ಬೆಂಕಿ ಅವಘಡ: 5 ಲಕ್ಷ ಹಾನಿ
ಸಿಂಧನೂರು: ತಾಲೂಕಿನ ಮುಚ್ಚಳ್ಳ ಕ್ಯಾಂಪ್ನಲ್ಲಿ ಭಾನುವಾರ ಬೆಳಗ್ಗೆ 8.30ರ ಸುಮಾರಿಗೆ ಶ್ರೀನಿವಾಸ ಎಂಬುವರ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ಸಿಲೆಂಡರ್ ಸ್ಪೋಟಗೊಂಡು ಪಕ್ಕದ ಎರಡು ಗುಡಿಸಲು ಸೇರಿದಂತೆ ಒಟ್ಟು ಮೂರು ಗುಡಿಸಲುಗಳು ಸುಟ್ಟು ಸುಮಾರು 5 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ. ಶ್ರೀನಿವಾಸ ಅವರ ಮನೆಯಲ್ಲಿ ರೊಟ್ಟಿ ಮಾಡಿದ ನಂತರ ಸರಿಯಾಗಿ ಕಟ್ಟಿಗೆ ಒಲೆಯನ್ನು ಆರಿಸದೆ ಹೋಗಿದ್ದರಿಂದ ಕಿಡಿಯೊಂದು ಗುಡಿಸಲಿನ ಆಪಿಗೆ ತಾಗಿ ಬೆಂಕಿ ಹೊತ್ತಿಕೊಂಡಿತು. ಮನೆಯಲ್ಲಿ ಗ್ಯಾಸ್ ಸಿಲೆಂಡರ್ಗೆ ಬೆಂಕಿ ತಗುಲಿ ಸ್ಪೋಟಗೊಂಡು ಭಾರೀ ಶಬ್ದ ಮಾಡಿತು. ಇದೇ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿ ಸುಬ್ಬಾರಾವ್, ಗೋಪಿ ಎನ್ನುವರ ಗುಡಿಸಲುಗಳಿಗೂ ತಾಗಿತು. ಅಲ್ಲದೇ ಮೂರು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿದ್ದು, 10 ಎಮ್ಮೆಗಳು ಗಾಯಗೊಂಡಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವಲ್ಲಿ ಹರಸಾಹಸ ಮಾಡಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಲ ದಿನಾಚರಣೆ
ರಾಯಚೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯ ಪ್ರಾದೇಶಿಕ ಕಚೇರಿ ಮತ್ತು ತಾಲೂಕಿನ ಯರಮರಸ್ ಕ್ಯಾಂಪಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ವಿಶ್ವ ಜಲ ದಿನಾಚರಿಸಲಾಯಿತು. ಪ್ರೌಢಶಾಲೆಯ ಶಿಕ್ಷಕ ಬಸಪ್ಪ ಗದ್ದಿ ಮಾತನಾಡಿ, ನೀರಿನ ಸದುಪಯೋಗದ ಬಗ್ಗೆ ಕಾಳಜಿವಹಿಸಬೇಕು. ಭೂಮಿಯ ಮೇಲೆ ಕೇವಲ ಶೇ.3ರಷ್ಟು ಮಾತ್ರ ಸೇವನೆಗೆ ಯೋಗ್ಯ ನೀರು ಲಭ್ಯವಿದೆ. ಆದ್ದರಿಂದ ನೀರಿನ ಸದ್ಬಳಕೆ ಮಾಡುವಂತೆ ಮನವಿ ಮಾಡಿದರು. ಮಂಡಳಿಯ ಯೋಜನಾ ಸಹಾಯಕ ಮಹ್ಮದ ಇದ್ರಿಸ್ ಮಾತನಾಡಿದರು. ಶಿವಕುಮಾರ ಗೂಂಗೆ, ಮುಖ್ಯಗುರು ರಾಮಯ್ಯ ಮಾತನಾಡಿದರು. ವಿಜಯಕುಮಾರ, ಸೈಯದ ಸಿರಾಜ್ ಹುಸೇನ್, ಬಾಬು ಕೃಷ್ಣಮೂರ್ತಿ ಇದ್ದರು.
ದತ್ತಿ ಉಪನ್ಯಾಸ ಇಂದು
ಸಿಂಧನೂರು: ನಗರದ ಶಾರದಾ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಮಾ. 24ರಂದು ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕ.ಸಾ.ಪ. ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ಶಾರದಾ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ಅಕ್ಕಮಹಾದೇವಿ ಎನ್. ಶಿವನಾಗಪ್ಪ ಉದ್ಘಾಟಿಸುವರು. ಶಾರದಾ ಮಹಿಳಾ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಬಸವರಾಜ ಬಾದರ್ಲಿ ಅಧ್ಯಕ್ಷತೆ ವಹಿಸುವರು. ದಿವಂಗತ ಬಸಪ್ಪ ಪಿ.ಗಿರ್ದಾವರ ಸ್ಮಾರಕ ದತ್ತಿಯ ಉಪನ್ಯಾಸವನ್ನು ಕೋಮು ಸೌಹಾರ್ದತೆ ವಿಷಯ ಕುರಿತು ಅಂಬಾಮಠ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಸಂಗಮೇಶ ಬಿ. ಕೋಟೆ ಉಪನ್ಯಾಸ ಮಂಡಿಸಲಿದ್ದಾರೆ. ದತ್ತಿ ದಾನಿಗಳಾದ ನ್ಯಾಯವಾದಿ ನಾಗರಾಜ್, ಬಹುಮಾನ ವಿತರಕರಾಗಿ ಸುಮಂಗಲಾ ನಾಗರಾಜ್ ಭಾಗವಹಿಸಲಿದ್ದಾರೆ. ಜಿಲ್ಲಾ ಕಸಾಪ ಗೌರವಾಧ್ಯಕ್ಷ ಎಸ್. ಶರಣೇಗೌಡ, ಗೌರವ ಕಾರ್ಯದರ್ಶಿ ದೇವೇಂದ್ರಗೌಡ ಭಾಗವಹಿಸಲಿದ್ದಾರೆ.
ಮಂತ್ರಾಲಯ ಶ್ರೀಗಳ ಆಪ್ತಕಾರ್ಯದರ್ಶಿ ನೇಮಕ
ರಾಯಚೂರು: ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳ ಆಪ್ತ ಕಾರ್ಯದರ್ಶಿಯಾಗಿ ಸುಯಮೀಂದ್ರಾಚಾರ್ಯ ನೇಮಕಗೊಂಡಿದ್ದಾರೆ. ಈ ಕುರಿತು ಶನಿವಾರ ಸುಯತೀಂದ್ರತೀರ್ಥರ ಉತ್ತರಾಧನೆಯ ದಿನವಾದ ಶನಿವಾರ ಸುಬುಧೇಂದ್ರತೀರ್ಥರು ನೇಮಕಾತಿ ಆದೇಶ ಪತ್ರವನ್ನು ಸುಯಮೀಂದ್ರಾಚಾರ್ ಅವರಿಗೆ ನೀಡಿ ಆಶೀರ್ವದಿಸಿದರು. ಈ ಹಿಂದೆ ಸುಯಮೀಂದ್ರಾಚಾರ್ ಅವರು ಪೀಠಾಧಿಪತಿಗಳಾಗಿದ್ದ ಸುಯತೀಂದ್ರತೀರ್ಥರ ಹೆಚ್ಚುವರಿ ಆಪ್ತಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು.
ಕವಿಗಳು ಶ್ರೇಷ್ಠರೆಂಬ ಭ್ರಮನಿರಸನದಿಂದ ಹೊರಬನ್ನಿ: ಅಬ್ಬಾಸ್
ಲಿಂಗಸ್ಗೂರು: ಕವಿಗಳು ಶ್ರೇಷ್ಠರೆಂಬ ಭ್ರಮನಿರಸನದಿಂದ ಹೊರ ಬಂದು ಯುವ ಕವಿಗಳಿಗೆ ಪ್ರೋತ್ಸಾಹ ನೀಡುವತ್ತ ಗಮನ ಹರಿಸಬೇಕೆಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಪ್ರೊ. ಅಬ್ಬಾಸ್ ಮೇಲಿನಮನಿ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕನ್ನಡ ಸಾಹಿತ್ಯ ಸಂಘದಿಂದ ಹಮ್ಮಿಕೊಂಡಿದ್ದ ಕಾವ್ಯ ಕಮ್ಮಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೆಲ ಹಿರಿಯ ಕವಿಗಳು ತಾವು ಬರೆದ ಕವನವೇ ಶ್ರೇಷ್ಠ, ಬೇರೆ ಕವಿಗಳು ರಚಿಸಿದ ಕೃತಿಗಳು ಕೀಳಾಗಿ ಕಾಣುತ್ತಿದ್ದು, ಇದರಿಂದ ಕಾವ್ಯ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಯುವ ಕವಿಗಳಿಗೆ ಪ್ರೋತ್ಸಾಹವಿಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹಳೆಗನ್ನಡ ಕೇವಲ ಪರೀಕ್ಷೆಗಾಗಿ ಅಭ್ಯಾಸ ಮಾಡದೆ ಕಾವ್ಯ ವಿಸ್ತರಣೆಗೆ ಬಳಸಿಕೊಂಡು ಹಿಂದಿನ ಕವಿಗಳ ಪರಂಪರೆ ಉಳಿಸಿ ಬೆಳೆಸಬೇಕಿದೆ. ಜನಪದ ಸಾಹಿತ್ಯವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಿದರೆ ಅದರ ಆಳ ತಿಳಿಯಲಿದೆ. ಪ್ರೀತಿಯಿಂದ ದ್ವೇಷ ಗೆಲ್ಲುವಂತಹ ಕವನ ಅವಶ್ಯ ಎಂದರು. ಗಜಲ್ ಕವಿ ಅಲ್ಲಾಗಿರಿರಾಜ, ಕವಿಗಳಾದ ಪ್ರಮೋದ ತುರ್ವಿಹಾಳ, ಸಿ. ಶರಣಪ್ಪ, ಜಿ.ವಿ. ಕೆಂಚನಗುಡ್ಡ, ವೆಂಕೋಬ ಬಿರಾದಾರ್, ಪ್ರಾಚಾರ್ಯ ಡಾ. ಸಿ.ಬಿ. ಚಿಲ್ಕಾರಾಗಿ, ಮಹಾಂತಗೌಡ ಪಾಟೀಲ್, ಡಾ. ಮಹಾದೇವಪ್ಪ ನಾಗರಹಾಳ, ಶಿವಾನಂದ ನರಹಟ್ಟಿ ಇದ್ದರು.
ಎನ್ನೆಸ್ಸೆಸ್ ಶಿಬಿರ
ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಮಾ.24ರಿಂದ ಮಾ.30ರವರೆಗೆ ನಡೆಯಲಿದೆ. ತಾಲೂಕಿನ ಬೋಳಮಾನದೊಡ್ಡಿ ಗ್ರಾಮದಲ್ಲಿ ಶಿಕ್ಷಣ ಮುಖಾಂತರ ಸೇವೆ ಎಂಬ ಘೋಷಣೆಯೊಂದಿಗೆ ಎನ್ನೆಸ್ಸೆಸ್ ಶಿಬಿರವು ನಡೆಯಲಿದ್ದು, ಮಾ.24ರಂದು ಶಿಬಿರಕ್ಕೆ ಹಿರಿಯ ಪತ್ರಕರ್ತ ಬಸವರಾಜಸ್ವಾಮಿ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಮಹಿಪಾಲರೆಡ್ಡಿ ಪಾಟೀಲ್ ವಹಿಸಲಿದ್ದಾರೆ.
ಡಿಕ್ಕಿ; ಒಬ್ಬನ ಸಾವು
ರಾಯಚೂರು: ಮಾನವಿ ತಾಲೂಕಿನ ಬೈಲ್ ಮರ್ಚೆಡ್ ಮೊಪೆಡ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಸವಾರ ಸಾವಿಗೀಡಾಗಿದ್ದಾನೆ. ಮೃತನನ್ನು ದೇವೇಶಪ್ಪ ಎಂದು ಗುರುತಿಸಲಾಗಿದೆ. ಈತ ಟಿವಿಎಸ್ ಮೊಪೆಡ್ನಲ್ಲಿ ಸಾಗುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ಎದುರಿನಿಂದ ಬಂದ ಬೈಕ್ ಡಿಕ್ಕಿಯಾಗಿದ್ದರಿಂದ ಕೆಳಗೆ ಬಿದ್ದು, ತಲೆಗೆ ಪೆಟ್ಟಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಾನವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಹಿಳೆ ಸಾವು
ರಾಯಚೂರು: ದೇವದುರ್ಗ ಪಟ್ಟಣದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ ಸಾವಿಗೀಡಾಗಿದ್ದಾಳೆ. ಮೃತಳನ್ನು ಗುರುಬಾಯಿ ಎಂದು ಗುರುತಿಸಲಾಗಿದೆ. ದೇವದುರ್ಗ ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ರಾತ್ರಿ ವೇಳೆ ಆಕೆ ಬಹಿರ್ದೆಸೆಗೆ ತೆರಳಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಆಕೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ದೇವದುರ್ಗ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.