ಸಂಸ್ಕೃತಿ ಹಳ್ಳಿಗಳಲ್ಲಿದೆ: ಸೇಡಂ
ಕ.ಪ್ರ. ವಾರ್ತೆ ಶಹಾಬಾದ್ ಮಾ.23
ನಮ್ಮ ದೇಶದಲ್ಲಿ ಹಳ್ಳಿಯ ಜನ ನಗರವನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಹಳ್ಳಿಯಲ್ಲಿರುವ ಮಾನವೀಯತೆ, ದೇಶದ ಧರ್ಮ, ಸಂಸ್ಕೃತಿ ನಗರಗಳಲ್ಲಿ ಸಿಗುವುದು ಸಾಧ್ಯವಿಲ್ಲ. ಭಾರತ ದೇಶದ ನಿಜವಾದ ಆಸ್ತಿ ಹಳ್ಳಿಗಳಲ್ಲಿದೆ ಎಂದು ರಾಜ್ಯ ಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.
ಅವರು ನಗರದ ಶರಣಬಸವೇಶ್ವರ ಜ್ಞಾನವಿಕಾಸ ಪೀಠದ ಶಾಲಾ ಕಾಲೇಜುಗಳ ಆವರಣದಲ್ಲಿ 21 ದಿನಗಳ ಜ್ಞಾನ ಯೋಗಾಶ್ರವುದ ಸಿದ್ದೇಶ್ವರ ಸ್ವಾಮಿಗಳ ಅಧ್ಯಾತ್ಮ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ನಗರಗಳಲ್ಲಿಯ ಹೊಲಸು, ಕಸ, ಕುಡಿಯುವ ನೀರಿನ ಸಮಸ್ಯೆ, ಕೊಳಚೆಯಲ್ಲಿ ವಾಸಿಸುವ ಜೀವನಕ್ಕಿಂತ ನಮ್ಮ ಗ್ರಾಮಗಳಲ್ಲಿ ನೂರು ಪಟ್ಟು ಪರಿಶುದ್ಧ ವಾತಾವರಣವಿದೆ. ಬದುಕಿನಲ್ಲಿ ನೆಮ್ಮದಿ ಬೇಕೆಂದರೆ ಹಳ್ಳಿಗಳಲ್ಲಿ ಇರಬೇಕು ಎಂದು ಹೇಳಿದರು.
ಡಾ. ಶಿವಾನಂದ ಸ್ವಾಮಿ ಸೊನ್ನರವರು ಮಾತನಾಡಿದರು. ತ್ರಿಕೋಟಾದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು, ಸಿದ್ದೇಶ್ವರ ಅಧ್ಯಾತ್ಮ ಪ್ರವಚನ ಸಮಿತಿ ಗೌರವಾಧ್ಯಕ್ಷ ಮುಗುಳನಾಗಾವದ ಅಭಿನವ ಸಿದ್ದಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು.
ಗುವಿದಿಂದ ಗೌರವ ಡಾಕ್ಟರೇಟ್ ಪಡೆದ ಡಾ.ಶಿವಾನಂದ ಮಹಾಸ್ವಾಮಿಗಳನ್ನು ಸನ್ಮಾನಿಸಲಾಯಿತು. ಧರ್ಮ ಜೀವನ, ಸದಾಚಾರ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಸಮಿತಿಯ ಕಾರ್ಯಾಧ್ಯಕ್ಷ ಹಣಮಂತರಾವ ಇಂಗಿನಶೆಟ್ಟಿ, ವಿಜಯಕುಮಾರ ಮುಟ್ಟತ್ತಿ, ಶರಣು ಬಿರಾಳ, ಎಸ್. ಆರ್, ಗುರಾಗೋಳ, ನಿಂಗಪ್ಪ ಕಾರ್ಗಿ, ಸಂತೋಷಕುಮಾರ ಇಂಗಿನಶೆಟ್ಟಿ ಡಾ.ಎಸ್. ಜಿ ಕೋರಿ. ಇತರರು ಪಾಲ್ಗೊಂಡಿದ್ದರು.