ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬುದ್ದಿನ್ನಿ ಕೆರೆಗೆ ಕಾಯಕಲ್ಪ ಯಾವಾಗ?

Srinivasa Murthy VN
Updated On : 11 Mar 2014, 12:36 pm

-ಪಂಪಯ್ಯ ಮಠ
ಕ.ಪ್ರ. ವಾರ್ತೆ ಮುದಗಲ್ ಮಾ.10
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಬುದ್ದಿನ್ನಿ ಕೆರೆ ಇಲಾಖೆ ಅಧಿಕಾರಿಗಳಿಗೆ, ಈ ಭಾಗದ ಗುತ್ತಿಗೆದಾರರಿಗೆ ಕಲ್ಪವೃಕ್ಷವಾದಂತಾಗಿದೆ. ಪ್ರತಿ ವರ್ಷ ಕೆರೆ ನಿರ್ವಹಣೆಯ ಹೆಸರಲ್ಲಿ ಲಕ್ಷಾಂತರ ರು. ಖರ್ಚು ಹಾಕಿ ಹಣ ಲೂಟಿ ಮಾಡುವುದು ವಾಡಿಕೆಯಾಗಿದೆ.
ರೈತರಿಗೆ ಜೀವ ಜಲವಾಗಬೇಕಿದ್ದ ಬುದ್ದಿನ್ನಿ ಕೆರೆ ನೀರು, ನಿರ್ವಹಣೆ ಕೊರತೆಯಿಂದ ವ್ಯರ್ಥವಾಗುತ್ತಿದೆ. ಸುಮಾರು 12 ವರ್ಷಗಳ ಹಿಂದೆ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಡಿ ಅಂದಾಜು 24 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕೆರೆಗೆ 163 ಎಕರೆ ಭೂಮಿ ನೀರಾವರಿ ಪ್ರದೇಶವಾಗಬೇಕಾಗಿತ್ತು. ಆದರೆ ಇಲಾಖೆಯಿಂದ ಇಲ್ಲಿಯವರೆಗೆ ಕೆರೆ ದುರಸ್ತಿಯಿಲ್ಲ, ಹಿಡಿ ಮಣ್ಣು ಸಹ ಸ್ಥಳಾಂತರಗೊಂಡಿಲ್ಲ, ಮುಳ್ಳು ಕಂಟಿಗಳು ಬೆಳೆದು ಕೆರೆಯ ಏರಿ ಸಂಪೂರ್ಣ ಹಾಳಾಗಿದೆ.
ಆದರೆ ಸಣ್ಣ ನೀರಾವರಿ ಇಲಾಖೆಯ ದಾಖಲಾತಿಯಲ್ಲಿ ಮಾತ್ರ ಪ್ರತಿ ವರ್ಷ ಕೆರೆ ದುರಸ್ತಿ ಮತ್ತು ಜಂಗಲ್ ಕಟಿಂಗ್‌ಗೆ ಖರ್ಚು ಹಾಕಲಾಗುತ್ತಿದೆ. ಮಟ್ಟೂರು ಗ್ರಾ.ಪಂ.ನ ಎನ್‌ಆರ್‌ಇಜಿ ಯೋಜನೆಯಡಿ 12 ದಿನ ಕಾಮಗಾರಿ ಕೈಗೊಂಡು ಹೂಳು ತೆಗೆಸಿದ್ದನ್ನು ಬಿಟ್ಟರೆ ಬೇರೆ ಯಾವುದೇ ಕೆಲಸ ನಡೆದಿಲ್ಲ. ತಾಲೂಕಿನ ಬೇರೆ ಕೆರೆಗಳನ್ನು ಜಲಸಂವರ್ಧನಾ ಯೋಜನೆಯಡಿ ಸೇರಿಸಿ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಇಲಾಖೆ ಬುದ್ದಿನ್ನಿ ಕೆರೆಯನ್ನು ಕೈ ಬಿಟ್ಟಿದೆ ಎಂದು ರೈತರು ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುದ್ದಿನ್ನಿ, ತೆರೆಬಾವಿ, ಗುಡಿಹಾಳ, ಮಟ್ಟೂರು ಗ್ರಾಮಗಳ ಸುಮಾರು 163 ಎಕರೆ ಭೂಮಿಗೆ ನೀರುಣಿಸಬೇಕಾದ ಕೆರೆಗೆ ಯಾವುದೇ ಕಾಯಕಲ್ಪ ನೀಡದೇ ನಿರ್ಲಕ್ಷ್ಯ ವಹಿಸಲಾಗಿದ್ದು, ರೈತರ ಕೆಂಗಣ್ಣಿಗೆ ಅಧಿಕಾರಿ ವರ್ಗದವರು ಗುರಿಯಾಗಿದ್ದಾರೆ. ಕೆರೆಯ ಒಡ್ಡು ಸೋರಿಕೆಯಾಗುತ್ತಿದ್ದರಿಂದ ಕೆರೆಯಲ್ಲಿ ಹನಿ ನೀರು ನಿಲ್ಲುತ್ತಿಲ್ಲ, ಕೆರೆಯಿಂದ ಸುತ್ತಮುತ್ತಲಿನ ಹಳ್ಳಿಗಳ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಾಗುತ್ತದೆ. ಕರೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದರಿಂದ ಸಂಪೂರ್ಣ ಹಾಳಾಗಿದೆ.
ಸಚಿವರ ಗಮನಕ್ಕೆ: ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿಯವರಿಗೂ ಬುದ್ದಿನ್ನಿ ಕೆರೆಯ ಬಗ್ಗೆ ಮಾಹಿತಿ ಇದೆ. ಈ ಕೆರೆಗೆ ಮುದಗಲ್- ಲಿಂಗಸ್ಗೂರು ಮಾರ್ಗದಲ್ಲಿ ಬರುವ ಗಡ್ಡಿಹಳ್ಳಕ್ಕೆ ಬ್ಯಾರೇಜ್ ನಿರ್ಮಿಸಿ ಅಲ್ಲಿಂದ ನಾಲೆ ನಿರ್ಮಾಣ ಮಾಡಿ ಬುದ್ದಿನ್ನಿ, ಮಟ್ಟೂರು ಕೆರೆಗಳಿಗೆ ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಲು ಈಗಾಗಲೇ ಇಲಾಖೆ ಅಧಿಕಾರಿಗಳು ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಿದ್ದಾರೆ. ಆದರೆ ಯೋಜನೆ ಕಡತ ಏನಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಕಾರಣ ಸಚಿವರು ಆ ಕಡತವನ್ನು ಪರಿಶೀಲಿಸಿ ಚಾಲನೆ ನೀಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಮನವಿ ಮಾಡಿದ್ದಾರೆ.

ಬುದ್ದಿನ್ನಿ ಕೆರೆಯು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಮಟ್ಟೂರು ಗ್ರಾಪಂ ವ್ಯಾಪ್ತಿಗೆ ಬರುವ 163ಕ್ಕೂ ಹೆಚ್ಚು ಭೂ ಪ್ರದೇಶದಲ್ಲಿ ನೀರಾವರಿ ಸೌಲಭ್ಯವು ವಂಚಿತವಾಗುತ್ತಿದೆ. ಕೆರೆ ನಿರ್ಮಾಣವಾದಾಗಿನಿಂದ ಕೆರೆ ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿ ವರ್ಗದವರು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ.
ಚ ರೈತ ಅಮರಪ್ಪ ಮಟ್ಟೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement