ಕಸಾಪ ದತ್ತಿ ಪ್ರಶಸ್ತಿಗೆ ಕರೆ
ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ. ದತ್ತಿ ಪ್ರಶಸ್ತಿಗಳಾದ ಮಲ್ಲಿಕಾ ಪ್ರಶಸ್ತಿ, ಅಂತಾರಾಷ್ಟ್ರಿಯ ಮಹಿಳಾ ವರ್ಷದ ಮಹಿಳಾ ದತ್ತಿ ಮಹಿಳೆಯರ ಸ್ವತಂತ್ರ ಕೃತಿ ಪ್ರಶಸ್ತಿ, ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ, ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರು ದತ್ತಿ, ಶ್ರೀಮತಿ ನೀಲಗಂಗಾ ದತ್ತಿ, ಶ್ರೀಮತಿ ಕೆ.ಎಸ್. ಭಾರತಿ ರಾಜಾರಾಂ ಮಧ್ಯಸ್ಥ ದತ್ತಿ, ಶ್ರೀಮತಿ ಶಾರದಾ ಆರ್. ರಾವ್ ದತ್ತಿ, ದಿ. ಗೌರಮ್ಮ ಹಾರ್ನಹಳ್ಳಿ ಕೆ. ಮಂಜಪ್ಪ ದತ್ತಿ, ದಿ. ಎಚ್. ಕರಿಯಣ್ಣ ದತ್ತಿ ಹೀಗೆ ವಿವಿಧ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2013ನೇ ಸಾಲಿನ ಕೃತಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ವಿವರಕ್ಕೆ ಸಂಗಮೇಶ ಬಾದವಾಡಗಿ, ಗೌರವ ಕಾರ್ಯದರ್ಶಿ, ಕಸಾಪ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು ಇವರನ್ನು ದೂ. 080-26612991, 26623584 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ನೈರ್ಮಲ್ಯ ಕಾರ್ಯಾಗಾರ
ಸಿಂಧನೂರು: ತಾಲೂಕಿನ ಕೋಳಬಾಳ ಗ್ರಾಮ ಪಂಚಾಯಿತಿಯಲ್ಲಿ ಸಮೃದ್ಧಿ ಸಂಸ್ಥೆ ಬೂತಲದಿನ್ನಿ ಆಶ್ರಯದಲ್ಲಿ 2012-13ನೇ ಸಾಲಿನ ಬಿಆರ್‌ಜಿಎಫ್ ಯೋಜನೆಯಡಿ ಗ್ರಾಪಂ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಆರೋಗ್ಯ ಮತ್ತು ನೈರ್ಮಲ್ಯ ಕುರಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾದ ರಹೆಮಾನ್ ಕೊಪ್ಪಳ ಹಾಗೂ ಹುಲುಗಪ್ಪ ಬಳ್ಳಾರಿ ಅವರು ನೈರ್ಮಲ್ಯ ಕಾಪಾಡುವ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ನಿರುಪಾದೆಪ್ಪ, ಉಪಾಧ್ಯಕ್ಷೆ ಯಂಕಮ್ಮ ನಾಗಪ್ಪ, ಸಮೃದ್ಧಿ ಸಂಸ್ಥೆ ಅಧ್ಯಕ್ಷ ಶೇಕ್ಷಾವಲಿ ವಕೀಲ, ಕಾರ್ಯದರ್ಶಿ ದುರುಗಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಷಡಕ್ಷರಯ್ಯ ಇನ್ನಿತರರು ಇದ್ದರು.
14ರಂದು ಭಾರತ ನಿರ್ಮಾಣ ಪಾದಯಾತ್ರೆ
ದೇವದುರ್ಗ: ದೇವದುರ್ಗ ಬ್ಲಾಕ್ ಮತ್ತು ಅರಕೇರಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತ ನಿರ್ಮಾಣ ಪಾದಯಾತ್ರೆಯನ್ನು ಮಾ.14 ರಂದು ಆಯೋಜಿಸಿದ್ದು, ತಾಲೂಕಿನ ಮಾನಸಗಲ್ ನಿಂದ ದೇವದುರ್ಗದ ಸಾರ್ವಜನಿಕ ಕ್ಲಬ್ ಮೈದಾನದವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮನಗೌಡ ನಾಗಡದಿನ್ನಿ, ಬಸ್ಸಯ್ಯ ಶಾಖೆ ತಿಳಿಸಿದ್ದಾರೆ. ದೇವದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವದುರ್ಗ ಮತ್ತು ಅರಕೇರಾ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಜಂಟಿಯಾಗಿ ಮಾ.14 ರಂದು ಬೆಳಗ್ಗೆ 9.30ಕ್ಕೆ ಪಾದಯಾತ್ರೆ ಆರಂಭಗೊಳ್ಳಲಿದ್ದು, ಮ. 2ಕ್ಕೆ ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಶಾಸಕ ವೆಂಕಟೇಶ ನಾಯಕ, ಜಿಲ್ಲಾ ಸಮಿತಿ ಪದಾಧಿಕಾರಿಗಳು, ಪಕ್ಷದ ಜನಪ್ರತಿನಿಧಿಗಳು, ವಿವಿಧ ಘಟಕದ ಅಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಸುಧಾರಣೆ ಕ್ರಮ; ಇಂದು ಸಮಾವೇಶ
ರಾಯಚೂರು: ಚುನಾವಣೆ ಅಕ್ರಮಗಳನ್ನು ವಿರೋಧಿಸಿ ಸಮಗ್ರ ಚುನಾವಣೆ ಸುಧಾರಣೆಗಳಿಗೆ ಆಗ್ರಹಿಸಿ ಪ್ರಜಾಪ್ರಭುತ್ವದ ಉಳಿವಿಗಾಗಿ ನಗರದಲ್ಲಿ ಮಾ.11ರಂದು ಲೋಕಸತ್ತಾ ಪಾರ್ಟಿಯಿಂದ ಸಮಾವೇಶ ಆಯೋಜಿಸಲಾಗಿದೆ. ನಗರದ ಪತ್ರಿಕಾ ಭವನದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಸಮಾವೇಶದ ಅಧ್ಯಕ್ಷತೆಯನ್ನು ನಿವೃತ್ತ ಉಪ ಪ್ರಾಚಾರ್ಯ ಜಿ. ರಘುನಾಥರಾವ್ ವಹಿಸಲಿದ್ದಾರೆ. ತೆಲಂಗಾಣ ವಲಯದ ಲೋಕಸತ್ತಾ ಪಾರ್ಟಿಯ ಆಂಧ್ರದ ಉಪಾಧ್ಯಕ್ಷ ಭಂಡಾರು ರಾಮಮೋಹನರಾವ್, ಪಾರ್ಟಿಯ ಕರ್ನಾಟಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್., ಜನಸಂಗ್ರಾಮ ಪರಿಷತ್‌ನ ರಾಜ್ಯ ಕಾರ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ಮಾತನಾಡಲಿದ್ದಾರೆಂದು ಲೋಕಸತ್ತಾ ಪಾರ್ಟಿಯ ಜಿಲ್ಲಾಧ್ಯಕ್ಷ ರಾಮಣ್ಣ ತಿಳಿಸಿದ್ದಾರೆ.
ಕಾರ್ಮಿಕರ ಸಂಘದ ಅಧ್ಯಕ್ಷರ ಆಯ್ಕೆ
ಸಿಂಧನೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ನೂತನ ಅಧ್ಯಕ್ಷರಾಗಿ ನನ್ನುಸಾಬ್ ಮೇಸ್ತ್ರಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಶೇಕ್ಷಾಖಾದ್ರಿ, ಉಪಾಧ್ಯಕ್ಷರಾಗಿ ಬಸವರಾಜ ಬಿ, ಬಾಷಾ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಿಬೂಬ್ ಮೇಸ್ತ್ರಿ, ಸಂಘಟನಾ ಕಾರ್ಯದರ್ಶಿಯಾಗಿ ಮುಕ್ತಾರ ಅಹ್ಮದ್ ಮೇಸ್ತ್ರಿ, ಸಹ ಕಾರ್ಯದರ್ಶಿಗಳಾಗಿ ಬಾಲಾಜಿ ಮೇಸ್ತ್ರಿ, ಕಾಳಪ್ಪ ಮೇಸ್ತ್ರಿ, ಖಜಾಂಚಿಯಾಗಿ ಮಹಿಬೂಬ್ ತಗ್ಗಿನಮನಿ, ಜಂಟಿ ಖಜಾಂಚಿಯಾಗಿ ಸಾಧಿಕ್ ಮೇಸ್ತ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಿಡ್ಡಪ್ಪ, ಮುರುಗೇಶ, ಬುಡ್ಡ, ಬಸವರಾಜ ಗೂಳಿ, ಶಿವಕುಮಾರ, ಹಸನ್, ಹುಸೇನ್, ಶಮ್ಮುಲು, ಖಾದರ ಬಾಷಾ, ಶಂಕರಸಿಂಗ್, ವೆಂಕಟೇಶ ಆಯ್ಕೆಯಾಗಿದ್ದಾರೆ.