ಬಿಜೆಪಿಗೆ ಅಭಿವೃದ್ಧಿ ಕಾಳಜಿಯ ಕೊರತೆ
ರಾಯಚೂರು: ಕಳೆದ ಅವಧಿಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತು, ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಬಿಜೆಪಿಗೆ ದೇಶ ಮತ್ತು ರಾಜ್ಯದ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ ಎಂದು ಮಾಜಿ ಶಾಸಕ ಬೋಸರಾಜು ಟೀಕಿಸಿದರು.
ಅವರು ಮಾನವಿಯಲ್ಲಿ ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪ್ರಚಾರ ಮತ್ತು ಕಾರ್ಯಕರ್ತರ ಸಭೆ ಉದ್ದೇಶಿಸಿ, ಬಿಜೆಪಿಯಲ್ಲಿ ಭ್ರಷ್ಟಾಚಾರಿಗಳೇ ತುಂಬಿದ್ದಾರೆಂದು ಆರೋಪಿಸಿದರು.
ಕಾಂಗ್ರೆಸ್ ಕೊಡುಗೆ: ರಾಜ್ಯದ ಮತದಾರರಿಗೆ ಕಳೆದ ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಯಾವ ರೀತಿಯ ಆಡಳಿತ ನೀಡಿದೆ ಎಂಬುದರ ಬಗ್ಗೆ ಅರಿವಿದೆ. ಹಾಗೆಯೇ ಕಳೆದ 9 ತಿಂಗಳಿನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವ ರೀತಿ ಕೊಡುಗೆ ನೀಡಿದೆ ಎಂಬುದು ಗೊತ್ತಿದೆ ಎಂದರು. ಕೇಂದ್ರದ ಯುಪಿಎ ಸರ್ಕಾರ ಹೈ.ಕ. ಭಾಗದ ಜನತೆಗೆ 371ನೇಕಲಂ (ಜೆ) ಜಾರಿಗೆ ತಂದು ಎಲ್ಲ ರೀತಿಯಿಂದ ಅಭಿವೃದ್ಧಿಗೆ ಪೂರಕ ಕ್ರಮ ಕೈಗೊಂಡಿದೆ. ಕಾಂಗ್ರೆಸ್ನಲ್ಲಿ ಅವಕಾಶವಾದಿ ರಾಜಕಾರಣಕ್ಕೆ ಅವಕಾಶವಿಲ್ಲ. ಪಕ್ಷದಲ್ಲೇ ಇದ್ದು ಪಕ್ಷಕ್ಕೆ ದುಡಿಯುವವರಿಗೆ ಗೌರವ, ಅಧಿಕಾರ ದೊರೆಯಲಿದೆ ಎಂದು ಹೇಳಿದರು.
ಶಾಸಕ ಹಂಪಯ್ಯ ನಾಯಕ ಮಾತನಾಡಿ, ಒಂದೇ ವರ್ಷದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ವಲಸೆ ಹೋಗುವವರಿಂದ ಕ್ಷೇತ್ರಕ್ಕೆ ಯಾವುದೇ ಲಾಭವಾಗದು. ಕಳೆದ 4 ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಶಾಸಕ ವೆಂಕಟೇಶ ನಾಯಕರ ಸುಪುತ್ರ ಬಿ.ವಿ. ನಾಯಕ ಸನ್ನಡತೆಯ ವ್ಯಕ್ತಿಯಾಗಿದ್ದು, ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಎ. ಪಾಪಾರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ, ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವದುರ್ಗ ಶಾಸಕ ವೆಂಕಟೇಶ ನಾಯಕ, ಮಾಜಿ ಎಂಲ್ಸಿ ಬಸವರಾಜ ಪಾಟೀಲ್ ಇಟಗಿ, ಮಾಜಿ ಶಾಸಕ ರಾಜಾರಾಯಪ್ಪ ನಾಯಕ ಇದ್ದರು. ಬಿಎಸ್ಆರ್ ಕಾಂಗ್ರೆಸ್ ಮುಖಂಡ ಬಸನಗೌಡ ದದ್ದಲ ಈ ವೇಳೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು.