ಕರ್ನಾಟಕ ರೈತ ಸಂಘ ಕೆಂಗಲ್ ನೂತನ ಗ್ರಾಮ ಘಟಕ ರಚನೆ
ಸಿಂಧನೂರು: ತಾಲೂಕಿನ ಕೆಂಗಲ್ ಗ್ರಾಮದಲ್ಲಿ ಕರ್ನಾಟಕ ರೈತಸಂಘ ಹಾಗೂ ಹಸಿರು ಸೇನೆಯ ನೂತನ ಗ್ರಾಮ ಘಟಕವನ್ನು ಸಂಘದ ಜಿಲ್ಲಾಧ್ಯಕ್ಷ ಅಮೀನಪಾಷ ದಿದ್ದಗಿ ಉದ್ಘಾಟಿಸಿದರು.
ನಂತರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಗಟ್ಟಿಧ್ವನಿ ಎತ್ತುವಂತೆ ನೂತನ ಪದಾಧಿಕಾರಿಗಳಿಗೆ ಕರೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್. ಮಠ, ರೈತ ಮುಖಂಡ ಗಂಗಾಧರ, ಗ್ರಾಮದ ಮುಖಂಡರಾದ ತಾಯಪ್ಪ, ವೆಂಕಪ್ಪ ದಳಪತಿ, ಅಜಯಕುಮಾರ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಡಿವೆಪ್ಪ, ಅಧ್ಯಕ್ಷರಾಗಿ ಎಚ್. ರಂಗಸ್ವಾಮಿ, ಉಪಾಧ್ಯಕ್ಷ ಹುಸೇನಸಾಬ, ಪ್ರಧಾನ ಕಾರ್ಯದರ್ಶಿ ನರಸರಡ್ಡಿಗೌಡ, ಸಂಘಟನ ಕಾರ್ಯದರ್ಶಿಗಳಾದ ತಿಮ್ಮಪ್ಪ, ನಂದೆಪ್ಪ, ಸದಸ್ಯರಾಗಿ ಬಸವರಾಜಸ್ವಾಮಿ, ಶಿರಿಯಪ್ಪ, ತಳವಾರ ವಿರುಪಣ್ಣ, ತಳವಾರ ಮಲ್ಲಪ್ಪ, ಅಡಿವೆಪ್ಪ, ಹನುಮಂತಪ್ಪ ಅಲಮಪ್ಪ, ಯಲ್ಲಪ್ಪ, ಹುಲುಗಪ್ಪ, ರಾರಾವಿ ಹುಲಗಪ್ಪ, ಗಡ್ಡೆ ಶಿವಪ್ಪ, ಖಾಜಾ ಹುಸೇನಸಾಬ, ಶ್ರೀಧರ ಆಯ್ಕೆಯಾಗಿದ್ದಾರೆ.
ಕಾಲೇಜಿಗೆ ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ
ದೇವದುರ್ಗ: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿವಿಧ ಮೂಲಸೌಲಭ್ಯ ಒದಗಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿ ಒತ್ತಾಯಿಸಿದೆ.
ಈ ಕುರಿತು ಸೋಮವಾರ ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರಿಗೆ ಮನವಿ ಸಲ್ಲಿಸಿರುವ ಸಂಘಟನೆಯು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ವಿದ್ಯಾರ್ಥಿನಿಯರಿಗೆ ಶೌಚಾಲಯ, ಕಾಲೇಜಿನ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕಾಲೇಜಿನಲ್ಲಿ ಶೌಚಾಲಯವಿಲ್ಲದಿರುವುದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗಿದೆ. ಕುಡಿವ ನೀರಿಗಾಗಿ ಪರದಾಡುವಂಥ ಸ್ಥಿತಿಯಿದೆ. ಕಾಲೇಜಿಗೆ ಕೂಡಲೇ ಈ ಎಲ್ಲ ಸೌಲಭ್ಯ ಒದಗಿಸುವಂತೆ ಪ್ರಾಚಾರ್ಯರಿಗೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಕೂಡಲೇ ಈ ನಿಟ್ಟಿನಲ್ಲಿ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಘಟನೆ ತಾಲೂಕು ಅಧ್ಯಕ್ಷ ಮಹ್ಮದ್ ಮುಸ್ತಫ್ ಒತ್ತಾಯಿಸಿದ್ದಾರೆ.