ಬಿಜೆಪಿ ಅಭ್ಯರ್ಥಿ ಭ್ರಷ್ಟಾಚಾರ, ಅಧಿಕಾರ ದರ್ಪಕ್ಕೆ ಮತದಾರರಿಂದಲೇ ಉತ್ತರ
ಕ.ಪ್ರ. ವಾರ್ತೆ ರಾಯಚೂರು ಮಾ.23
ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯ ಹಿನ್ನೆಲೆ ಮಾ.25 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಅವರು, ಬಿಜೆಪಿ ಅಭ್ಯರ್ಥಿಯು ಸಚಿವರಾಗಿದ್ದ ವೇಳೆ ನಡೆಸಿದ ಭ್ರಷ್ಟಾಚಾರ ಮತ್ತು ದುರ್ವರ್ತನೆಯನ್ನು ಮತದಾರರು ಕಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆಂದು ಹೇಳಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಚುನಾವಣೆಗೆ ತಾವು ಮಾ.25 ರಂದು ಜಿಲ್ಲಾಧಿಕಾರಿ ಕಚೇರಿಗೆ ಅಪಾರ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.
ಸೋಲಿನ ರುಚಿ: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಶಿವನಗೌಡ ನಾಯಕ ಆನಂತರದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಲೋಕಸಭೆ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸಚಿವರಾಗಿದ್ದ ವೇಳೆ ಅವರು ನಡೆಸಿದ ಭ್ರಷ್ಟಾಚಾರ ಮತ್ತು ಅಧಿಕಾರದ ದರ್ಪದಿಂದ ಮತದಾರರು ಬೇಸತ್ತಿದ್ದಾರೆ. ಮತ್ತೆ ಅವರಿಗೆ ಸೋಲಿನ ರುಚಿ ತೋರಿಸಲಿದ್ದಾರೆಂದರು.
ಕೇಂದ್ರ ಯುಪಿಎ ಸರ್ಕಾರ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮತದಾರರು ಮೆಚ್ಚಿಕೊಂಡಿದ್ದು, ತಮ್ಮನ್ನು ಬೆಂಬಲಿಸಲಿದ್ದಾರೆ. ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಮೋದಿ ಅಲೆಯೆಂಬುದೇ ಇಲ್ಲ. ಅದು ಕೇವಲ ಬಿಜೆಪಿಯವರು ಸೃಷ್ಟಿಸಿದ ಕಟ್ಟುಕಥೆ ಎಂದರು.
ಅಭಿವೃದ್ಧಿ ಕಂಡಿಲ್ಲ: ಸಚಿವರಾಗಿದ್ದ ವೇಳೆ ಶಿವನಗೌಡ ನಾಯಕ ಅವರು ದೇವದುರ್ಗ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿಯ ಹೆಸರಿನಲ್ಲಿ ಕೋಟಿ ಕೋಟಿ ಅನುದಾನ ತಂದಿರುವುದಾಗಿ ಹೇಳಿದ್ದು, ಅಭಿವೃದ್ಧಿ ಮಾತ್ರ ಎಲ್ಲಿಯೂ ಕಾಣುತ್ತಿಲ್ಲ. ಅನುದಾನದ ದುರ್ಬಳಕೆಯಾಗಿರುವುದು ಶೀಘ್ರವೇ ಲೋಕಾಯುಕ್ತರು ನಡೆಸಿರುವ ತನಿಖೆಯಿಂದ ಬಯಲಾಗಲಿದೆ ಎಂದು ಹೇಳಿದರು.
ತಂದೆಯ ಆಸರೆ: ತಮ್ಮ ತಂದೆ ವೆಂಕಟೇಶ ನಾಯಕ ಅವರು ರಾಯಚೂರು ಲೋಕಸಭೆ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ. ಆ ವೇಳೆ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ತಾವೂ ಸಹ ಕ್ಷೇತ್ರದ ಮತದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ತಮ್ಮ ಗೆಲವಿಗೆ ನೆರವಾಗಲಿದೆ ಎಂದು ಹೇಳಿದರು.
ಕೇಂದ್ರದ ಯುಪಿಎ ಸರ್ಕಾರ ನಾರಾಯಣಪುರ ಬಲದಂಡೆ ಕಾಲುವೆಯ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಒದಗಿಸಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದರು.
ಪ್ರಚಾರ ಕಾರ್ಯ ವಿಳಂಬ: ತಾವು ಪಕ್ಷದ ಸರ್ವಸಮ್ಮತ ಅಭ್ಯರ್ಥಿಯಾಗಿರುವುದಾಗಿ ಪುನರುಚ್ಚರಿಸಿದ ಅವರು, ತಮ್ಮ ಹೆಸರು ಅಂತಿಮಗೊಳ್ಳಲು ತಡವಾಗಿದ್ದರಿಂದ ಪ್ರಚಾರ ಕಾರ್ಯ ವಿಳಂಬವಾಗಿದೆ. ಆದರೆ ಪಕ್ಷವು ಚುನಾವಣೆಗೆ ಸಾಕಷ್ಟು ಮುಂಚಿತವಾಗಿಯೇ ಸಜ್ಜಾಗಿದೆ. ಕಾರ್ಯಕರ್ತರು ಶ್ರಮವಹಿಸಿ ದುಡಿಯಲು ಸಿದ್ಧರಾಗಿದ್ದಾರೆಂದು ಹೇಳಿದರು.
ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ಪಕ್ಷವು ಕ್ಷೇತ್ರದಲ್ಲಿ ನಿಶ್ಚಿತವಾಗಿಯೂ ಗೆಲವು ಕಾಣಲಿದೆ. ಮತದಾರರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಬಸವರಾಜರೆಡ್ಡಿ, ಕೆ. ಶಾಂತಪ್ಪ, ಶಿವಮೂರ್ತಿ, ಅಮರೇಗೌಡ ಹಂಚಿನಾಳ ಸೇರಿದಂತೆ ಅನೇಕರಿದ್ದರು.