ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಫೇಸ್, ವಾಟ್ಸ್ ಪ್ರಚಾರಕ್ಕಿಲ್ಲ ಬ್ರೇಕ್

Srinivasa Murthy VN
Updated On : 24 Mar 2014, 11:33 am

ಲೋಕಸಭೆ ಚುನಾವಣೆಯ ಈ ಸಂದರ್ಭದಲ್ಲಿ ಅಂತರ್ಜಾಲ ತಾಣಗಳು ಇಂದು ಕೇವಲ ಸ್ನೇಹಿತರ ಗಳಿಕೆಗಷ್ಟೇ ಸೀಮಿತವಾಗಿಲ್ಲ. ಬದಲಿಗೆ ರಾಜಕೀಯ ಪ್ರಚಾರಕ್ಕೂ ಭರ್ಜರಿ ಬಳಕೆಗೆ ದಾರಿ ಮಾಡಿವೆ. ಟ್ವೀಟರ್‌ನಲ್ಲಿ ಟ್ವೀಟ್ ಮಾಡುವುದು, ವಾಟ್ಸ್ ಆಪ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಪ್ರಚಾರ ಮಾಡುವ ಮೂಲಕ ಸಾಕಷ್ಟು ಜನತೆಗೆ ತಲುಪಬಹುದು. ಜತೆಗೆ ಚುನಾವಣೆ ಆಯೋಗದ ಆತಂಕವೂ ಇಲ್ಲ ಎಂಬುದು ಲೋಕಸಭೆ ಕ್ಷೇತ್ರದ ಮಟ್ಟಿಗೆ ಈಗ ಸಾಬೀತಾಗಿದೆ.
ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹೆಸರು ಈಚೆಗಷ್ಟೇ ಅಂತಿಮಗೊಂಡಿದ್ದು ಅವರಿನ್ನೂ ಪ್ರಚಾರಕ್ಕಿಳಿದಿಲ್ಲ. ಹಾಗಾಗಿ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳದ್ದೇ ಪ್ರಚಾರದ ಸದ್ದು ಗದ್ದಲ.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ನೀತಿ ಸಂಹಿತೆ, ಅಭ್ಯರ್ಥಿಗಳ ಖರ್ಚು- ವೆಚ್ಚದ ಮೇಲೆ ನಿಗಾಯಿರಿಸಿದೆ. ಹಣ, ಮದ್ಯ ಹಂಚುವುದು ಕಷ್ಟದ ಕೆಲಸ. ಆದರೆ ಮೊಬೈಲ್ ಇಂದು ಬಹುತೇಕ ಎಲ್ಲರ ಮನೆಗಳಲ್ಲಿದೆ. ಹೆಚ್ಚಿನ ಮತದಾರರು ಅಂತರ್ಜಾಲ ಸಂಪರ್ಕ ಹೊಂದಿ ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿದ್ದಾರೆ. ವಾಟ್ಸ್ ಆಪ್ ಕೂಡಾ ಜನತೆಗೆ ಹೊಸತೇನಲ್ಲ.
ಗೌಪ್ಯವೇನಲ್ಲ: ಚುನಾವಣೆಯ ಈ ಸಂದರ್ಭದಲ್ಲಿ ಅಭ್ಯರ್ಥಿಗಳ ವೆಚ್ಚದ ಮೇಲೆ ಆಯೋಗವು ನಿಗಾಯಿರಿಸುತ್ತಿದೆ. 70 ಲಕ್ಷ ದಾಟುವಂತಿಲ್ಲ ಎಂಬ ಮಿತಿ ಹೇರಿದ್ದರೂ ಅಭ್ಯರ್ಥಿಗಳು ಆಯೋಗಕ್ಕೆ ಒಪ್ಪಿಸುವುದು ಅಷ್ಟೇ ಮೊತ್ತದ ದಾಖಲೆಗಳು. ಆದರೆ ವ್ಯಯಿಸುವುದು ಕೋಟಿ ಕೋಟಿ ಎಂಬುದು ಗೌಪ್ಯವಾಗಿ ಉಳಿದಿಲ್ಲ.
ಈಗ ಫೇಸ್‌ಬುಕ್, ವಾಟ್ಸ್ ಆಪ್‌ಗಳ ಬಳಕೆ ವಿಚಾರದಲ್ಲಿಯೂ ಹಾಗೆಯೇ ಆಗುತ್ತಿದೆ. ದಿನವೂ ವಾಟ್ಸ್ ಆಪ್ ಮತ್ತು ಫೇಸ್‌ಬುಕ್‌ನಲ್ಲಿ ಅಭ್ಯರ್ಥಿಯ ಪ್ರಚಾರ ಕಾರ್ಯಕ್ರಮದ ವಿವರ, ಭೇಟಿ ನೀಡಿದ ಸ್ಥಳಗಳ ಭಾವಚಿತ್ರ ಹಾಗೂ ಪ್ರಚಾರ ಸಾಮಗ್ರಿ ಅಪ್‌ಲೋಡ್ ಮಾಡಲಾಗುತ್ತಿದೆ.
ವೆಚ್ಚ ದಾಖಲು: ಚುನಾವಣೆ ಆಯೋಗವು ಇಂಥ ಅಂತರ್ಜಾಲ ತಾಣಗಳ ಮೇಲೆ ಕಣ್ಣಿಡಲು ಜಿಲ್ಲಾ ಚುನಾವಣೆ ವಿಭಾಗಕ್ಕೆ ಸೂಚನೆ ನೀಡಿದೆ. ಇದರ ಖರ್ಚು ವೆಚ್ಚವನ್ನೂ ಅಭ್ಯರ್ಥಿ ಹೆಸರಿಗೆ ಸೇರಿಸಬೇಕೆಂಬುದು ಆದೇಶ. ಆದರೆ ಅಂಥ ಯಾವುದೇ ಆದೇಶದ ಪಾಲನೆ ಜಿಲ್ಲೆಯಲ್ಲಿ ಮಾತ್ರ ಕಂಡುಬರುತ್ತಿಲ್ಲ.
ಅಭಿಮಾನಿಗಳು: ಒಂದೆಡೆ ಫೇಸ್‌ಬುಕ್ ಮತ್ತು ವಾಟ್ಸ್ ಆಪ್‌ನಲ್ಲಿ ಅಭ್ಯರ್ಥಿಗಳ ಪ್ರಚಾರದ ಫೋಟೋಗಳು ಹರಿದಾಡುತ್ತಿದ್ದರೆ ಮತ್ತೊಂದೆಡೆ ರಾಜಕೀಯ ವಲಯದಲ್ಲಿ ಅದೆಲ್ಲ ಅಭಿಮಾನಿಗಳ ಕಾರ್ಯ. ಅಭ್ಯರ್ಥಿಗಳಿಗೆ ಹಾಗೆ ಮಾಡಲು ಸಮಯವೆಲ್ಲಿ ಎಂಬ ಮಾತು ಹರಿಬಿಡುವ ಮೂಲಕ ವೆಚ್ಚದ ಹೊರೆ ತಪ್ಪಿಸಿಕೊಳ್ಳಲು ಪ್ರಯತ್ನಗಳು ನಡೆದಿವೆ.
ಅಸಹಾಯಕ ಜಿಲ್ಲಾಡಳಿತ: ಅಂತರ್ಜಾಲದ ವೆಚ್ಚ ಪತ್ತೆ ಹಚ್ಚುವುದು ಹೇಗೆ ಎಂಬ ಗೊಂದಲದಲ್ಲಿ ಜಿಲ್ಲಾಡಳಿತವಿದೆ. ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಲು ತಗಲುವ ವೆಚ್ಚವೆಷ್ಟು ಅದನ್ನು ಅಪ್‌ಲೋಡ್ ಮಾಡಿದವರು ಅಭ್ಯರ್ಥಿಯೇ ಅಥವಾ ಬೇರೆಯವರೇ ಎಂಬ ಅಂಶಗಳ ಪತ್ತೆ ಮಾಡುವಷ್ಟು ತಾಂತ್ರಿಕ ಕೌಶಲ್ಯತೆ ಪಡೆದಿರುವ ಸಿಬ್ಬಂದಿ ಜಿಲ್ಲಾಡಳಿತದಲ್ಲಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಚುನಾವಣೆ ಆಯೋಗವು ತಂತ್ರಜ್ಞರನ್ನು ಒದಗಿಸದೇ ವೆಚ್ಚದ ಮಾಹಿತಿ ಲೆಕ್ಕ ಹಾಕಲು ಮುಂದಾಗಿರುವುದು ಜಿಲ್ಲಾಡಳಿತಗಳಿಗೆ ತಲೆ ನೋವು ತಂದಿದೆ. ತಂತ್ರಜ್ಞರ ಕೊರತೆಯಿಂದಾಗಿ ಆಯೋಗದ ಸೂಚನೆ ಪಾಲನೆ ಕಷ್ಟವೇ ಸರಿ. ಇದರಿಂದಾಗಿ ಅಂತರ್ಜಾಲದ ಮೂಲಕ ಪ್ರಚಾರಕ್ಕೆ ಧಾರಾಳ ಅವಕಾಶ ಮಾಡಿದೆ. ಯುವ ಮತದಾರರ ಗಮನ ಸೆಳೆಯಲು ಫೇಸ್‌ಬುಕ್ ಮತ್ತು ವಾಟ್ಸ್ ಆಪ್ ಹೆಚ್ಚು ಬಳಕೆಯಾಗುತ್ತಿರುವುದು ವಿಶೇಷ.

ಫೇಸ್‌ಬುಕ್ ಮತ್ತಿತರೆ ಮೂಲಗಳನ್ನು ಬಳಸಿ ಪ್ರಚಾರ ಮಾಡುವ ಬಗ್ಗೆ ಜಿಲ್ಲಾಡಳಿತದ ಗಮನದಲ್ಲಿದೆ. ಆದರೆ ಅದರ ಖರ್ಚು- ವೆಚ್ಚ ಪತ್ತೆ ಮಾಡಲು ತಂತ್ರಜ್ಞರು ಬೇಕು. ಅಂಥವರ ಕೊರತೆಯಿದೆ. ಆದರೂ ನಿಗಾಯಿರಿಸಲಾಗುತ್ತಿದೆ.
-ಎಸ್.ಎನ್. ನಾಗರಾಜು, ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement