ಜವಳಗೇರಾ; ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ
ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಜಾಥಾ ನಡೆಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಅನುಪಮ ಕುಲಕರ್ಣಿ ಮಾತನಾಡಿ, ಮತದಾನವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಅಮೂಲ್ಯ ಅಧಿಕಾರವಾಗಿದೆ. ನಮ್ಮನ್ನಾಳುವ ಜನಪ್ರತಿನಿಧಿಗಳು ಹೇಗಿರಬೇಕು ಎಂಬುದನ್ನು ಆಲೋಚಿಸಿ ಮತದಾನ ಮಾಡುವುದು ಅವಶ್ಯವಾಗಿದೆ. ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಪ್ರತಿಯೊಬ್ಬ ಪ್ರಜೆಯೂ ತನಗೆ ನೀಡಿರುವ ಮತದಾನದ ಅಧಿಕಾರವನ್ನು ಕಡ್ಡಾಯವಾಗಿ ಚಲಾಯಿಸಬೇಕೆಂದು ಸಲಹೆ ನೀಡಿದರು. ನಂತರ ನಡೆದ ಜಾಗೃತಿ ಜಾಥಾ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿತು. ಶಿಕ್ಷಕರಾದ ಮಹಾದೇವಪ್ಪ, ಅಡಿವೆಮ್ಮ, ಉಮಾದೇವಿ, ಕಾಂತರಾಜ, ಗಿರೀಶ, ಹನುಮಂತಪ್ಪ ಕೆ., ಅನ್ನಮ್ಮ, ಗೀತಾ ಬಿ.ಟಿ., ಸಾಕ್ಷರ ಭಾರತ ಕಾರ್ಯಕ್ರಮದ ಪ್ರೇರಕರಾದ ಅಯ್ಯಪ್ಪ ಪಿ., ಉಮಾದೇವಿ, ಶಾಲೆಯ ಸಿಬ್ಬಂದಿ ಶ್ರೀನಿವಾಸ, ಕಾಸೀಂ ಅಲಿ, ಬಸವರಾಜ ಇದ್ದರು.