ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಇಬ್ಬರು ಬಾಲಕರು ವಶಕ್ಕೆ
ಲಿಂಗಸ್ಗೂರು: ಗೋನವಾಟ್ಲ ತಾಂಡಾದ 8 ವರ್ಷದ ಬಾಲಕಿ ಮೇಲೆ ಇಬ್ಬರು ಬಾಲಕರು ಅತ್ಯಾಚಾರವೆಸಗಿ ಭೀಕರವಾಗಿ ಕೊಲೆಗೈದ ಅಮಾನವೀಯ ಘಟನೆ ಭಾನುವಾರ ಸಂಜೆ ಜರುಗಿದೆ. ಇಂತಹ ಭೀಭತ್ಸ ಕೃತ್ಯ ಜರುಗಿದ ಮಾಹಿತಿ ತಿಳಿದ ಜನತೆ ಬೆಚ್ಚಿ ಬಿದ್ದಿದ್ದಾರೆ.
ತಾಲೂಕಿನ ಗೋನವಾಟ್ಲ ತಾಂಡಾದ ಮೋನಿಕಾ(ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕಿ ಮೇಕೆ ಮೇಯಿಸಲು ತೆರಳಿದ್ದ ಸಂದರ್ಭದಲ್ಲಿ ಇಬ್ಬರು ಬಾಲಕರು ಅತ್ಯಾಚಾರವೆಸಗಿ ನಂತರ ಕೊಲೆಗೈದು ನಾಲೆಯ ಪೊದೆಯಲ್ಲಿ ಬಿಸಾಕಿದ್ದು, ಬಾಲಕಿಯ ತಲೆಗೆ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆಗೈದಿದ್ದಾರೆಂದು ಪಾಲಕರು ಹಾಗೂ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ: ಮೋನಿಕಾ ಭಾನುವಾರ ಮೇಕೆ ಮೇಯಿಸಲು ತೆರಳಿದ್ದಾಳೆ. ಸಂಜೆ ಮೇಕೆಗಳು ಮಾತ್ರ ಮನೆಗೆ ಆಗಮಿಸಿವೆ. ಆದರೆ, ಬಾಲಕಿ ಮನೆಗೆ ಬಾರದೆ ಇದ್ದಾಗ, ಪಾಲಕರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದರು. ಎಲ್ಲೂ ಪತ್ತೆಯಾಗಿಲ್ಲ. ಬಾಲಕಿ ಜೊತೆ ತೆರಳಿದ್ದ ಬಾಲಕರಿಗೆ 500 ನೀಡಿ ವಿಚಾರಿಸಿದಾಗ ಘಟನೆ ಕುರಿತು ವಿವರ ನೀಡಿ, ಬಾಲಕಿಯ ಮೃತದೇಹ ತೋರಿಸಿದ್ದಾರೆ. ಆಕ್ರೋಶಗೊಂಡ ಪಾಲಕರು, ಗ್ರಾಮಸ್ಥರು ಬಾಲಕರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾಹಿತಿ ತಿಳಿದ ಡಿವೈಎಸ್‌ಪಿ ಅನಿತಾ ಹದ್ದಣ್ಣವರ್ ಹಾಗೂ ಸಿಪಿಐ ವರದರಾಜು ಗ್ರಾಮಕ್ಕೆ ಭೇಟಿ ನೀಡಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.