ನೈರ್ಮಲ್ಯ ಕಾಪಾಡುವುದು ಅತ್ಯವಶ್ಯ: ಗಂಗಾಧರಯ್ಯ
ಸಿಂಧನೂರು: ಸಮಾಜದಲ್ಲಿಯ ಪ್ರತಿಯೊಬ್ಬರೂ ವಿದ್ಯಾವಂತರಾಗಿ ಪ್ರಜ್ಞಾವಂತಿಕೆಯಿಂದ ಪರಿಸರ ನಾಶವಾಗದಂತೆ ಎಚ್ಚರಿಕೆಯಿಂದ ಜೀವನ ಸಾಗಿಸಬೇಕು ಎಂದು ಸ್ಕೌಟ್ಸ್ ಮಾಸ್ಟರ್ ಗಂಗಾಧರಯ್ಯ ಹಿರೇಮಠ ಹೇಳಿದರು.
ನಾವು ಎಷ್ಟೇ ತಂತ್ರಜ್ಞಾನ ಯುಗದಲ್ಲಿ ಜೀವನ ಸಾಗಿಸಿದರೂ ನಮಗೆ ಜೀವಿಸಲು ಉತ್ತಮವಾದ ಗಾಳಿ, ಬೆಳಕು, ಶುದ್ಧವಾದ ಕುಡಿಯುವ ನೀರು ಹಾಗೂ ಆಹಾರದ ಅವಶ್ಯಕತೆಯಿದೆ. ಇವೆಲ್ಲವು ನಮಗೆ ಸರಳ ರೀತಿಯಲ್ಲಿ ದೊರೆಯ ಬೇಕಾದರೆ ಪರಿಸರವನ್ನು ಸರಿಯಾಗಿ ಕಾಪಾಡುವುದು ಅತಿ ಅವಶ್ಯಕತೆಯಿದೆ ಎಂದು ಹೇಳಿದರು.
ಅವರು ತಾಲೂಕಿನ ಅಂಬಾಮಠ ಸರ್ಕಾರಿ ಪ್ರೌಢಶಾಲೆಯ ಅಂಬಾದೇವಿ ಇಕೋ ಕ್ಲಬ್ ಮತ್ತು ಸ್ಕೌಟ್ ಮತ್ತು ಗೈಡ್ಸ್ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 'ಹಸಿರು ಹಬ್ಬ' ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕ ಸಂಗಮೇಶ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಬೀರಪ್ಪ ಶಂಭೋಜಿ, ಎಂ. ನಾಗರಾಜ್, ನಾಗರಾಜ್ ಶ್ರೇಷ್ಠಿ, ಪರಿಮಳಾ, ಮಮ್ತಾದ್ ಬೇಗ್ ಮಾತನಾಡಿದರು. ಸಹ ಶಿಕ್ಷಕಿಯರಾದ ಶೀಲಾ, ಲಕ್ಷ್ಮೀ ಕಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ್ ಉಪಸ್ಥಿತರಿದ್ದರು. ಶ್ರೀದೇವಿ ಸ್ವಾಗತಿಸಿದರು. ಅಂಬಿಕಾ ನಿರೂಪಿಸಿದರು. ಗೌಸಿಯಾ ವಂದಿಸಿದರು.