ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಂಗಭೂಮಿ 'ರೇಣುಕಾ' ಮಹಾತ್ಮೆ!

Srinivasa Murthy VN
Updated On : 25 Mar 2014, 11:04 am

-ಅಮರೇಶಸ್ವಾಮಿ ಬಲ್ಲಟಗಿ
ಕ.ಪ್ರ. ವಾರ್ತೆ ಲಿಂಗಸ್ಗೂರು ಮಾ.24
ಉತ್ತರ ಕರ್ನಾಟಕ ಭಾಗದಲ್ಲಿ ರೇಣುಕಾ ಅಕ್ಕಲಕೋಟೆ ಎಂಬ ಹೆಸರು ಕೇಳಿದರೆ ಸಾಕು ವಯೋವೃದ್ಧರಲ್ಲಿಯೂ ಮಿಂಚಿನ ಸಂಚಲನ ಮೂಡಿಸುತ್ತದೆ. ಇನ್ನು ಈ ಭಾಗದಲ್ಲಿ ಬರುವ ನಾಟಕದಲ್ಲಿ ರೇಣುಕಾಳ ನೃತ್ಯ ಇದೆ ಎಂದರೆ ಸಾಕು ಯುವಕರು ಇವಳ ನೃತ್ಯ ನೋಡಲು ಮುಗಿಬೀಳುತ್ತಾರೆ. ಹೀಗೆ ಹತ್ತಾರು ನಾಟಕ ಕಂಪನಿಗಳಲ್ಲಿ ನೃತ್ಯ ಮಾಡುತ್ತಾ ರಸಿಕರ ಮನ ಸೂರೆಗೊಳಿಸುತ್ತಾ ಸಾಗಿದ ರಂಗನಾಯಕಿ ರೇಣುಕಾ ಅಕ್ಕಲಕೋಟೆ ಸ್ವಾಮಿ ಸಮರ್ಥ ಕಲಾ ಸಂಘ ಎಂಬ ಸ್ವಂತ ನಾಟಕ ಕಂಪನಿ ಕಟ್ಟಿ ರಂಗ ಭೂಮಿಯ ಅಪ್ರತಿಮ ಕಲಾವಿದೆ ಎನ್ನಿಸಿಕೊಂಡಿದ್ದಾಳೆ.
ಲಿಂಗಸ್ಗೂರು ತಾಲೂಕಿನ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಪ್ರತಿ ವರ್ಷ ಮೂರ್ನಾಲ್ಕು ನಾಟಕ ಕಂಪನಿಗಳು ಬರುತ್ತವೆ. ಅದರಲ್ಲಿ ರೇಣುಕಾ ಅಕ್ಕಲಕೋಟೆ ಅವರದ್ದೂ ಒಂದಾಗಿರುತ್ತದೆ. ರಂಗಭೂಮಿಯ ವೃತ್ತಿ ಕಲೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ರೇಣುಕಾ ಅಕ್ಕಲಕೋಟೆ, 50 ಜನರ ಮದುವೆ ಮಾಡಬಹುದು, ಆದರೆ ಒಂದು ನಾಟಕ ಕಂಪನಿ ನಡೆಸುವುದು ಇಂದಿನ ದಿನಮಾನಗಳಲ್ಲಿ ತುಂಬಾ ಕಷ್ಟದ ಕೆಲಸವೆಂದು ತಮ್ಮ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ.
ವಿವಾಹ: ಮೂಲತಃ ಮಹಾರಾಷ್ಟ ಭಾಗದ ಅಕ್ಕಲಕೋಟೆಯವರಾದ ರೇಣುಕಾರ ತಾಯಿ ಶಾಕುಂತಲಾ ನಾಟ್ಯ ಕಲಾವಿದೆಯಾಗಿದ್ದರು. ಲೋಕೋಪಯೋಗಿ ಇಲಾಖೆ ನೌಕರ ಮಲ್ಲಿಕಾರ್ಜುನ ಶಾಕುಂತಲಾರ ಕಲೆಗೆ ಮನಸೋತು ವಿವಾಹವಾದರು. ಒಮ್ಮೆ ಯಾದಗೀರ ಜಿಲ್ಲೆಯ ನಾಲ್ವಾರ್ ಗ್ರಾಮದಲ್ಲಿ ರೇಣುಕಾಚಾರ್ಯ ನಾಟ್ಯ ಸಂಘದಲ್ಲಿ ಶಾಕುಂತಲಾ ನಟಿಸಲು ಆಗಮಿಸಿದ ವೇಳೆ 1978 ಏಪ್ರಿಲ್ 1 ರಂದು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ತಾಯಿ ತಾನು ನಟಿಸುವ ಕಂಪನಿ ಹೆಸರಿನಿಂದ ಮಗುವಿಗೆ ರೇಣುಕಾ ಎಂಬ ನಾಮಕರಣ ಮಾಡಲಾಯಿತು.
ತಾಯಿಯ ನಟನೆಯ ಅಲೆಮಾರಿ ಬದುಕಿನಲ್ಲಿ ಮರಾಠಿ ಭಾಷೆಯಲ್ಲಿ 4ನೇ ತರಗತಿ ಅಭ್ಯಾಸ ಮಾಡಿದ ರೇಣುಕಾ, ತಾಯಿಯ ಪ್ರೋತ್ಸಾಹದಿಂದ ಅಭಿನಯಾಸಕ್ತಿ ಮೂಡಿಸಿಕೊಂಡದ್ದರು. ತಂದೆ ಮಲ್ಲಿಕಾರ್ಜುನರ ಅಕಾಲಿಕ ಮರಣ, ಮನೆಯ ದೊಡ್ಡದಾದ ಸಂಸಾರ, ಆರ್ಥಿಕ ಪರಿಸ್ಥಿತಿ ಗಂಭೀರಗೊಂಡ ಜಂಜಾಟದಿಂದ ಅನಿವಾರ್ಯವಾಗಿ ರಂಗಭೂಮಿ ಕಡೆಗೆ ವಾಲಿದರು. ತನ್ನ 10ನೇ ವಯಸ್ಸಿನಲ್ಲಿ ಮೈಂದರಗಿ ವಿಶ್ವರಾಧ್ಯ ನಾಟಕ ಕಂಪನಿಯಲ್ಲಿ ಪ್ರಥಮ ಬಾರಿಕೆ ನೃತ್ಯ ಮಾಡಿದರು. ಅಂದಿನಿಂದ ತನ್ನ ಕಲೆ ಮತ್ತು ಚೆಲುವಿಕೆಯಿಂದ ಪ್ರೇಕ್ಷಕರ ಮನಸೆಳೆಯುತ್ತಾ ನೃತ್ಯ, ಅಭಿನಯದ ಮೂಲಕ ಹೆಸರು ಗಳಿಸುತ್ತಾ ಮುನ್ನಡೆದರು. ಅಲ್ಲದೆ 8 ಜನ ಮರಾಠಾ ನಟಿಯರು ಜೊತೆಗೂಡಿ ಒಂದು ವರ್ಷಕಾಲ ತಮಾಷಾ ನಡೆಸಿದರು.
ಕನ್ನಡದತ್ತ ಒಲವು: ಹೀಗೆ ರಂಗಭೂಮಿಯಲ್ಲಿ ಬೇಡಿಕೆ ಹೆಚ್ಚಾದಂತೆಲ್ಲ ಮರಾಠಿ ಚಿತ್ರರಂಗ ಪ್ರವೇಶಿಸಿ ದೈವಜಾಣೇಲಿಕುಣಿ, ಪ್ರೇಮ ಬಂಧನವೆಂಬ ಚಲನಚಿತ್ರಗಳಲ್ಲಿ ಅಭಿನಯಿಸಿದರು. ನಂತರ ಮರಾಠಿ ಚಿತ್ರರಂಗ ಬಿಟ್ಟು ಕನ್ನಡ ರಂಗಭೂಮಿ ಕಡೆಗೆ ಮುಖ ಮಾಡಿದರು. ಕನ್ನಡ ಓದಲು, ಬರೆಯಲು ಬಾರದಿದ್ದರೂ ಪಾತ್ರಾಭಿನಯ ಮರಾಠಿ ಭಾಷೆಯಲ್ಲಿ ಬರೆಯಿಸಿಕೊಂಡು ಅಭಿನಯಿಸಿದರು. ದೇವಿ ಮಹಾತ್ಮೆ ಚಿತ್ರದುರ್ಗ, ಮಹಾಂತೇಶ ನಾಟ್ಯ ಸಂಘ ಮೈಂದರಗಿ, ತೋಂಟದಾರ್ಯ ನಾಟ್ಯ ಸಂಘ ಮುಂಡಲಗೇರಿ ಸೇರಿದಂತೆ ಹತ್ತಾರು ನಾಟಕ ಕಂಪನಿಗಳಲ್ಲಿ ನೃತ್ಯ, ಅಭಿನಯ ಮಾಡುತ್ತಾ ಸಾಗಿದರು.
ಕೊನೆಗೆ ತನ್ನ ಮನೆಯ ಕುಲದೈವ ಸ್ವಾಮಿ ಸಮರ್ಥ ಕಲಾ ಸಂಘ ಅಕ್ಕಲಕೋಟೆ ಎಂಬ ಹೆಸರಿನಲ್ಲಿ ನಾಟಕ ಕಂಪನಿ ಹುಟ್ಟು ಹಾಕಿ 2002 ನವೆಂಬರ್ 24ರಂದು ಜೇವರ್ಗಿ ತಾಲೂಕಿನ ಆಂದೋಡ ಗ್ರಾಮದಲ್ಲಿ ಕಿವುಡ ಮಾಡಿದ ಕಿತಾಪತಿ ಎಂಬ ಸಾಮಾಜಿಕ ನಾಟಕದ ಮೂಲಕ ತನ್ನದೇ ಆದ ಸ್ವಂತ ನಾಟಕ ಕಂಪನಿಯಲ್ಲಿ ನೃತ್ಯ, ಅಭಿನಯ ಮಾಡುತ್ತಾ ಸಾಗಿದರು. ಧರ್ಮದೇವತೆ, ಚಿಕ್ಕಸೊಸೆ, ಚಿನ್ನದ ಗೊಂಬೆ, ತವರಿಗೆ ಬಾ ತಂಗಿ, ಬಸ್ ಕಂಡಕ್ಟರ್, ಲೋಫರ್ ಮಾವ ಸೂಪರ್ ಸೊಸೆ, ಗೌಡ ಮೆಚ್ಚಿದ ಹುಡುಗಿ ಹೀಗೆ ಅನೇಕ ಸಾಮಾಜಿಕ ನಾಟಕ ಪ್ರದರ್ಶನ ನೀಡುತ್ತಾ ಮುನ್ನಡೆದರು. ಅಲ್ಲದೆ ಕನ್ನಡ ಚಲನಚಿತ್ರ ರಂಗದಲ್ಲಿ ಅಭಿನಯಿಸಿದ ರೇಣುಕಾ, ಪ್ರೇತಾತ್ಮ, ಹೋಗ್ಲಿಬಿಡಿ ಸಾರ್, ಲಡ್ಡುಮುತ್ಯಾ, ಹುಂಬೇರಿ ಮೂಕ, ಹೋಳಿ, ಹೇ ಸರಸು, ಬನಶಂಕರಿ ಮಾತಾ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಸಂಬಳ: ಪ್ರಸ್ತುತ ತನ್ನ ಸ್ವಂತ ನಾಟಕ ಕಂಪನಿಯಲ್ಲಿ ಕಲಾವಿದರು, ನೌಕರರು, ಕೆಲಸಗಾರರು ಸೇರಿದಂತೆ ಸುಮಾರು 35 ಜನ ಕೆಲಸ ಮಾಡುತ್ತಿದ್ದಾರೆ. ನಾಟಕ ಪ್ರದರ್ಶನ ಇಲ್ಲದಿದ್ದರೂ ಪ್ರತಿ ತಿಂಗಳು ಅವರಿಗೆ ಸಾವಿರಾರು ರು. ಸಂಬಳ ಕೊಡಲೇಬೇಕು. ಇತ್ತೀಚಿಗೆ ನಾಟಕ ಅಕಾಡೆಮಿ ಪ್ರತಿ ವರ್ಷ ಅನುಭವಿ ಕಲಾವಿದರಿಗೆ ಪ್ರೋತ್ಸಾಹ ಧನ ನೀಡುತ್ತಿದೆ. ತಮಗೆ ಪ್ರತಿವರ್ಷ ರು. 3 ಲಕ್ಷ ನೀಡುತ್ತದೆ ಎನ್ನುತ್ತಾರೆ.
ಇಂದಿನ ಆಧುನಿಕ ಯುಗದಲ್ಲಿ ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿ ವ್ಯಾಮೋಹ ಹಾಗೂ ಚಲನಚಿತ್ರ ಮತ್ತು ದೃಶ್ಯ ಮಾಧ್ಯಮಗಳ ಹಾವಳಿಯಿಂದ ರಂಗಭೂಮಿ ಪ್ರೇಕ್ಷಕರು ಕಡಿಮೆಯಾಗಿದ್ದಾರೆ. ರಾಜ್ಯದಲ್ಲಿ ಈ ಹಿಂದೆ 80-85 ನಾಟಕ ಕಂಪನಿಗಳಿದ್ದವು. ಆದರೆ ಈಗ ಸುಮಾರು 30 ನಾಟಕ ಕಂಪನಿಗಳು ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿವೆ.
ಆದರೆ ಇದರಿಂದ ನಾಟಕ ಕಲಾವಿದರು ಧೃತಿಗೆಡಬಾರದು. ಒಂದಲ್ಲಾ ಒಂದು ದಿನ ಸಾಮಾಜಿಕ ನಾಟಕಗಳಿಗೆ ಪ್ರೇಕ್ಷಕರ ಬೇಡಿಕೆ ಹೆಚ್ಚಾಗುತ್ತದೆ. ಅಲ್ಲಿಯವರೆಗೆ ಬರುವ ಕಷ್ಟ, ನಷ್ಟಗಳನ್ನು ಧೈರ್ಯದಿಂದ ಎದುರಿಸಿ ಬರುವ ರಂಗಭೂಮಿಯ ಕಡೆಗೆ ಬರುವ ಉತ್ತಮ ದಿನಗಳನ್ನು ಕಾಯಬೇಕಿದೆ ಎಂಬ ಮಾತು ರೇಣುಕಾ ಅಕ್ಕಲಕೋಟೆಯವರದ್ದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement