ಧರ್ಮಗುರುಗಳ ಮೊರೆ
-ವಿಶೇಷ ವರದಿ
ಕ.ಪ್ರ. ವಾರ್ತೆ ರಾಯಚೂರು ಮಾ.23
ಲೋಕಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕಡೆಯ ದಿನ ಸಮೀಪಿಸುತ್ತಿದ್ದಂತೆಯೇ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಕಾವೇರತೊಡಗಿದ್ದು, ಜಾತಿ ಮತಗಳನ್ನು ಸೆಳೆಯಲು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮುಂದು ತಾಮುಂದು ಎಂಬಂತೆ ಮಠಮಾನ್ಯಗಳಿಗೆ ಭೇಟಿ ನೀಡುವ ಕಾರ್ಯ ಆರಂಭಿಸಿದ್ದಾರೆ.
ರಾಯಚೂರು ಲೋಕಸಭೆ ಕ್ಷೇತ್ರ(ಎಸ್ಟಿ ಮೀಸಲು) ವ್ಯಾಪ್ತಿಯಲ್ಲಿ ಕಂಡುಬರುತ್ತಿರುವ ಚಿತ್ರಣವಿದು.
ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಆಯಾ ವಾರದಂದು ನಡೆಯುವ ವಿಶೇಷ ಉತ್ಸವಗಳ ಮೇಲೆಯೇ ಈಗ ಅಭ್ಯರ್ಥಿಗಳು ದೃಷ್ಟಿ ನೆಟ್ಟಿದ್ದಾರೆ. ಪ್ರಚಾರಕ್ಕೆ ಸಿಗುವ ಯಾವುದೇ ಅವಕಾಶ ಕೈಚೆಲ್ಲಲು ಅಭ್ಯರ್ಥಿಗಳು ಸಿದ್ಧರಿಲ್ಲ. ಹಾಗಾಗಿ ಜಾತಿವಾರು ಲೆಕ್ಕಾ ಚಾರದಂತೆಯೇ ಪ್ರಚಾರಕ್ಕೆ ಮುಂದಾಗುತ್ತಿರುವುದು ಕಂಡುಬಂದಿದೆ.
ಮಠಾಧೀಶರ ಅನುಗ್ರಹ: ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದ್ದು, ಮೊದಲ ಹಂತದಲ್ಲಿಯೇ ಈ ಇಬ್ಬರೂ ನಾಯಕರು ಪೈಪೋಟಿಯಲ್ಲಿ ರಾಯಚೂರು ಜಿಲ್ಲೆ ವ್ಯಾಪ್ತಿಯ ವಿವಿಧ ಮಠಗಳಿಗೆ ತೆರಳಿ ಮಠಾಧೀಶರ ಅನುಗ್ರಹ ಪಡೆದಿದ್ದಾರೆ. ಹಾಗೆಯೇ ನಾಮಪತ್ರ ಸಲ್ಲಿಕೆಯ ದಿನಾಂಕದಂದು ಮತ್ತಷ್ಟು ದೇವಸ್ಥಾನಗಳು, ಮಠಾಧೀಶರ ಭೇಟಿ ಈಗಾಗಲೇ ನಿಗದಿಯಾಗಿದೆ.
ಜಿಲ್ಲೆಯಲ್ಲಿ ಹೆಸರಾಂತ ಹಾಗೂ ಐತಿಹಾಸಿಕ ಪ್ರಸಿದ್ಧ ಗಬ್ಬೂರಿನ ಬೂದಿಬಸವೇಶ್ವರ ಮಠಕ್ಕೆ ಕಾಂಗ್ರೆಸ್ನ ಬಿ.ವಿ.ನಾಯಕ ಹಾಗೂ ಬಿಜೆಪಿಯ ಅಭ್ಯರ್ಥಿ ಶಿವನಗೌಡ ನಾಯಕ ಅವರಿಬ್ಬರೂ ಈಗಾಗಲೇ ಭೇಟಿ ನೀಡಿ ಸ್ವಾಮೀಜಿ ದರ್ಶನಾಶೀರ್ವಾದ ಪಡೆದಿದ್ದಾರೆ.
ಅದೇ ರೀತಿ ರಾಯಚೂರು ತಾಲೂಕಿನ ಮಾಟಮಾರಿ, ದೇವದುರ್ಗ ತಾಲೂಕಿನ ವಿವಿಧೆಡೆಯ ದೇವಸ್ಥಾನ, ಮಠಗಳಿಗೆ ಅಭ್ಯರ್ಥಿಗಳು ಭೇಟಿ ನೀಡಿದ್ದು, ಆಯಾ ಧರ್ಮ, ಜಾತಿ ಮಠಗಳ ಬೆಂಬಲ ಕೋರುವ ಮೂಲಕ ಮತ ಗಳಿಕೆ ತಂತ್ರ ಅನುಸರಿಸಿದ್ದಾರೆ.
ವಾರದ ಪ್ರಭಾವ: ಸಾಮಾನ್ಯವಾಗಿ ಭಕ್ತರು ಶನಿವಾರ ಗ್ರಾಮದ ಆಂಜನೇಯ ದೇವಸ್ಥಾನ, ಗುರುವಾರ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡುತ್ತಾರೆ. ಹಾಗೆಯೇ ಭಾನುವಾರ ಕ್ರೈಸ್ತ ಧರ್ಮದವರು ಚರ್ಚ್ಗಳಿಗೆ ಭೇಟಿ ನೀಡುತ್ತಾರೆ. ಇಂಥ ದಿನಗಳನ್ನು ಗುರಿಯಾಗಿಸಿಕೊಂಡು ಪ್ರಚಾರದ ಸಮಯ ದಿನಾಂಕ ನಿಗದಿ ಮಾಡುತ್ತಿರುವುದು ಈಗ ಹೊಸ ಪ್ರಚಾರದ ತಂತ್ರವಾಗಿದೆ.
ಮತಯಾಚನೆ: ನಗರದಲ್ಲಿ ಭಾನುವಾರ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಅವರು ಚರ್ಚ್ಗೆ ಭೇಟಿ ನೀಡಿ ಕ್ರೈಸ್ತ ಧರ್ಮ ಗುರುಗಳ ಬಳಿ ಆಶೀರ್ವಾದ ಪಡೆದು ಮತ ಯಾಚಿಸಿದರು. ಅದೇ ವೇಳೆ ಪ್ರಾರ್ಥನೆಗೆ ಸೇರಿದ್ದ ಮತದಾರರಿಗೆ ತಮ್ಮನ್ನು ಬೆಂಬಲಿಸುವಂತೆ ಕೋರಿದರು.
ಜಾತಿವಾರು ಮತಗಳ ಲೆಕ್ಕಾಚಾರದಲ್ಲಿಯೇ ಕಾಲಕಳೆಯುವ ರಾಜಕೀಯ ನಾಯಕರು ಚುನಾವಣೆ ಹಿನ್ನೆಲೆಯಲ್ಲಿ ಸದ್ಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ಜಾತಿ ಮತಗಳ ಮಠಾಧೀಶರು, ದೇವಾಲಯಗಳಿಗೆ ನಿರಂತರ ಭೇಟಿ ನೀಡುವುದನ್ನೇ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿರುವುದು ಸ್ಪಷ್ಟ.