ಆಂಧ್ರ ಗಡಿಯಲ್ಲಿ 25 ಕಡೆ ತಪಾಸಣೆ
-ವಿಶೇಷ ವರದಿ
ಕ.ಪ್ರ. ವಾರ್ತೆ ರಾಯಚೂರು ಮಾ.22
ಆಂಧ್ರದ ರಾಯಲ್ ಸೀಮಾ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಏ.17 ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಪೊಲೀಸ್ ಭರದ ಸಿದ್ಧತೆ ನಡೆಸಿದೆ.
ಚುನಾವಣೆ ಹಿನ್ನೆಲೆ ಅಕ್ರಮಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರದಿಂದ ಜಿಲ್ಲೆಯೊಳಗೆ ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡಲು ತಪಾಸಣೆ ಕೇಂದ್ರಗಳ ಸ್ಥಾಪನೆಗೆ ಆಡಳಿತ ಮುಂದಾಗಿದೆ.
ರಾಯಚೂರು ಲೋಕಸಭೆ ಚುನಾವಣೆ (ಎಸ್ಟಿ ಮೀಸಲು) ಕ್ಷೇತ್ರದ ಆಂಧ್ರದ ಗಡಿಯಲ್ಲಿ ಇಂಥ ತಪಾಸಣೆ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಅಕ್ರಮಗಳಿಗೆ ಕಡಿವಾಣ ಹಾಕುವುದು ಹಾಗೂ ಸಮಾಜ ಘಾತುಕ ಶಕ್ತಿಗಳ ನಿಯಂತ್ರಣವೇ ಇದರ ಹಿಂದಿನ ಉದ್ದೇಶ ಎಂದು ಜಿಲ್ಲಾಡಳಿತ ಹೇಳಿದೆ.
ತಪಾಸಣೆ ಕೇಂದ್ರಗಳ ಸ್ಥಾಪನೆ: ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವ ರಾಯಚೂರು ತಾಲೂಕು ಸೇರಿದಂತೆ ವಿವಿಧೆಡೆ ಗಡಿಯಲ್ಲಿ ಒಟ್ಟು 25 ಕಡೆ ಪೊಲೀಸ್ ಇಲಾಖೆ ಮತ್ತು ಅಬಕಾರಿ ದಳದಿಂದ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆಂಧ್ರದಿಂದ ಕರ್ನಾಟಕದ ಗಡಿಯೊಳಕ್ಕೆ ಅಪರಾಧಿಕ ಹಿನ್ನೆಲೆಯುಳ್ಳವರ ನುಸುಳುವಿಕೆ ತಡೆಯುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.
ಹಾಗೆಯೇ ಈಗಾಗಲೇ ಕಳೆದ ಅನೇಕ ದಶಕಗಳಿಂದ ಸಿಎಚ್ ಪೌಡರ್ ಬಳಸಿ ಕಲಬೆರಕೆ ಸೇಂದಿ ತಯಾರಿಸಿ ಮಾರಾಟ ಮಾಡುವ ಜಾಲವೇ ವ್ಯವಸ್ಥಿತವಾಗಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೊಲೀಸರು ಅನೇಕ ಬಾರಿ ದಾಳಿ ಮಾಡಿ ಸೇಂದಿ ಮಾರಾಟಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರೂ ಸಿಎಚ್ ಪೌಡರ್ ಬಳಸಿ ತಯಾರಿಸಲಾಗುವ ಕಲಬೆರಕೆ ಸೇಂದಿ ಮಾರಾಟ ಮತ್ತು ಸಿಎಚ್ ಪೌಡರ್ ತಾಲೂಕಿನ ಗಡಿಯೊಳಗೆ ಸಾಗಣೆಗೆ ಸಂಪೂರ್ಣ ಬ್ರೇಕ್ ಬಿದ್ದಿಲ್ಲ.
ಅಬಕಾರಿ: ಅಬಕಾರಿ ಇಲಾಖೆ ಒಂದೆಡೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ದಾಸ್ತಾನಿನ ಮೇಲೆ ನಿಗಾಯಿರಿಸುತ್ತಿದ್ದರೂ ಮತ್ತೊಂದೆಡೆ ಸಾಗಣೆದಾರರು ಸಹ ಅಕ್ರಮವಾಗಿ ಹೊರರಾಜ್ಯದಿಂದ ಸಾಗಿಸುವ ಭೀತಿಯಿದ್ದೇ ಇದೆ. ಈ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ.
ನಗರದ ನವೋದಯ ಕಾಲೇಜು ಬಳಿ ಕಳೆದ ಅನೇಕ ವರ್ಷಗಳಿಂದ ತಪಾಸಣೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಹಾಗೆಯೇ ಯರಗೇರಾ ಗ್ರಾಮ, ದೇವಸೂಗೂರು ಬಳಿ ಸೇರಿದಂತೆ ಒಟ್ಟು 25 ಕಡೆ ಇಂಥ ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಶಾಂತಿಯುತ ಚುನಾವಣೆ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣ ಉದ್ದೇಶದಿಂದ ಸ್ಥಾಪಿಸಲಾಗಿದೆ ಎಂದಿದ್ದಾರೆ.
ಸಭೆಯ ಪ್ರಭಾವ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈಚೆಗೆ ಕರ್ನಾಟಕ ಮತ್ತು ಆಂಧ್ರದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಚುನಾವಣೆಯ ಸುಸೂತ್ರ ನಿರ್ವಹಣೆಗೆ ಗಡಿಯಲ್ಲಿ ಚೆಕ್ಪೋಸ್ಟ್ ಸ್ಥಾಪಿಸಲು ನಿರ್ಧರಿಸಲಾಗಿತ್ತು.
ಅಂತೆಯೇ ಸದ್ಯ ಚೆಕ್ಪೋಸ್ಟ್ಗಳನ್ನು ಆರಂಭಿಸಿದ್ದು, ಅಕ್ರಮ ಸೇಂದಿ, ಮತದಾರರಿಗೆ ಅಕ್ರಮವಾಗಿ ಹಣ ಸಾಗಣೆಗೆ ತಡೆಯೊಡ್ಡಲು ಪೊಲೀಸ್ ಇಲಾಖೆ ಬಿಗಿ ಕ್ರಮಕ್ಕೆ ಮುಂದಾಗಿದೆ. ಗಡಿಯಲ್ಲಿ ಸಂಚರಿಸುವ ಎಲ್ಲ ವಾಹನಗಳ ಮೇಲೆ ನಿಗಾಯಿರಿಸಿ ವಾಹನಗಳ ತಪಾಸಣೆ ಮಾಡಲಾಗುತ್ತದೆ. ಗಡಿಯಾಚೆಗೆ ತೆರಳುವವರ ಗುರುತಿನ ಚೀಟಿ ತಪಾಸಣೆಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.