ಅಭಿವೃದ್ಧಿ ಕಾರ್ಯದಲ್ಲಿ ಖರ್ಗೆ ಮೀರಿಸುವೆ: ನಾಯಕ
ಕ.ಪ್ರ. ವಾರ್ತೆ ಲಿಂಗಸ್ಗೂರು ಮಾ.21
ಬರುವ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಹೈ-ಕ ಭಾಗದ ಮುತ್ಸದ್ಧಿ, ಅನುಭವಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೀರಿಸುವ ಅಭಿವೃದ್ಧಿ ಕಾರ್ಯ ಮಾಡುವುದಾಗಿ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಕೆ. ಶಿವನಗೌಡ ನಾಯಕ ಹೇಳಿದರು.
ಪಟ್ಟಣದ ಬಸವಸಾಗರ ಕ್ರಾಸ್ ಹತ್ತಿರ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ನಗರ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಯಚೂರು ಲೋಕಸಭಾ ಕ್ಷೇತ್ರದಿಂದ ಈ ಹಿಂದೆ ಆಯ್ಕೆಗೊಂಡ ಲೋಕಸಭಾ ಸದಸ್ಯರು ಉತ್ತಮ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ವಿಫಲರಾಗಿದ್ದು, ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಶಾಶ್ವತ ಕುಡಿಯುವ ನೀರಿ ವ್ಯವಸ್ಥೆ ಇಲ್ಲ. ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರು ವ್ಯವಸ್ಥೆ, ಸುಸಜ್ಜಿತ ಆಸ್ಪತ್ರೆ, ಪೊಲೀಸ್ ಠಾಣೆ ಇರುವುದಿಲ್ಲ ಎಂದು ಆರೋಪಿಸಿದರು.
ಬರುವ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಕೇವಲ 365 ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ಲಿಂಗಸ್ಗೂರು ನಗರದಲ್ಲಿ ದಿನದ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆ, ಸರ್ಕಾರಿ ಜಿಮ್, ಎಂಜಿನಿಯರಿಂಗ್ ಕಾಲೇಜು, ರೇಲ್ವೆ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡು ಜಿಲ್ಲೆಯಲ್ಲಿ ಲಿಂಗಸ್ಗೂರು ಮಾದರಿ ನಗರವನ್ನಾಗಿ ಮಾಡುತ್ತೇನೆ. ಇಲ್ಲದಿದ್ದರೆ ರಾಜಿನಾಮೆ ನೀಡುವುದಾಗಿ ಸವಾಲು ಹಾಕಿದರು.
ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸಿದ್ದನಗೌಡ ಪಾಟೀಲ್, ಮಾಜಿ ಅಧ್ಯಕ್ಷ ರಮೇಶ ಜೋಷಿ, ಮುಖಂಡರಾದ ಮಲ್ಲಪ್ಪ ಅಂಕುಶದೊಡ್ಡಿ, ಸಿದ್ದ ವೈ. ಬಂಡಿ, ಟಿ.ಆರ್. ನಾಯಕ, ಲಕ್ಷ್ಮೀಕಾಂತರೆಡ್ಡಿ, ಜಿ.ಜಿ. ನಾಯಕ, ಜಗನ್ನಾಥ ಕುಲಕರ್ಣಿ, ಜೀವಲೆಪ್ಪ ನಾಯಕ, ಶಶಿಕಾಂತ ಗಸ್ತಿ, ಪ್ರಭುಸ್ವಾಮಿ ಇದ್ದರು.