗರ ಪ್ರದೇಶದವರಿಗೆ ನಿಯಮಗಳ ಸಂಪೂರ್ಣ ಮಾಹಿತಿಯಿಲ್ಲದಿರುವುದು ಗೊಂದಲಕ್ಕೆ ದಾರಿ ಮಾಡಿದೆ. ಜತೆಗೆ ಪ್ರಮಾಣ ಪತ್ರಕ್ಕಾಗಿ ಅಲೆದಾಡಲು ದಾರಿ ಮಾಡಿದೆ. ಪ್ರಮಾಣ ಪತ್ರ ವಿತರಣೆಯ ಆರಂಭದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಜಿಲ್ಲೆಯಲ್ಲಿ ಎಲ್ಲ ಅರ್ಜಿಗಳು ತಹಸೀಲ್ದಾರರ ಮೂಲಕವೇ ಸಹಾಯಕ ಆಯುಕ್ತರ ಕಚೇರಿಗೆ ತಲುಪಬೇಕೆಂಬ ಸೂಚನೆ ನೀಡಲಾಗಿತ್ತು. ಅದರಿಂದ ಸಾಕಷ್ಟು ಗೊಂದಲ ಉಂಟಾಗಿತ್ತು.
ಹಣ ಪೋಲು: ಪ್ರಮಾಣ ಪತ್ರ ಪಡೆಯಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರಿಂದ ನಗರದಲ್ಲಿನ ಕೆಲ ಜೆರಾಕ್ಸ್ ಅಂಗಡಿಯವರು ಅರ್ಜಿ ಪ್ರತಿಗೆ ಜತೆಗೆ ಸಂಬಂಧವಿಲ್ಲದ ಫಾರ್ಮ್ ಗಳನ್ನು ಆಕಾಂಕ್ಷಿಗಳಿಗೆ ನೀಡೃಘ ತಲಾ 500 ರು. ಪಡೆದು ಹಣ ಮಾಡಿಕೊಳ್ಳುವ ದಂಧೆ ಗಿಳಿದಿದ್ದರು. ಅದರಿಂದ ಕಂಗೆಟ್ಟ ವಿದ್ಯಾರ್ಥಿಗಳು, ಆಕಾಂಕ್ಷಿಗಳು ಹೋರಾಟಕ್ಕಿಳಿದ ಪರಿಣಾಮ ನೇರವಾಗಿ ಸಹಾಯಕ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸುವ ಪ್ರಯತ್ನ ಹೋರಾಟಗಾರರೇ ಮಾಡಿದರು. ಹಾಗಾಗಿ ಅರ್ಜಿಗಳು ಸಹಾಯಕ ಆಯುಕ್ತರ ಕಚೇರಿಗೆ ನೇರವಾಗಿ ಸಲ್ಲಿಕೆಯಾಗತೊಡಗಿದವು.
ಹೊರಜಿಲ್ಲೆಯ ಅಧಿಕಾರಿಗಳು: ಹೈ.ಕ.ಕ್ಕೆ ವಿಶೇಷ ಸ್ಥಾನಮಾನದಡಿ ದೊರೆತ ವಿಶೇಷ ಮೀಸಲಾತಿಯು ಹೊರಜಿಲ್ಲೆಯಿಂದ ಇಲ್ಲಿ ನೇಮಕಗೊಂಡು ಕಾರ್ಯನಿರ್ವ ಹಿಸುತ್ತಿರುವ ಅಧಿಕಾರಿಗಳಿಗೆ ಸಹನೆಯಾಗುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ಪರಿಣಾಮ ಅಧಿಕಾರಿಗಳ ಧೋರಣೆಯೇ ಚಿತ್ರ ವಿಚಿತ್ರ ಎಂಬಂತಿದೆ.
ಪ್ರಮಾಣಪತ್ರಕ್ಕಾಗಿ ಆಗಮಿಸುವವರಿಗೆ ಅನಗತ್ಯ ಗೊಂದಲ ಹುಟ್ಟಿಸುವುದು, ವಿವಿಧ ದಾಖಲೆಗಳಿಗೆ ಬೇಡಿಕೆಯಿಡುವುದು ಸೇರಿ ನಾನಾ ರೀತಿಯ ಕಾರಣಮೊಡ್ಡಿ ಪ್ರಮಾಣ ಪತ್ರಕ್ಕಾಗಿ ಅಲೆದಾಡಿಸುವ ಕಾರ್ಯ ಅಂಥ ಅಧಿಕಾರಿಗಳು ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಹಣದ ದಂಧೆ: ಜಿಲ್ಲೆಯಲ್ಲಿ ಹೈ.ಕ.ಅರ್ಹತಾ ಪ್ರಮಾಣ ಪತ್ರ ಪಡೆಯುವುದು ಕೆಲ ಸಿಬ್ಬಂದಿಗೆ ಹಣ ಗಳಿಕೆಯ ದಂಧೆಯಾಗಿದೆ ಎಂಬ ಮಾತು ಆಕಾಂಕ್ಷಿಗಳಿಂದ ಕೇಳಿಬಂದಿದೆ. ಅದು ವಾಸ್ತವವೂ ಆಗಿದೆ. ಹಣ ನೀಡಿದರೆ ಪ್ರಮಾಣ ಪತ್ರ ಬೇಗ ಕೈಸೇರುತ್ತದೆ. ಇಲ್ಲದಿದ್ದರೆ 30 ದಿನಗಳ ವರೆಗೆ ಕಾಯಲೇಬೇಕಾದ ಸ್ಥಿತಿಯಿದೆ.
ತರಾತುರಿ: ಸದ್ಯ ಶೈಕ್ಷಣಿಕ ವರ್ಷದ ಆರಂಭದ ದಿನಗಳಿವು. ಹಾಗಾಗಿ ಎಲ್ಲ ವಿದ್ಯಾರ್ಥಿಗಳಿಗೆ ಹೈ.ಕ.ಮೀಸಲಾತಿಯ ಪ್ರಯೋಜನ ಪಡೆ ಯುವ ತವಕ. ಸಿಇಟಿ ಬರೆದವರು, ವಿವಿಧ ಕೋರ್ಸುಗಳಿಗೆ ಪ್ರವೇಶ ಬಯಸಿದವರು ಪ್ರಮಾಣ ಪತ್ರ ಪಡೆಯಲು ಮುಂದಾ ಗುತ್ತಿದ್ದು ತರಾತುರಿಯ ಲಾಭ ಸಿಬ್ಬಂದಿ ಮಾಡಿಕೊಳ್ಳುತ್ತಿದ್ದಾರೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿರುವ ಸಹಾಯಕ ಆಯುಕ್ತ ಎಂ.ಪಿ. ಮಾರುತಿ, ಅರ್ಹತಾ ಪ್ರಮಾಣ ಪತ್ರಕ್ಕಾಗಿ ಎಲ್ಲರೂ ಏಕಕಾಲಕ್ಕೆ ಬೇಡಿಕೆಯಿಡುತ್ತಿರುವುದು ಗೊಂದಲಕ್ಕೆ ದಾರಿ ಮಾಡುತ್ತಿದೆ. ಕೇವಲ ಅಗತ್ಯವಿರುವವರು ಹಾಗೂ ಸದ್ಯ ವಿವಿಧ ಕೋರ್ಸುಗಳಿಗೆ ಪ್ರವೇಶ ಪಡೆಯುವವರು ಮಾತ್ರ ಅರ್ಜಿ ಸಲ್ಲಿಸಿದಲ್ಲಿ ಒತ್ತಡ ಕಡಿಮೆಯಾಗಲಿದೆ ಎಂದಿದ್ದಾರೆ.
ಆದರೆ ವಾಸ್ತವಾಂಶ ಮಾತ್ರ ಬೇರೆಯೇ ಆಗಿದೆ. ಜನತೆ ಈಗಲೇ ಪ್ರಮಾಣ ಪತ್ರ ಪಡೆದು ಭದ್ರವಾಗಿರಿಸಿಕೊಂಡರಾಯಿತು. ಮುಂದೆ ಅಗತ್ಯ ಬಿದ್ದಾಗ ಬಳಸಬೇಕೆಂಬ ಧಾವಂತ. ಪರಿಣಾಮ ನೂಕು ನುಗ್ಗಲು ತೀರಾ ಸಾಮಾನ್ಯ ಸಂಗತಿ.
ದಿನಕ್ಕೊಂದು ನಿಯಮ!
ಜಿಲ್ಲೆಯಲ್ಲಿ ಮೀಸಲಾತಿ ಪ್ರಮಾಣ ಪತ್ರ ಪಡೆಯಲು ದಿನಕ್ಕೊಂದು ಪದ್ಧತಿ, ನಿಯಮಗಳನ್ನು ಜಿಲ್ಲಾಡಳಿತದ ಅಧಿಕಾರಿಗಳು ಜಾರಿಗೆ ತರುತ್ತಿದ್ದಾರೆ. ಅದರಿಂದಾಗಿ ಅರ್ಜಿ ಹಿಡಿದು ತಹಸೀಲ್ದಾರ್ ಕಚೇರಿ, ಸಹಾಯಕ ಆಯುಕ್ತರ ಕಚೇರಿಗೆ ಆಕಾಂಕ್ಷಿಗಳು ಅಲೆಯುವುದೇ ಕಾಯಕವಾಗಿದೆ.
ಆರಂಭದಲ್ಲಿ ತಹಸೀಲ್ದಾರ್ ಕಚೇರಿ ಮೂಲಕ ಅರ್ಜಿ ಸಲ್ಲಿಸಿರಿ ಎಂದಿದ್ದ ಮೇಲಧಿಕಾರಿಗಳು ಆನಂತರದಲ್ಲಿ ಸಹಾಯಕ ಆಯುಕ್ತರ ಕಚೇರಿ ಮೂಲಕ ಸಲ್ಲಿಸಿರಿ ಎಂದರು. ಈಗ ಮತ್ತೆ ನಿಯಮ ಬದಲಿಸಿದ್ದು ಪುನಾ ತಹಸೀಲ್ದಾರ್ ಕಚೇರಿಯಿಂದ ಅರ್ಜಿ ಸಹಾಯಕ ಆಯುಕ್ತರ ಕಚೇರಿಗೆ ತಲುಪಬೇಕು. ಆಗಲೇ ಪ್ರಮಾಣ ಪತ್ರ ದೊರೆಯುವುದು ಎಂದು ಹೇಳುತ್ತಿದ್ದಾರೆ. ಪರಿಣಾಮ ಮತ್ತಷ್ಟು ಗೊಂದಲ ನಿರ್ಮಾಣವಾಗಿದೆ.
ಜಿಲ್ಲೆಯ ವಿವಿಧೆಡೆಯ ತಾಲೂಕು ಕೇಂದ್ರಗಳಲ್ಲಿ ಪ್ರಮಾಣ ಪತ್ರ ಪಡೆಯುವವರ ಗೋಳು ಹೇಳತೀರದು. ಆಯಾ ತಾಲೂಕುಗಳಿಂದ ಸಂಬಂಧಿಸಿದ ಸಹಾಯಕ ಆಯುಕ್ತರ ಕಚೇರಿಗೆ ಅರ್ಜಿ ತಲುಪುವುದೇ ಬಹುತೇಕ ನಿಂತಿದೆ ಎಂಬ ಆರೋಪವಿದೆ. ಹಾಗಾಗಿ ಆಕಾಂಕ್ಷಿಗಳು ದಿನವೂ ತಾಲೂಕು ಕಚೇರಿಗಳಿಗೆ ಅಲೆಯುವುದು ನಿಂತಿಲ್ಲ.
ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಹೋರಾಡಿದವರು ಸ್ಥಳೀಯರ ಅಲೆದಾಟ ಕಂಡು ಅಸಮಾಧಾನಗೊಳ್ಳುವುದೊಂದೇ ಬಾಕಿಯಿದೆ. ಸ್ಥಾನಮಾನವಾಯ್ತು ಈಗ ಪ್ರಮಾಣ ಪತ್ರಕ್ಕೂ ಹೋರಾಟ ಮಾಡುವಂಥ ಅನಿವಾರ್ಯತೆಗೆ ಸಂಘಟನೆಯವರು ಸಿಲುಕಿದ್ದಾರೆ. ಆ ದಿನಗಳು ದೂರವಿಲ್ಲ ಎಂದೇ ಹೇಳಬಹುದು.