ಸದೃಢ ಸಮಾಜಕ್ಕಾಗಿ ಶರಣರ ತತ್ವಾದರ್ಶ ಪಾಲಿಸಿ: ಭಾಲ್ಕಿಶ್ರೀ
ಕ.ಪ್ರ. ವಾರ್ತೆ ಜೇವರ್ಗಿ ಮಾ.23
ಸಮಾಜದಲ್ಲಿನ ಪ್ರತಿಯೊಬ್ಬರು ಬಸವಾದಿ ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಿಸುವುದು ಅಗತ್ಯ ಎಂದು ಭಾಲ್ಕಿ ಸಂಸ್ಥಾನ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು ಅಭಿಪ್ರಾಯಪಟ್ಟರು.
ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾದಿ ಶಿವಶರಣರು ಕೃಷಿ ಕಾಯಕದೊಂದಿಗೆ ಅಧ್ಯಾತ್ಮವನ್ನು ಸಮಾಜದಲ್ಲಿ ಬಿತ್ತಿದ್ದಾರೆ. ನುಡಿದಂತೆ ನಡೆಯುವುದೇ ಶರಣರ ಸಿದ್ಧಾಂತ. ಶರಣರ ಸಿದ್ಧಾಂತಗಳು ಹಾಗೂ ಕಾಯಕ ನಿಷ್ಠೆಯನ್ನು ಇಂದಿನ ಯುವ ಪೀಳಿಗೆ ಅರಿತುಕೊಂಡಾಗ ಮಾತ್ರ ಅವರಿಂದ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಭಾಲ್ಕಿ ಶ್ರೀಗಳು ಹೇಳಿದರು. ಸಿಂದಗಿ ಸಾರಂಗ ಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ಲಾಘನೆ: ಶರಣ ಸಂಸ್ಕೃತಿ ಉತ್ಸವದ ಸರ್ವಾಧ್ಯಕ್ಷರೂ ಆದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಎ. ಪಾಟೀಲ್ ಮಾತನಾಡಿ, ಸಗರನಾಡಿನ ಪುಣ್ಯಭೂಮಿ ಜೇವರ್ಗಿ ತಾಲೂಕಿನಲ್ಲಿ ಅನೇಕ ಶರಣರು, ಸಂತರು, ವಚನಕಾರರು, ದಾರ್ಶನಿಕರು, ತತ್ವಪದಕಾರರು ಆಗಿಹೋಗಿದ್ದಾರೆ. ಇಂಥಹ ಪುಣ್ಯನೆಲದಲ್ಲಿ ಶರಣರ ಜೀವನಾದರ್ಶಗಳನ್ನು ಬಿತ್ತುವ ಈ ಉತ್ಸವ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷ ಚಂದ್ರಕಾಂತ ಬೆಲ್ಲದ್ ಮಾತನಾಡಿ, ಸತ್ಯ ಶುದ್ಧ ಕಾಯಕದಿಂದ ಸಮಾಜದ ಬೆಳವಣಿಗೆ ಸಾಧ್ಯ. ಆ ನಿಟ್ಟಿನಲ್ಲಿ ಇಂದಿನ ಯುವಕರು ಕಾಯಕಕ್ಕೆ ಹೆಚ್ಚಿನ ಒತ್ತು ನೀಡಬೇಕು ಸಲಹೆ ನೀಡಿದ ಅವರು, ರೈತ ನಿಜವಾದ ಕಾಯಕಯೋಗಿ. ಸತ್ಯ, ಶುದ್ಧ ಕಾಯಕ ಮಾಡುವ ವ್ಯಕ್ತಿಗಳನ್ನು ಗುರುತಿಸುವ ಕಾರ್ಯ ನಡೆಯಬೇಕಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ರಂಜಾನ್ ದರ್ಗಾ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಅಪ್ಪಾರಾವ್ ಅಕ್ಕೋಣಿ, ಕಾರ್ಯಾಧ್ಯಕ್ಷ ಸದಾನಂದ ಶಿವಳ್ಳಿ, ಸ್ವಾಗತ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ತಾಲೂಕು ಅಧ್ಯಕ್ಷ ಎಸ್.ಕೆ. ಬಿರಾದಾರ, ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಸಾಹು ಗೋಗಿ, ಬಸವರಾಜ ಪಾಟೀಲ್ ನರಿಬೋಳ, ಸೋಮಶೇಖರ ಪಾಟೀಲ್, ಸಂಗಣ್ಣಗೌಡ ಗಂವ್ಹಾರ್, ನಾಟಕಕಾರ ಎಲ್.ಬಿ.ಕೆ.ಆಲ್ದಾಳ, ಸಾಹಿತಿ ಕೆ.ಎಂ.ಮಠ ಇತರರು ಆಗಮಿಸಿದ್ದರು.