'ಶರಣರ ತತ್ವ ಪಾಲನೆಯಿಂದ ಅನಿಷ್ಟ ನಾಶ'
ಕ.ಪ್ರ. ವಾರ್ತೆ ಲಿಂಗಸ್ಗೂರು ಜೂ.4
12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದು, ಶರಣರ ತತ್ವಗಳ ಪಾಲನೆಯಿಂದ ಸಮಾಜದಲ್ಲಿನ ಅನಿಷ್ಟ ಪದ್ಧತಿ ನಿರ್ಮೂಲನೆ ಸಾಧ್ಯವಾಗಲಿದೆ ಎಂದು ತಿಂಥಣಿ ಬ್ರಿಜ್ ಕನಕಗುರು ಪೀಠದ ಸಿದ್ಧರಾಮಾನಂದ ಪುರಿ ಸ್ವಾಮಿ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾನುಭವ ಮಂಟಪದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಇಲಕಲ್ ಚಿತ್ತರಗಿ ಸಂಸ್ಥಾನ ಮಠದ ಡಾ.ವಿಜಯ ಮಹಾಂತ ಶಿವಯೋಗಿಗಳ 86ನೇ ಗುರುವಂದನಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿ, ಬಸವಾದಿ ಶರಣರ ತತ್ವ ಪಾಲನೆ ಜೊತೆಗೆ ಬಸವತತ್ವ ಪ್ರಸಾರದಲ್ಲಿ ತೊಡಗಿದ ಇಲಕಲ್ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀಗಳು ಮಾನವ ಕುಲ ಉದ್ಧಾರಗೊಳಿಸುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಜಾತಿ-ಬೇಧವಿಲ್ಲದೆ ಗುಣಪ್ರಾಧಾನ್ಯತೆಗೆ ಹೆಚ್ಚು ಮಹತ್ವ ನೀಡುವ ಮೂಲಕ ಜಾತಿ ವ್ಯವಸ್ಥೆಯನ್ನು ಮೆಟ್ಟಿ ನಿಂತಿದ್ದಾರೆ ಎಂದರು. ಶಾಸಕ ಮಾನಪ್ಪ ವಜ್ಜಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಮರೇಶ್ವರ ಅಭಿನವ ಗುರುಗಜದಂಡ ಶ್ರೀಗಳು, ಅಂಕಲಿಮಠದ ಫಕೀರೇಶ್ವರ ಶ್ರೀಗಳು, ಇಲಕಲ್ ಗುರುಮಹಾಂತ ಶ್ರೀ, ಡಾ. ಬಸವಲಿಂಗ ಶ್ರೀ, ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ, ವಿಸಿಬಿ ಕಾಲೇಜು ಆಡಳಿತಾಧಿಕಾರಿ ಸಿ. ಶರಣಪ್ಪ, ಮುಖಂಡರಾದ ಡಾ. ಶಿವಬಸಪ್ಪ ಹೆಸರೂರು, ಗಿರಿಮಲ್ಲನಗೌಡ ಕರಡಕಲ್, ಗಿರಿರಾಜ ಹೊಸಮನಿ, ಅಮರಪ್ಪ ಸಕ್ರಿ, ಶಿವಾನಂದ ಐದನಾಳ, ಡಾ. ಮಲ್ಲಣ್ಣ ನಾಗರಹಾಳ ಇನ್ನಿತರರು ಇದ್ದರು.