ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಯಾಜುದ್ದೀನ್ ಛಾಯಾ ಚಮತ್ಕಾರ

Srinivasa Murthy VN
Updated On : 26 Mar 2014, 12:26 pm

ಕ.ಪ್ರ. ವಾರ್ತೆ ಗುಲ್ಬರ್ಗ ಮಾ.25
ಗುಲ್ಬರ್ಗದ ಕಲಾವಿದ, ಛಾಯಾಗ್ರಾಹಕ ಮೊಹ್ಮದ್ ಅಯಾಜುದ್ದೀನ್ ಪಟೇಲ್ ಇವರು ನವದೆಹಲಿಯಲ್ಲಿ ಲಲಿತ ಕಲಾ ಅಕಾಡೆಮಿ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರತಿಷ್ಠಿತ 1 ಲಕ್ಷ ಮೌಲ್ಯದ ಛಾಯಾಗ್ರಹಣದ ವಾರ್ಷಿಕ ಪುರಸ್ಕಾರ ಪಡೆದುಕೊಂಡರು. ಅಕಾಡೆಮಿಯ ಕಾರ್ಯದರ್ಶಿ ರಾಮಕೃಷ್ಣ ವೇದಾಲಾ, ಅಧ್ಯಕ್ಷ ಕೆ.ಕೆ. ಚಕ್ರವರ್ತಿ ಪುರಸ್ಕಾರ ನೀಡಿ ಗೌರವಿಸಿದರು.
ಗುಲ್ಬರ್ಗ ಛಾಯಾಗ್ರಾಹಕ ಅಯಾಜುದ್ದೀನ್ ಪಟೇಲ್ ಅವರು ಕ್ಲಿಕ್ಕಿಸಿರುವ ಬಿಜಾಪುರದ ಗೋಲ ಗುಮ್ಮಟದ ಒಳ ಚಿತ್ರಕ್ಕೆ ಈ ಪ್ರತಿಷ್ಠಿತ ಪುರಸ್ಕಾರ ದೊರಕಿದೆ. 19 ವರ್ಷಗಳ ಸುದೀರ್ಘ ಅವಧಿ ನಂತರ ಛಾಯಾಚಿತ್ರ ರಂಗಕ್ಕೆ ಈ ಪ್ರತಿಷ್ಠಿತ ಪುರಸ್ಕಾರ ದೊರಕಿದೆ. ಗಮನಾರ್ಹ ಸಂಗತಿ ಎಂದರೆ ಅಯಾಜುದ್ದೀನ್ ಪಟೇಲ್ ಹೈ- ಕ ಭಾಗದಿಂದ ಇಂತಹ ಪುರಸ್ಕಾರ ಪಡೆದುಕೊಂಡ ಮೊದಲ ಕಲಾವಿದರು.
ಪ್ರದರ್ಶನಕ್ಕೆ ಆಯ್ಕೆ: ಈ ಪುರಸ್ಕಾರಕ್ಕಾಗಿ 6, 200 ಪ್ರವೇಶಗಳು ಬಂದಿದ್ದವು. 168 ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆಮಾಡಲಾಗಿತ್ತು. 10 ಕಲಾವಿದರ ತಂಡ ಅಕಾಡೆಮಿಯ ಪ್ರಥಮ ಪುರಸ್ಕಾರ ಆಯ್ಕೆ ಮಾಡಿದ್ದು, ಅದು ಅಯಾಜುದ್ದೀನ್ ಪಾಲಾಗಿದೆ. ಈ ಬಾರಿಯ ಪುರಸ್ಕಾರಕ್ಕೆ ಆಯ್ಕೆಯಾದ ಏಕೈಕ ಕಲಾವಿದ- ಛಾಯಾಗ್ರಾಹಕ ಅಯಾಜುದ್ದೀನ್ ಪಟೇಲ್ ಆಗಿದ್ದಾರೆ.
ಗೋಲಗುಮ್ಮಟದ ಒಳನೋಟ ರಮಣೀಯ: ಬಿಜಾಪುರ ಪರಂಪರೆ ಹೆಸರಿನ ಗೋಲಗುಂಬಜ್ ಒಳನೋಟ ಸೆರೆ ಹಿಡಿದಿರುವ ಗುಲ್ಬರ್ಗದ ಛಾಯಾಗ್ರಾಹಕ ಮೊಹ್ಮದ್ ಅಯಾಜುದ್ದೀನ್ ಪಟೇಲ್ ಅಲ್ಲಿ ತಮ್ಮ ಕೆಮೆರಾ ನೋಟದ ಸಾಮರ್ಥ್ಯ ಹಾಗೂ ನೆರಳು- ಬೆಳಕಿನ ಕೌಶಲ್ಯಗಳನ್ನು ಬಲು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಗುಂಬಜದಲ್ಲಿರುವ ಸುಲ್ತಾನ ಮೊಹ್ಮದ್ ಅದಿಲಶಾಹ, ಆತನ ಹಿರಿಯ- ಕಿರಿಯ ಪತ್ನಿಯರಾದ ಔರಸ್ ಬೀಬಿ ಹಾಗೂ ಇತರರು, ಪುತ್ರ ಅಲಿ ಅದಿಲ್ ಶಾಹ 2, ಅದಿಲ್ ಶಾಹಿಯ ಪ್ರೀತಿಯ ಹಿಂದು ಪರಂಪರೆಯ ನೃತ್ಯನಾರಿ ರಂಭಾ, ಆಕೆಯ ಪುತ್ರಿಯರ ಸಮಾಧಿಗಳೆಲ್ಲವೂ ಫೋಟೋದಲ್ಲಿ ಸ್ಪಷ್ಟವಾಗಿವೆ. 2014 ರ ಛಾಯಾಚಿತ್ರ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪುರಸ್ಕಾರಕ್ಕೆ ಗುಲ್ಬರ್ಗದ ಅಯಾಜುದ್ದೀನ್ ಪಟೇಲ್ ಒಬ್ಬರೇ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವುದು ವಿಶೇಷವಾಗಿದೆ.
ಅಯಾಜುದ್ದೀನ್ ಪಟೇಲ್ ಫೈನ್‌ಆರ್ಟ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಈಗಾಗಲೇ ದೇಶ- ವಿದೇಶಗಳಲ್ಲಿ ಅನೇಕ ಏಕವ್ಯಕ್ತಿ ಕಲಾಪ್ರದರ್ಶನಗಳನ್ನು ನಡೆಸಿದ್ದಾರೆ. ಗ್ಲೋಬಲ್ ಫೌಂಡೇಷನ್‌ನಿಂದ ಭಾರತ ಗೌರವ ರತ್ನ ಪುರಸ್ಕಾರ ಸಹ ಪಡೆದಿರುವ ಅಯಾಜುದ್ದೀನ್ ಮಾ.19 ರಂದು ದೆಹಲಿಯ ರವೀಂದ್ರ ಭವನದಲ್ಲಿ ನಡೆದ ಲಲಿತ ಕಲಾ ಅಕಾಡೆಮಿ ಸಮಾರಂಭದಲ್ಲಿ ಪುರಸ್ಕಾರ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement