ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೋರಾಟಕ್ಕೆ ಸಂದ ಜಯ ಕಾಲುವೆಗೆ ನೀರು ಹರಿಸಲು ಅಧಿಕಾರಿಗಳ ಒಪ್ಪಿಗೆ

Srinivasa Murthy VN
Updated On : 22 Mar 2014, 9:31 am

ಲಿಂಗಸ್ಗೂರು: ಅಮರಣಾಂತ ಉಪವಾಸ ಸತ್ಯಾಗ್ರಹದಿಂದ ನೀರಾವರಿ ಅಧಿಕಾರಿಗಳು ಮಾ.23ರವರೆಗೆ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ. ಇದು ರೈತರಿಗೆ ಸಂದ ಜಯವಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಹೇಳಿದರು.
ಕಳೆದ ಮಾ.19ರಿಂದ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಲಾಗಿತ್ತು. ಇದರಿಂದ ರೈತರ ಕೋಟ್ಯಾಂತರ ರೂ. ಬೆಳೆ ನಷ್ಟ ಸಂಭವಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮಾ.31 ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಅಲ್ಲದೆ ಶುಕ್ರವಾರದಿಂದ ಜಾವೂರ್ ಕ್ರಾಸ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು. ಸತ್ಯಾಗ್ರಹ ಸ್ಥಳಕ್ಕೆ ಕೃಷ್ಣಾ ಭಾಗ್ಯ ಜಲನಿಗಮದ ಸೂಪರಿಟೆಂಡೆಂಟ್ ಇಂಜಿನಿಯರ್ ಡಿ.ಆರ್.ಕೃಷ್ಣಮೂರ್ತಿ ಭೇಟಿ ನೀಡಿ ಮಾ.23 ರವರೆಗೆ ಪ್ರತಿನಿತ್ಯ 1500 ಕ್ಯುಸೆಕ್ ನೀರು ಹರಿಸುವುದಾಗಿ ಭರವಸೆ ನೀಡಿದರು ಹಾಗೂ ರೈತರ ಸಮ್ಮುಖದಲ್ಲಿ ಕಾಲುವೆಗಳಿಗೆ ನೀರು ಹರಿಸಿದರು.
ಆದರೆ ಮಾ.23 ರವರೆಗೆ ನೀರು ಹರಿಸಿರುವುದು ರೈತರಿಗೆ ಅಲ್ಪತೃಪ್ತಿಯಾಗಿದ್ದು, ಬೆಳೆ ರಕ್ಷಣೆಗೆ ಕನಿಷ್ಟ 2 ಸಾವಿರ ಕ್ಯುಸೆಕ್ ನೀರು ಅಗತ್ಯವಿದೆ. ದೇವದುರ್ಗ ತಾಲೂಕಿನ ಕೊನೆ ಭಾಗದ ರೈತರಿಗೆ ನೀರು ತಲುಪಬೇಕೆಂಬ ಒತ್ತಾಯಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಜಿಲ್ಲೆಯ ಭಾಗದ ರೈತರ ಬೆಳೆ ರಕ್ಷಣೆಗೆ ಹಾಗೂ ಜಮೀನುಗಳಿಗೆ ನೀರಿನ ಕೊರತೆಯಾದ ಕುರಿತು ರೈತರಿಂದ ದೂರು ಬಂದರೆ ಪುನಃ ಸತ್ಯಾಗ್ರಹ ಮುಂದುವರಿಸುವುದಾಗಿ ಅಮರಣ್ಣ ಗುಡಿಹಾಳ ಎಚ್ಚರಿಕೆ ನೀಡಿದ್ದಾರೆ. ಸತ್ಯಾಗ್ರಹದಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಸಿದ್ಧೇಶ ಗೌಡೂರು, ರೈತ ಮುಖಂಡರಾದ ಹನುಮನಗೌಡ ನಾರಾಯಣಪುರ, ಸಿದ್ಧಲಿಂಗೇಶ್ವರ ಪಾಟೀಲ್, ಬಸವರಾಜ ಫೂಲಬಾವಿ, ರಾಯನಗೌಡ ಯರಗೋಡಿ, ಚಿದಾನಂದ ಬಿ.ಗಣೇಕಲ್, ರಾಮನಗೌಡ ಗಣೇಕಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement