ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತುಂಗಭದ್ರಾ ಎಡದಂಡೆ ಆಧುನೀಕರಣಕ್ಕೆ ನೀತಿ ಸಂಹಿತೆ ಗುಮ್ಮ; ಆಯೋಗಕ್ಕೆ ಪತ್ರ

Srinivasa Murthy VN
Updated On : 10 Mar 2014, 11:02 am

-ಜಗನ್ನಾಥ ಆರ್. ದೇಸಾಯಿ
ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯ ಆಧುನೀಕರಣ ಕಾಮಗಾರಿಗೆ ಪ್ರತಿ ಸಲದಂತೆ ಈ ಬಾರಿಯೂ ಚುನಾವಣೆ ನೀತಿ ಸಂಹಿತೆಯ ಬಿಸಿ ತಟ್ಟುವ ಲಕ್ಷಣಗಳಿವೆ. ಕೋಟ್ಯಂತರ ರು. ಕಾಮಗಾರಿ ಕೈಗೊಳ್ಳಲು ಈ ಮೊದಲೇ ಸರ್ಕಾರ ನಿರ್ಧರಿಸಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಚುನಾವಣೆ ಘೋಷಣೆಯಾಗಿದ್ದರಿಂದ ಕಾಮಗಾರಿಗೆ ಅಡಚಣೆಯಾಗಿದ್ದು, ಜಿಲ್ಲಾಡಳಿತ ಚುನಾವಣೆ ಆಯೋಗಕ್ಕೆ ಈ ಕುರಿತು ವಿನಾಯಿತಿಗೆ ಕೋರಿ ಪತ್ರ ಬರೆದಿದೆ.
ತುಂಗಭದ್ರಾ ಎಡದಂಡೆ ಕಾಲುವೆಯ ಆಧುನೀಕರಣ ಕಾಮಗಾರಿ ಕಳೆದ ಕೆಲವು ವರ್ಷಗಳಿಂದ ಪ್ರತಿ ಬೇಸಿಗೆ ಆರಂಭದ ವೇಳೆ ಕಾಲುವೆಯಲ್ಲಿ ನೀರಿನ ಹರಿವು ಸ್ಥಗಿತಗೊಳ್ಳುತ್ತಿದ್ದಂತೆಯೇ ಕೈಗೆತ್ತಿಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ವಿಳಂಬವಾಗಿದ್ದೂ ಇದೆ. ಈ ಬಾರಿ ಸಹ ಅದರಂತೆಯೇ ಎಡದಂಡೆ ಕಾಲುವೆಯ ಆಧುನೀಕರಣ ಹಾಗೂ ವಾರ್ಷಿಕ ದುರಸ್ತಿಗೆ ಸರ್ಕಾರ ಮುಂದಾಗಿದ್ದು, ಚುನಾವಣೆಯ ನೀತಿ ಸಂಹಿತೆಯ ಬಿಸಿ ತಟ್ಟಿದೆ.
ಅಧಿಕಾರಿಗಳಲ್ಲಿ ಆತಂಕ: ತುಂಗಭದ್ರಾ ನೀರಾವರಿ ಇಲಾಖೆಯ ಹಿರಿಯ ಎಂಜಿನಿಯರ್ ಮಲ್ಲಿಕಾರ್ಜುನ ಅವರು ಜಿಲ್ಲಾಡಳಿತಕ್ಕೆ ಈ ಕುರಿತು ಪತ್ರ ಬರೆದಿದ್ದು, ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿಲ್ಲವಾಗಿದೆ. ಚುನಾವಣೆ ಆಯೋಗ ಅನುಮತಿಸಿದಲ್ಲಿ ಕಾಮಗಾರಿ ನಡೆಸಬಹುದಾಗಿದೆ ಎಂದು ಕೋರಿದ್ದಾರೆಂದು ಗೊತ್ತಾಗಿದೆ.
ಕೋಟ್ಯಂತರ ರು. ಕಾಮಗಾರಿ: ತುಂಗಭದ್ರಾ ಎಡದಂಡೆ ಕಾಲುವೆಯ ವಾರ್ಷಿಕ ದುರಸ್ತಿ ಮತ್ತು ಆಧುನೀಕರಣ ಕಾಮಗಾರಿಗೆ ಪ್ರಸಕ್ತ ವರ್ಷ ಸರ್ಕಾರ ಜಿಲ್ಲೆಯಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಯಚೂರು ಜಿಲ್ಲೆಯ ಯರಮರಸ್ ನೀರಾವರಿ ವಿಭಾಗದಲ್ಲಿ 276 ಕೋಟಿ, ಸಿರವಾರ ನೀರಾವರಿ ವಿಭಾಗದಲ್ಲಿ 165 ಕೋಟಿ ಹಾಗೂ ಸಿಂಧನೂರು ವಿಭಾಗದಲ್ಲಿ 140 ಕೋಟಿ ಸೇರಿದಂತೆ ಇನ್ನಿತರೆ ದುರಸ್ತಿ ಕಾರ್ಯ ಸೇರಿ ಒಟ್ಟು 350ರಿಂದ 380 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲು ಯೋಜಿಸಿತ್ತು. ಮಾರ್ಚ್ ಅಂತ್ಯದ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಲುವೆಯಲ್ಲಿ ನೀರಿನ ಹರಿವು ಸ್ಥಗಿತಗೊಳ್ಳುತ್ತಿದ್ದಂತೆಯೇ ಕಾಲುವೆ ವಾರ್ಷಿಕ ದುರಸ್ತಿ ಕೈಗೆತ್ತಿಕೊಳ್ಳಲಾಗುತ್ತಿತ್ತು. ಆದರೆ ಚುನಾವಣೆ ಘೋಷಣೆಯಾಗಿರುವುದು ರೈತರಲ್ಲಿ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳಲ್ಲಿ ಆತಂಕಕ್ಕೆ ಎಡೆ ಮಾಡಿದೆ.
ದುರಸ್ತಿಗೆ ಅಡ್ಡಿ?: ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯ ವೇಳೆಯೂ ಕಾಲುವೆಯ ದುರಸ್ತಿ ಮತ್ತು ಆಧುನೀಕರಣ ಕಾಮಗಾರಿಗೆ ನೀತಿ ಸಂಹಿತೆ ಅಡ್ಡಿಯಾಗಿತ್ತು. ಆ ವೇಳೆ ಜಿಲ್ಲಾಡಳಿತ ಚುನಾವಣೆ ಆಯೋಗಕ್ಕೆ ಪತ್ರ ಬರೆದು ಕಾಮಗಾರಿಯ ಅವಶ್ಯಕತೆ ಕುರಿತು ವಿವರಿಸಿದ್ದರಿಂದ ಅನುಮತಿ ದೊರೆತಿತ್ತು. ಈ ಬಾರಿ ಸಹ ನೀತಿ ಸಂಹಿತೆ ಕಾಲುವೆಯ ದುರಸ್ತಿಗೆ ಅಡ್ಡಿಯಾಗುವ ಎಲ್ಲ ಲಕ್ಷಣಗಳಿವೆ. ಹಾಗಾಗಿ ತುಂಗಭದ್ರಾ ನೀರಾವರಿ ಇಲಾಖೆಯ ಹಿರಿಯ ಎಂಜಿನಿಯರ್ ಜಿಲ್ಲಾಡಳಿತಕ್ಕೆ ಈ ಬಗ್ಗೆ ಗಮನ ಸೆಳೆದಿದೆ. ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು, ನೀರಾವರಿ ಇಲಾಖೆಯ ಮನವಿ ಮೇರೆಗೆ ಕಾಮಗಾರಿಯ ತುರ್ತು ಅವಶ್ಯಕತೆಯ ಬಗ್ಗೆ ಜಿಲ್ಲಾಡಳಿತ ಚುನಾವಣೆ ಆಯೋಗಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ ಎಂದು ತಿಳಿಸಿದ್ದಾರೆ.
ಕಳೆದ ಅನೇಕ ವರ್ಷಗಳಂತೆಯೇ ಪ್ರಸಕ್ತ ವರ್ಷವೂ ಎಡದಂಡೆ ಕಾಲುವೆಯ ವಾರ್ಷಿಕ ದುರಸ್ತಿ ಕಾಮಗಾರಿಗೆ ನೀತಿ ಸಂಹಿತೆಯ ಗುಮ್ಮ ಕಾಡತೊಡಗಿದೆ. ಹಾಗೆಯೇ ಪ್ರತಿ ವರ್ಷದಂತೆ ಚುನಾವಣೆ ಆಯೋಗದಿಂದ ನೀತಿ ಸಂಹಿತೆಯಿಂದ ವಿನಾಯಿತಿ ದೊರೆಯುವ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement