ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜೇವರ್ಗಿಯಲ್ಲಿ ಶ್ರೀಗಳು ಸ್ಥಾಪಿಸಿದ ಕೊನೆಯ ಮೃತ್ತಿಕಾ ವೃಂದಾವನ

Srinivasa Murthy VN
Updated On : 22 Mar 2014, 9:33 am

-ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.21
ಮಂತ್ರಾಲಯ ಗುರುರಾಯರ ಮಠದ ಹಿರಿಯ ಶ್ರೀಗಳಾದ ಸುಯತೀಂದ್ರತೀರ್ಥರಿಗೂ ಬಿಸಿಲೂರಿಗೂ ಎಲ್ಲಿಲ್ಲದ ನಂಟು. ಅದಕ್ಕೇ ಇರಬೇಕು, ಸುಯತೀಂದ್ರತೀರ್ಥರು ತಮ್ಮ ಜೀವಿತಾವಧಿಯಲ್ಲಿ ಅನೇಕ ಕಡೆಗಳಲ್ಲಿ ಗುರುರಾಯರ ಮೃತ್ತಿಕಾ ವೃಂದಾವನಗಳನ್ನು ಸ್ಥಾಪಿಸಿದರು. ಆದರೂ ಸಹ ತಮ್ಮ ಅಮೃತ ಹಸ್ತದಿಂದ ಗುರುಗಳ ಮೃತ್ತಿಕಾ ವೃಂದಾವನ ಅವರು ಕೊನೆಯದಾಗಿ ಸ್ಥಾಪಿಸಿದ್ದು ಜೇವರ್ಗಿಯಲ್ಲಿ.
ಅನಾರೋಗ್ಯದ ಮಧ್ಯೆಯೂ ಜೇವರ್ಗಿ ಭಕ್ತರ ಕೋರಿಕೆಯಂತೆ 2013, ನ.21 ಮತ್ತು 22ರ ಎರಡು ದಿನ ಅಲ್ಲಿಗೆ ಬಂದು ಗುರುಗಳ ವೃಂದಾವನ, ಮಂಚಾಲಮ್ಮ ಮಂದಿರಗಳನ್ನು ಸ್ಥಾಪಿಸಿದ್ದರು. ಮಂಚಾಲಮ್ಮ ಮಂದಿರ ಸಹಿತವಾಗಿರುವ ಗುರುರಾಯರ ವೃಂದಾವನವಿರುವ ಸ್ಥಳಗಳ ಪೈಕಿ ಜೇವರ್ಗಿ 6ನೇಯದ್ದು ಎಂದು ಸಂತೋಷಪಟ್ಟು ವಿಶೇಷ ಅನುಗ್ರಹ ಸಹ ಮಾಡಿದ್ದರು.
ಜೇವರ್ಗಿ ವೃಂದಾವನ ಸ್ಥಾಪನೆಗೂ ಮುಂಚೆ ಸುಯತೀಂದ್ರತೀರ್ಥರು ರಾಮೇಶ್ವರದಲ್ಲಿಯೂ ರಾಯರ ಮೃತ್ತಿಕಾ ವೃಂದಾವನ ಸ್ಥಾಪಿಸಿದ್ದಾರೆ. ಅವರು ಅನಾರೋಗ್ಯದ ನಡುವೆಯೂ ಜೇವರ್ಗಿಗೆ ಆಗಮಿಸಿ ಗುರುಗಳ ವೃಂದಾವನ ಸ್ಥಾಪಿಸಿದರು. ಜೇವರ್ಗಿ ಗುರುರಾಯರ ವೃಂದಾವನವೇ ಸುಯತೀಂದ್ರತೀರ್ಥರ ಅಮೃತ ಹಸ್ತದ ಕೊನೆಯ ಮೃತ್ತಿಕಾ ವೃಂದಾವನ ಎನ್ನುತ್ತಾರೆ ಗುರುರಾಯರ ಮಠದ ಗುಲ್ಬರ್ಗ ಭಾಗದ ಮುಖಂಡ ನವಲಿ ಕೃಷ್ಣಾಚಾರ್ಯ.
'ಕಲ್ಬುರ್ಗಿ ಕಂಪು' ಕಂಡು ಪ್ರಸನ್ನರಾಗಿದ್ದರು: 2010ರಲ್ಲಿ ಗುಲ್ಬರ್ಗದ ಉಪ್ಪಿನ್ ತೋಟದಲ್ಲಿ ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಆಯೋಜಿತವಾಗಿದ್ದ ಕಲ್ಬುರ್ಗಿ ಕಂಪು ಕಾರ್ಯಕ್ರಮದ ಸಂತರ ಸಮಾವೇಶದಲ್ಲಿ ಭಾಗವಹಿಸಿದ್ದರು. ಉದ್ಘಾಟನೆಗೂ ವೇದಿಕೆಯಲ್ಲಿ ವಿರಾಜಮಾನರಾಗಿದ್ದು ಆಶೀರ್ವದಿಸಿದ್ದ ಸುಯತೀಂದ್ರತೀರ್ಥರು, ಕಲ್ಬುರ್ಗಿ ಕಂಪು ಕಾರ್ಯಕ್ರಮದ ಹಿಂದಿನ ಪರಿಕಲ್ಪನೆ, ಅದರ ದೇಶಭಕ್ತಿ ಬೆಳೆಸುವ, ದೇಶ ಸೇವೆಯ ಪರಿಕಲ್ಪನೆಯೊಂದಿಗೆ ಇಡೀ ಸಮಾರಂಭ ತನ್ನ ಪೊರೆ ಕಳಚುತ್ತಿದ್ದ ಪರಿ ಖುದ್ದು ಕಂಡು ಪ್ರಸನ್ನಚಿತ್ತರಾಗಿದ್ದರು. ಮಂತ್ರಾಲಯ ಮಠದಿಂದ 1 ಲಾರಿ ತುಂಬ ಆಹಾರ ಧಾನ್ಯ, ಅಕ್ಕಿ, ಗೋಧಿ, ಬೇಳೆ, ಬೆಲ್ಲ ಸೇರಿದಂತೆ ಸಕಲ ಪರಿಕರಗಳನ್ನು ನೂರಾರು ಕ್ವಿಂಟಾಲ್‌ನಷ್ಟು ದೇಣಿಗೆ ರೂಪದಲ್ಲಿ ನೀಡಿದ್ದರು.
ಗುಲ್ಬರ್ಗಕ್ಕೆ ವಿಶೇಷ ಅನುಗ್ರಹ: ಸುಯತಿಂದ್ರತೀರ್ಥರು ಗುಲ್ಬರ್ಗ ಮಹಾನಗರಕ್ಕೆ ನಾಲ್ಕಾರು ಬಾರಿ ಭೇಟಿ ನೀಡಿ ವಿಶೇಷವಾಗಿ ಅನುಗ್ರಹಿಸಿದ್ದರು ಎಂದು ಇಲ್ಲಿನ ಭಕ್ತರು ಗುರುಗಳ ಕೃಪಾಕಟಾಕ್ಷವನ್ನು ಸ್ಮರಿಸುತ್ತಾರೆ. ಇಲ್ಲಿನ ಬಿದ್ದಾಪುರ ಗುರುರಾಯರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಆಗಮಿಸಿದ್ದ ಶ್ರೀಗಳು ಆಗ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಇದಲ್ಲದೆ ನಾಲ್ಕಾರು ಬಾರಿ ಗುಲ್ಬರ್ಗಕ್ಕೆ ಬಂದು ಭಕ್ತರನ್ನು ಹರಿಸಿದ್ದು ಇದೆ. ವಿಶೇಷ ಉಪನ್ಯಾಸಗಳನ್ನು ನೀಡುತ್ತ, ಅನುಗ್ರಹ ಸಂದೇಶಗಳಿಂದ ಗುಲ್ಬರ್ಗ ಭಕ್ತಕೋಟಿಗೆ ಸುಯತೀಂದ್ರತೀರ್ಥರು ಹರಸಿದ್ದಿದೆ. ಗುಲ್ಬರ್ಗದಲ್ಲಂತೂ ಸುಯತೀಂದ್ರತೀರ್ಥರ ಭಕ್ತವೃಂದ ಶ್ರೀಗಳ ಹರಿಪಾದೈಕ್ಯದ ಪ್ರಸಂಗಕ್ಕೆ ದುಃಖಿತರಾಗಿದ್ದಾರೆ.

ಮಂತ್ರಾಲಯ ನವ ನಿರ್ಮಾಣಕಾರರು
ಹರಿಪಾದೈಕ್ಯರಾಗಿರುವ ಸುಯತೀಂದ್ರತೀರ್ಥರು ಮಂತ್ರಾಲಯ ನವ ನಿರ್ಮಾಣಕಾರರು ಎಂದೇ ಹೇಳಬೇಕು. ಪ್ರವಾಹ ಬಂದೆರಗಿದ್ದ ಸಂದರ್ಭದಲ್ಲಿ ಮಂತ್ರಾಲಯ ತುಂಬ ಸಂಕಷ್ಟಕ್ಕೆ ಸಿಲುಕಿತ್ತು. ಶ್ರೀಗಳು ಇದರಿಂದ ತುಂಬ ನೊಂದಿದ್ದರು. ಹಾಗೆ ಸುಮ್ಮನೆ ಕೂಡಲಿಲ್ಲ, ಮರುಗಳಿಗೆಯೇ ಹೆಗಲಿಗೆ ಜೋಳಿಗೆ ಹಾಕಿಕೊಂಡು ಮಂತ್ರಾಲಯ ನವ ನಿರ್ಮಾಣದ ಸಂಕಲ್ಪ ಮಾಡಿದರು. ಸುಯತೀಂದ್ರತೀರ್ಥರು ಇಂದು ಹರಿಪಾದ ಸೇರಿದ್ದು ಭಕ್ತರಿಗೆಲ್ಲರಿಗೂ ದುಃಖದ ಸಂಗತಿ. ಆದರೂ ವೃಂದಾವನದಲ್ಲಿದ್ದುಕೊಂಡೇ ತಮ್ಮ ಮಹಿಮೆಗಳಿಂದ ಭಕ್ತರನ್ನು ಹರಸಲಿದ್ದಾರೆ.
-ನವಲಿ ಕೃಷ್ಣಾಚಾರ್ಯರು, ವಿಚಾರಣಕರ್ತರು,
ಬಿದ್ದಾಪುರ ರಾಯರ ಮಠ, ಗುಲ್ಬರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement