ಕುತೂಹಲ ಮೂಡಿಸಿದ ಹೆಲಿಕಾಪ್ಟರ್ ಸದ್ದು
ರಾಯಚೂರು: ಚುನಾವಣೆಯಲ್ಲಿ ಅಕ್ರಮ ಹಣ, ಹೆಂಡ ಹಂಚುವುದು ಅಚ್ಚರಿಯ ವಿಷಯವಲ್ಲ. ಆದರೆ ಅದರ ಸಾಗಣೆಗೆ ಅನೇಕ ಮಾರ್ಗ ಅನುಸರಿಸುವುದು ಸಾಮಾನ್ಯ ಸಂಗತಿ. ನಗರದಲ್ಲಿಯೂ ಶನಿವಾರ ಹೀಗೆ ಆಯಿತು. ಚುನಾವಣೆ ಗುಂಗಿನಲ್ಲಿದ್ದವರಿಗೆ ನಗರದ ಬಾನಂಗಳದಲ್ಲಿ ಬೆಳ್ಳಂಬೆಳಗ್ಗೆ ಹೆಲಿಕಾಪ್ಟರೊಂದು ಹಾರಾಟ ನಡೆಸಿ ಎಲ್ಲರಲ್ಲಿ ಗೊಂದಲ ಮೂಡಿಸಿತು. ಬಳ್ಳಾರಿ ಗಣಿ ಧಣಿಗಳ ಬೆಂಬಲಿಗ ಹಾಲಿ ಸಂಸದ ಸಣ್ಣ ಫಕೀರಪ್ಪ ಅವರು ಆಗಾಗ್ಗೆ ಶ್ರೀರಾಮುಲು ಜತೆ ಹೆಲಿಕಾಪ್ಟರ್ನಲ್ಲಿ ಹಾರಾಟ ನಡೆಸಿದ್ದು ಜಿಲ್ಲೆಯ ಜನತೆ ಕಂಡಿದ್ದರು. ಹಾಗೆಯೇ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ರಾಜ್ಯದ ಸಿಎಂ ಭೇಟಿ ಸಂದರ್ಭ ಹೆಲಿಕಾಪ್ಟರ್ ಹಾರಾಟ ನಗರದಲ್ಲಿ ಕಾಣಸಿಗುತ್ತದೆ.
ನಿಗೂಢ: ಆದರೆ ಶನಿವಾರ ಬೆಳಗ್ಗೆ 8.45ರ ಸುಮಾರಿಗೆ ಆಗಸದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿತು. ಅದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಕೆಲವರು ಚುನಾವಣೆಯಿದೆ. ಯಾರೋ ರಾಜಕೀಯ ಪಕ್ಷದವರು ಬಂದಿರಬೇಕು ಎಂದುಕೊಂಡು ಸುಮ್ಮನಾದರು. ಮತ್ತೆ ಕೆಲವರು ಇನ್ನೂ ನಾಮಪತ್ರ ಸಲ್ಲಿಕೆಯೇ ಆಗಿಲ್ಲ. ಯಾರು ಬಂದಿರಬಹುದು ಎಂದು ತಲೆಕೆಡಿಸಿಕೊಂಡರು. ಆದರೆ ಯಾರಿಗೂ ಹೆಲಿಕಾಪ್ಟರ್ನಲ್ಲಿ ಬಂದಿದ್ದು ಯಾರೆಂದು ಮಾತ್ರ ತಿಳಿಯಲಿಲ್ಲ. ಕೊನೆಗೆ ಪತ್ರಕರ್ತರೂ ಕುತೂಹಲ ತಡೆಯದೇ ಜಿಲ್ಲಾಡಳಿತದ ಬಳಿ ವಿಚಾರಿಸಿದಾಗ ಹೆಲಿಕಾಪ್ಟರ್ನಲ್ಲಿ ಚೆನ್ನೈ ಮೂಲದ ಉದ್ಯಮಿ ವಿಜಯಶಂಕರ್ ಎಂಬುವವರು ಬಂದಿದ್ದಾರೆಂದು ಗೊತ್ತಾಯಿತು. ಬೆಳಗ್ಗೆ 8.50ರ ಸುಮಾರಿಗೆ ಬಂದಿಳಿದ ಹೆಲಿಕಾಪ್ಟರ್ ಮರಳಿದಾಗ ಮಧ್ಯಾಹ್ನದ 3.25. ಆದರೆ ಚುನಾವಣೆ ಸಂದರ್ಭದಲ್ಲಿ ಹೆಲಿಕಾಪ್ಟರ್ ಅದು ಉದ್ಯಮಿಗೆ ಸೇರಿದ್ದು ಬಂದು ಹೋಗಿದ್ದರಿಂದ ಮತದಾರರಿಗೆ ಹಣ ನೀಡಲು ಬಂದಿತ್ತಂತೆ, ರಾಜಕೀಯ ಪಕ್ಷದ ಅಭ್ಯರ್ಥಿಗೆ ಏನೋ ನೀಡಲು ಬಂದಿದೆಯಂತೆ ಎಂಬ ಅಂತೆ-ಕಂತೆಗಳ ಕಥೆ ಹುಟ್ಟಿಕೊಂಡಿದ್ದಂತೂ ಸತ್ಯ.
ಒಂದು ನಾಮಪತ್ರ ಸಲ್ಲಿಕೆ
ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಏ.17 ರಂದು ನಡೆಯಲಿರುವ ಚುನಾವಣೆಗೆ ಶನಿವಾರ ಪಕ್ಷೇತರ ಅಭ್ಯರ್ಥಿಯಾಗಿ ಜಿಲ್ಲಾ ಹತ್ತಿ ಬೆಳೆಗಾರರ ಹೋರಾಟ ಸಮಿತಿಯ ಅಧ್ಯಕ್ಷ ಚಿನ್ನಯ್ಯ ನಾಯಕ ತಮ್ಮ ನಾಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ರೈತರೊಂದಿಗೆ ಆಗಮಿಸಿದ ಚಿನ್ನಯ್ಯ ನಾಯಕ ತಮ್ಮ ನಾಮಪತ್ರ ಸಲ್ಲಿಸಿದರು. ಪ್ರಸಕ್ತ ಚುನಾವಣೆಗೆ ಮಾ.19 ರಿಂದ ಆರಂಭಗೊಂಡಿರುವ ನಾಮಪತ್ರ ಸಲ್ಲಿಕೆಯಲ್ಲಿ ಇದುವರೆಗೆ ಒಟ್ಟು ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.
ಜಾಗೃತ ಮತದಾರರೆಂದು ತೋರಿಸಿ: ಎಸಿ ಯೋಗೇಶ್
ಲಿಂಗಸ್ಗೂರು: ಬರುವ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಎಲ್ಲರೂ ತಪ್ಪದೆ ಮತದಾನ ಮಾಡುವ ಮೂಲಕ ಜಾಗೃತ ಮತದಾರರೆಂದು ತೋರಿಸಿ ಎಂದು ಸಹಾಯಕ ಚುನಾವಣಾಧಿಕಾರಿ, ಎಸಿ ಟಿ. ಯೋಗೇಶ್ ಕರೆ ನೀಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಿರಂತರ ಉಳಿತಾಯ ಗುಂಪುಗಳ ಮಹಿಳಾ ಸದಸ್ಯರುಗಳಿಗೆ ಮತದಾನ ಜಾಗೃತಿ ಶಿಬಿರದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಏಪ್ರಿಲ್ 17ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆವರೆಗೆ ಜರುಗಲಿದ್ದು, ಮತದಾನದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಯಾವುದೇ ಆಮಿಷಕ್ಕೆ ಒಳಗಾಗದೆ ಉತ್ತಮ ಅಭ್ಯರ್ಥಿಯನ್ನು ಗುರ್ತಿಸಿ ಮತ ಹಾಕಿ. ತಾವು ಮತ ಚಲಾಯಿಸುವ ಮೂಲಕ ಕುಟುಂಬದ ಎಲ್ಲ ಮತದಾರರು ಮತ ಹಾಕುವಂತೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇದೆ ವೇಳೆ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ್ ಮತದಾನ ಜಾಗೃತಿ ಹಾಗೂ ಮಹತ್ವ ಕುರಿತು ನೆರೆದಿದ್ದ ಮಹಿಳೆಯರಿಗೆ ವಿಡಿಯೋ ಚಿತ್ರ ಪ್ರದರ್ಶನ ನೀಡಿದರು. ನಂತರ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಹಾಜರಿದ್ದರು.
ಜಾಗೃತಿ ಕಾರ್ಯಕ್ರಮ
ರಾಯಚೂರು: ನಗರದ ನೆಹರು ಯುವ ಕೇಂದ್ರ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮತ್ತಿತರೆ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ರಾಷ್ಟ್ರೀಯ ಸದ್ಭಾವನಾ ಶಿಬಿರ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮ ಮಾ.22ರಿಂದ ಆರಂಭಗೊಂಡಿದ್ದು, ಮಾ.26ರವರೆಗೆ ನಡೆಯಲಿದೆ. ಈ ಕುರಿತು ಯುವ ಕೇಂದ್ರವು ಪ್ರಕಟಣೆ ನೀಡಿದ್ದು, ತಾಲೂಕಿನ ದೇವಸುಗೂರಿನ ಸೂಗೂರೇಶ್ವರ ದೇವಸ್ಥಾನದ ಆವರಣದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ನೆಹರು ಯುವ ಕೇಂದ್ರದ ಪ್ರಾಂತೀಯ ನಿರ್ದೇಶಕ ಆರ್. ನಟರಾಜನ್, ದೇವಸ್ಥಾನ ಕಮಿಟಿ ಅಧಿಕಾರಿ ಎ. ರಾಜು, ನೆಹರು ಯುವ ಕೇಂದ್ರದ ಸಂಯೋಜಕಿ ಮಾಲತಿ ಗಾಯಕವಾಡ ಮತ್ತಿತರರು ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.